ಸುಂಟಿಕೊಪ್ಪ, ಆ.7: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಆರ್ಭಟದಿಂದ ಮನೆ ಕುಸಿದು ಬಿದ್ದಿದ್ದು ವಾಹನದಲ್ಲಿ ಚಲಿಸುತ್ತಿದ್ದವರ ಮೇಲೆ ಮರ ಬಿದ್ದು ಗಾಯವುಂಟಾದ ಘಟನೆಗಳು ಸಂಭವಿಸಿದೆ.

ಮಾದಾಪುರ ನಂದಿಮೊಟ್ಟೆ ಕಿರುದಾಳೆ ಹೊಸ ಸೇತುವೆ ಪ್ರವಾಹದಿಂದ ಕೊಚ್ಚಿಹೋಗಿದ್ದು ಗ್ರಾಮಸ್ಥರಿಗೆ ಸಂಪರ್ಕ ಕಡಿತವಾಗಿದೆ. ನಂದಿಮೊಟ್ಟೆ ಕಿರಿದಾಳು ನಿವಾಸಿ ಚಿಣ್ಣಪ್ಪ ಹಾಗೂ ಮುತ್ತಪ್ಪ ಕಾರಿನಲ್ಲಿ ಚಾಲಿಸುವಾಗ ವಿಪರೀತ ಮಳೆ ಗಾಳಿಗೆ ಮರ ಕಾರಿನ ಮೇಲೆ ಬಿದ್ದಿದ್ದು ಕಾರು ಜಖಂಗೊಂಡಿದೆ ಕಾರಿನಲ್ಲಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಗರಗಂದೂರು ಗ್ರಾಮದ ಆಶೀಯಾ ಎಂಬವರ ಮನೆ ಹಾಗೂ ತಡೆಗೋಡೆ ಮಳೆಗೆ ಕುಸಿದು ಬಿದ್ದಿದೆ ಅಂದಾಜು 40,000 ರೂ. ನಷ್ಟವಾಗಿದೆ ಎಂದು ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷಕರಾದ ಶಿವಪ್ಪ ತಿಳಿಸಿದ್ದಾರೆ.

ನಾರ್ಗಾಣೆ ಗ್ರಾಮದ ಯಂಕನ ಪ್ರಕಾಶ ಅವರ ಮನೆ ಮೇಲೆ ಬುಧವಾರ ಮುಂಜಾನೆ 2 ಗಂಟೆಗೆ ಬೀಟೆ ಮರ ಬಿದ್ದಿದ್ದು, ಮನೆಯ ಹೆಂಚು ಗೋಡೆ ಜಖಂಗೊಂಡಿದ್ದು ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಸುಂಟಿಕೊಪ್ಪ ನಾಡ ಕಛೇರಿ ಪ್ರಭಾರ ಉಪತಹಶೀಲ್ಧಾರ್ ಶಿವಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.

ಹಟ್ಟಿಹೊಳೆ, ಗುಂಡುಕುಟ್ಟಿ, ಹಾಲೇರಿ, ಮಕ್ಕಂದೂರಿನಲ್ಲಿ ರಾಜ್ಯ ಹೆದ್ದಾರಿಗೆ ಮರಗಳು ಬುಡಸಮೇತ ಉರುಳಿ ಬಿದ್ದ ಪರಿಣಾಮ ಬಸ್ ಹಾಗೂ ವಾಹನಗಳ ಸಂಚಾರಕ್ಕೆ ಕೆಲ ಘಂಟೆಗಳ ಕಾಲ ತೊಂದರೆಯುಂಟಾಯಿತು.

ಸುಂಟಿಕೊಪ್ಪ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ಸಾಜೀರ್ ಅವರ ಅಂಗಡಿಯ ಮೇಲ್ಚಾವಣಿಯ ಶೀಟ್ ಮಳೆಗೆ ಹಾರಿಹೋಗಿದ್ದು, ತರಕಾರಿ ವ್ಯಾಪಾರಕ್ಕೆ ಬಂದವರು ಅನಾಹುತದಿಂದ ಪಾರಾಗಿದ್ದಾರೆ.

ಚೆಟ್ಟಳ್ಳಿ ಚೇರಳ ಶ್ರೀಮಂಗಲ ಬಕ್ಕ ಗ್ರಾಮದ ಪೈಸಾರಿ ನಿವಾಸಿಗಳ 2 ಮನೆಗೆ ಬರೆ ಕುಸಿತಗೊಂಡಿದ್ದು, ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.