ಸೋಮವಾರಪೇಟೆ, ಆ.7: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗೂಂಡಾ ಕಾಯ್ದೆ ದಾಖಲಾಗಿದ್ದ ಪಟ್ಟಣದ ಈರ್ವರು ರೌಡಿಶೀಟರ್‍ಗಳನ್ನು ಜಿಲ್ಲಾ ದಂಡಾಧಿಕಾರಿಗಳ ಆದೇಶದ ಮೇರೆಗೆ ಚಾಮರಾಜನಗರದ ಜೈಲಿಗೆ ಸ್ಥಳಾಂತರಿಸಲಾಗಿದೆ.

ಪಟ್ಟಣದ ಚೌಡೇಶ್ವರಿ ಬ್ಲಾಕ್ ನಿವಾಸಿ ಹುಮಾಯೂನ್ ಬೇಗ್ ಎಂಬವರ ಮಕ್ಕಳಾದ ಕರೀಂಬೇಗ್ ಅಲಿಯಾಸ್ ಇಮ್ರಾನ್, ಅಜೀಂಬೇಗ್ ಅಲಿಯಾಸ್ ಅಡ್ಡು ಎಂಬಿಬ್ಬರನ್ನು ಬಂಧಿಸಿ ಚಾಮರಾಜನಗರ ಜಿಲ್ಲೆಯ ಬಂಧಿಖಾನೆಗೆ ರವಾನಿಸಲಾಗಿದೆ.

ಕರೀಂ ಬೇಗ್ ಮತ್ತು ಅಜೀಂ ಬೇಗ್ ಅವರುಗಳೀರ್ವರೂ ರೌಡಿಶೀಟರ್‍ಗಳಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿವೆ. ಕರೀಂಬೇಗ್ ಮೇಲೆ 13ಕ್ಕೂ ಹೆಚ್ಚು ಹಾಗೂ ಅಜೀಂಬೇಗ್ ಮೇಲೆ 10ಕ್ಕೂ ಹೆಚ್ಚಿನ ದೂರುಗಳು ದಾಖಲಾಗಿವೆ.

ಕಳೆದ ರಂಜಾನ್ ಹಬ್ಬದಂದು ಗಾಂಧಿನಗರದ ಒಕ್ಕಲಿಗರ ಸಂಘದ ಮುಂಭಾಗದ ರಸ್ತೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳುತ್ತಿದ್ದ ಗುಂಪೊಂದು, ಕಾರಿನಲ್ಲಿ ಹಾರ್ನ್ ಮಾಡಿದ ಕಾರಣವೊಡ್ಡಿ, ಗಾಂಧಿನಗರದ ನಿವಾಸಿಯೊಬ್ಬರÀ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಜಾತಿನಿಂದನೆ ಮಾಡಿ, ಕಾರಿನ ಗಾಜು ಪುಡಿಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಟ್ಟಣದ ಠಾಣೆಯಲ್ಲಿ ಇವರುಗಳ ವಿರುದ್ದ ಇತ್ತೀಚೆಗಷ್ಟೇ ಮೊಕದ್ದಮೆ ದಾಖಲಾಗಿತ್ತು.

ಸೋಮವಾರಪೇಟೆಗೆ ಆಗಮಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಗಳ ಬಂಧನಕ್ಕೆ ಡಿವೈಎಸ್‍ಪಿ ನೇತೃತ್ವದ ತಂಡವನ್ನು ರಚಿಸಿದ್ದರು. ನಂತರ ಬಂಧನಕ್ಕೊಳಗಾಗಿ ಜಿಲ್ಲಾ ಕಾರಾಗೃಹದಲ್ಲಿದ್ದ ಆರೋಪಿಗಳು, ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದರು.

ಇವರುಗಳನ್ನು ಇದೀಗ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಮೇರೆ ಚಾಮರಾಜನಗರದ ಜೈಲಿಗೆ ಕಳುಹಿಸಲಾಗಿದೆ.