ಸೋಮವಾರಪೇಟೆ, ಆ. 6: ಕಳೆದೆರಡು ದಿನಗಳಿಂದ ಸೋಮವಾರಪೇಟೆ ಭಾಗದಲ್ಲಿ ಬಿರುಸು ಕಂಡಿರುವ ಮಳೆ, ಇಂದು ದಿನಪೂರ್ತಿ ಆರ್ಭಟಿಸಿತು. ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಸಾರ್ವಜನಿಕರ ಓಡಾಟವೂ ವಿರಳವಾಗಿತ್ತು.ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದರಿಂದ ಪೋಷಕರು ನಿಟ್ಟುಸಿರು ಬಿಟ್ಟರು. ವರುಣನಾರ್ಭಟಕ್ಕೆ ಅಲ್ಲಲ್ಲಿ ಮರಗಳು ರಸ್ತೆಗುರುಳಿ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿದ್ದರೂ ಮರಗಳನ್ನು ತೆರವುಗೊಳಿಸಿದ ನಂತರ ಸಂಚಾರ ಸುಗಮಗೊಂಡಿತು.ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗದ್ದೆಗಳಲ್ಲಿ ನೀರು ಶೇಖರಣೆಗೊಂಡಿದ್ದು, ಉಳುಮೆ, ನಾಟಿ ಕಾರ್ಯಕ್ಕೆ ಅನುಕೂಲ ವಾತಾವರಣ ಕಲ್ಪಿಸಿದ್ದರೂ, ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿರುವದರಿಂದ ಗದ್ದೆಗಳಿಗೆ ತೆರಳಲೂ ಸಹ ಕೃಷಿಕರಿಗೆ ತೊಂದರೆಯಾಗಿದೆ.ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿರುವ ಬೆಟ್ಟದಳ್ಳಿ, ಕೊತ್ನಳ್ಳಿ, ಕುಡಿಗಾಣ, ಬೆಂಕಳ್ಳಿ, ಹರಗ, ಬೀದಳ್ಳಿ, ಶಾಂತಳ್ಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರೊಂದಿಗೆ ತೋಳೂರುಶೆಟ್ಟಳ್ಳಿ, ಕೂತಿ, ಯಡದಂಟೆ ಭಾಗದಲ್ಲೂ ವರ್ಷಾಧಾರೆ ಬಿರುಸುಗೊಂಡಿದೆ.

ವಿದ್ಯುತ್ ಸ್ಥಗಿತ: ಭಾರೀ ಗಾಳಿಯಿಂದಾಗಿ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ನಿನ್ನೆ ರಾತ್ರಿ ಇಡೀ ಸೋಮವಾರಪೇಟೆ ಪಟ್ಟಣಕ್ಕೆ ವಿದ್ಯುತ್ ಸ್ಥಗಿತಗೊಂಡಿತ್ತು. ಪರಿಣಾಮ ಚೌಡ್ಲು, ಹಾನಗಲ್ಲು, ಬೇಳೂರು, ತೋಳೂರುಶೆಟ್ಟಳ್ಳಿ, ಕೂತಿ, ಯಡದಂಟೆ, ನೇರುಗಳಲೆ ವ್ಯಾಪ್ತಿಯಲ್ಲೂ ಕತ್ತಲಾವರಿಸಿತ್ತು.

(ಮೊದಲ ಪುಟದಿಂದ) ಕೂತಿ ಗ್ರಾಮಕ್ಕೆ ಕಳೆದೆರಡು ದಿನಗಳಿಂದ ವಿದ್ಯುತ್ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮದ ಮೇಘನ ತಿಳಿಸಿದ್ದಾರೆ.

ಮರಬಿದ್ದು ಮನೆ ಜಖಂ: ಸಮೀಪದ ಗೌಡಳ್ಳಿ ವ್ಯಾಪ್ತಿಯ ಬಸವನಕೊಪ್ಪ ಗ್ರಾಮದ ಜೇಕಬ್ ಎಂಬವರ ಮನೆಯ ಮೇಲೆ ಮರಬಿದ್ದು, ಭಾಗಶಃ ಹಾನಿಯಾಗಿದೆ. ಮರ ಬಿದ್ದ ಹಿನ್ನೆಲೆ ಮನೆಯ ಸಿಮೆಂಟ್ ಶೀಟ್‍ಗಳು ಜಖಂಗೊಂಡಿದ್ದು, ಸ್ಥಳಕ್ಕೆ ಗ್ರಾಮ ಲೆಕ್ಕಿಗ ಜಟ್ಟಪ್ಪ ಕಟ್ಟಾಬರ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ಸಮೀಪ ರಸ್ತೆಗೆ ಅಡ್ಡಲಾಗಿ ಮರ ಉರುಳಿದ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ತಂತಿ ಸಹಿತ ಕಂಬಗಳು ನೆಲಕ್ಕುರುಳಿದ್ದವು. ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಯಾವದೇ ಅಪಾಯ ಸಂಭವಿಸಲಿಲ್ಲ.

ಇದರಿಂದಾಗಿ ಮಡಿಕೇರಿಯಿಂದ ಸೋಮವಾರಪೇಟೆಗೆ ಆಗಮಿಸಬೇಕಾದ ವಾಹನಗಳು ಸುಂಟಿಕೊಪ್ಪ, ಗರಗಂದೂರು ಮಾರ್ಗವಾಗಿ ಸೋಮವಾರಪೇಟೆಗೆ ಬರಬೇಕಾಯಿತು. ಇಂದು ಬೆಳಿಗ್ಗೆ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತುಂಬಿಕೊಳ್ಳುತ್ತಿರುವ ಕೆರೆಕಟ್ಟೆ: ಮುಂಗಾರು ವಿಳಂಬದಿಂದ ಸಣ್ಣಪುಟ್ಟ ನದಿ ತೊರೆ, ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟ ಇಳಿಮುಖಗೊಂಡಿದ್ದು, ಕಳೆದೆರಡು ದಿನಗಳಿಂದ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಇದೀಗ ಮೈದುಂಬಿಕೊಳ್ಳುತ್ತಿವೆ.

ಬತ್ತಿ ಬರಿದಾಗಿದ್ದ ಪಟ್ಟಣದ ಕಕ್ಕೆಹೊಳೆ, ದುದ್ದುಗಲ್ಲು ಹೊಳೆ, ಕಬ್ಬಿಣ ಸೇತುವೆ ಹೊಳೆ, ಅಬ್ಬೂರುಕಟ್ಟೆ ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಮೈದುಂಬಿಕೊಳ್ಳುತ್ತಿವೆ. ಇದರೊಂದಿಗೆ ಪಟ್ಟಣದ ಆನೆಕೆರೆ, ಯಡೂರು ಕೆರೆ, ಚೌಡ್ಲು ಕೆರೆಗಳಲ್ಲೂ ನೀರಿನ ಪ್ರಮಾಣ ಹೆಚ್ಚುತ್ತಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಕಸಬ ಹೋಬಳಿಗೆ 65.4 ಮಿ.ಮೀ.,ಶಾಂತಳ್ಳಿಗೆ 129 ಮಿ.ಮೀ., ಕೊಡ್ಲಿಪೇಟೆಗೆ 53, ಸುಂಟಿಕೊಪ್ಪಕ್ಕೆ 32.3, ಕುಶಾಲನಗರಕ್ಕೆ 15.6 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ತುಂಬಿ ಹರಿಯುತ್ತಿರುವ ಕಾವೇರಿ

ಕುಶಾಲನಗರ : ಕುಶಾಲನಗರ ಬಳಿ ಕಾವೇರಿ ತುಂಬಿ ಹರಿಯುತ್ತಿರುವ ದೃಶ್ಯ ಕಾಣಬಹುದು. ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯಲಾರಂಭಿಸಿದೆ.

ಕುಶಾಲನಗರ : ಕುಶಾಲನಗರ ಪಟ್ಟಣದಲ್ಲಿ ನಿರಂತರ ಮಳೆಯಾಗುತ್ತಿದ್ದು ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿತ್ತು. ಸೋಮವಾರ ರಾತ್ರಿಯಿಂದ ಸತತವಾಗಿ ಮಳೆ ಸುರಿಯುತ್ತಿದ್ದು ಕಾವೇರಿ ನದಿಯಲ್ಲಿ ನೀರು ಬಹುತೇಕ ತುಂಬಿ ಹರಿಯುತ್ತಿದೆ. ಸೋಮವಾರ ಸಂಜೆ ವೇಳೆಗೆ ಕೊಪ್ಪ ಕಾವೇರಿ ನದಿ ಸೇತುವೆ ಕೆಳಭಾಗದಲ್ಲಿ 6 ಮೀಟರ್‍ಗಳಷ್ಟು ಪ್ರಮಾಣದ ನೀರು ಹರಿಯುತ್ತಿರುವದು ಕಂಡುಬಂದಿದೆ.

ಕುಶಾಲನಗರ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಮತ್ತು ಕಂಬಗಳು ಹಾನಿಗೊಳಗಾಗಿದೆ. ಕೊಪ್ಪ ಬಳಿ ಹೆದ್ದಾರಿ ರಸ್ತೆ ಅಂಚಿನಲ್ಲಿ ಭಾರೀ ಗಾಳಿಗೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು ಯಾವದೇ ಅಪಾಯ ಸಂಭವಿಸಿಲ್ಲ. ಈ ನಡುವೆ ಕುಶಾಲನಗರ ಪ್ರವಾಸಿ ಮಂದಿರಕ್ಕೆ ತೆರಳುತ್ತಿದ್ದ ಶಾಸಕ ಅಪ್ಪಚ್ಚುರಂಜನ್ ಮರ ತಕ್ಷಣ ತೆರವುಗೊಳಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರೂ ಸುಮಾರು 2 ಗಂಟೆಗಳ ಕಾಲ ಮರವನ್ನು ತೆರವುಗೊಳಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮರ ಬಿದ್ದು ನಷ್ಟ

ಚೆಟ್ಟಳ್ಳಿ: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಈರಳೆವಳಮುಡಿ ಗ್ರಾಮದಲ್ಲಿ ಮಳೆಗೆ ಪೊರಿಮಂಡ ದಿನಮಣಿ ಪೂವಯ್ಯನವರ ತೋಟದಿಂದ ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರಕ್ಕೆ ಅಡಿಯಾಗಿತ್ತು.

ಕಾಂಪೌಂಡ್ ಬಿದ್ದು ನಷ್ಟ

ಚೆಟ್ಟಳ್ಳಿ: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊಂಗೇಟಿರ ಬೋಪಯ್ಯ ಅವರ ಮನೆಯ ಮುಂದಿರುವ ಕಾಂಪೌಂಡ್ ಕಳೆದೆರಡು ದಿನ ಬಿದ್ದ ಭಾರಿ ಮಳೆಗೆ ಬಿದ್ದ ಪರಿಣಾಮ ರಸ್ತೆಗೆ ಬಿದ್ದು ನಷ್ಟ ಸಂಭವಿಸಿದೆ. ಕಾಂಪೌಂಡ್ ಗೋಡೆ ಬಿದ್ದಕಾರಣ ಚೇರಳ ಶ್ರೀ ಭಗವತಿ ದೇವಾಲಯದ ರಸ್ತೆಯೂ ಮುಚ್ಚಿಹೋಗಿ ಸಂಚಾರಕ್ಕೆ ತಡೆಯಾಗಿದೆ.

ಕೂಡಿಗೆ : ಕಾವೇರಿ ಜಲಾನಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಪರಿಣಾಮ ಕೂಡಿಗೆಯಲ್ಲಿನ ಕಾವೇರಿ-ಹಾರಂಗಿ ನದಿ ಸಂಗಮದ ಸ್ಥಳದಲ್ಲಿ ಹೆಚ್ಚಿನ ನೀರು ಹರಿಯುತ್ತಿದ್ದು, ನೀರು ಹಿಂತಳ್ಳುವಿಕೆ ಕಂಡುಬರುತ್ತಿದೆ.

ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೂಡಿಗೆ ಸೇತುವೆಯ ಕಾಲು ಭಾಗದಷ್ಟು ನೀರು ಹೆಚ್ಚಾಗಿದೆ. ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗ ಹರಿಯುವ ಕಾವೇರಿ ನದಿಯ ನೀರಿನಲ್ಲಿಯೂ ಏರಿಕೆ ಕಂಡುಬರುತ್ತಿದೆ.

ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಶಿರಂಗಾಲ, ಹೆಬ್ಬಾಲೆ, ತೊರೆನೂರು ವ್ಯಾಪ್ತಿಗಳಲ್ಲಿ ಭಾರಿ ಮಳೆಯಾಗುತ್ತಿದೆ. ಆದರೂ, ಹಾರಂಗಿ ಅಣೆಕಟ್ಟೆ ತುಂಬಲು ಇನ್ನೂ 5 ಟಿಎಂಸಿ ನೀರು ಸಂಗ್ರಹವಾಗಬೇಕಾಗಿದೆ.

ರಸ್ತೆಗುರುಳಿದ ಮರ

ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ರಸ್ತೆ ಅಬ್ಯಾಲ ಸಮೀಪ ಬೃಹತ್ ಆಕಾರದ ಮರ ಬಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ವಾಹನ ಚಾಲಕರು ಹಾಗೂ ಪ್ರಯಾಣಿಕರು ತೋಟದ ಮಾಲೀಕರ ಸಹಾಯದಿಂದ ಮರವನ್ನು ತೆರವುಗೊಳಿಸಿದರು.