ಮಡಿಕೇರಿ, ಆ. 6: ಕೊಡಗು ಜಿಲ್ಲೆಯಾದ್ಯಂತ ಕಳೆದೆರಡು ದಿವಸಗಳಿಂದ ಮಳೆಯ ತೀವ್ರತೆ ಹೆಚ್ಚಾಗಿದ್ದು, ನದಿ-ತೊರೆ-ತೋಡು ಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗುತ್ತಿದೆ. ಜಿಲ್ಲೆಯಲ್ಲಿ ಈ ತನಕ ಕ್ಷೀಣಗೊಂಡಂತಿದ್ದ ಮುಂಗಾರು ಭಾನುವಾರದಿಂದ ಬಿರುಸುಕಾಣ ಲಾರಂಭಿಸಿದ್ದು, ಜಿಲ್ಲೆಯಾದ್ಯಂತ ಈ ಹಿಂದಿನ ವರ್ಷಗಳ ಮಾದರಿಯಲ್ಲಿ ಮಳೆಗಾಲದ ಸನ್ನಿವೇಶ ಕಂಡು ಬರುತ್ತಿದೆ. ವ್ಯಾಪಕ ಮಳೆಯೊಂದಿಗೆ ಹಲವೆಡೆ ಗಾಳಿಯ ತೀವ್ರತೆಯೂ ಕಂಡುಬರುತ್ತಿರುವದರೊಂದಿಗೆ ಅಲ್ಲಲ್ಲಿ ಸಣ್ಣ-ಪುಟ್ಟ ಹಾನಿಗಳೂ ಸಂಭವಿಸುತ್ತಿವೆ.ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಇದೇ ಪ್ರಥಮ ಬಾರಿಗೆ ಭಾಗಮಂಡಲ ತಾ. 6 ರಂದು ಜಲಾವೃತಗೊಂಡಿದೆ. ನಡು-ನಡುವೆ ಕೆಲಹೊತ್ತು ಬಿಡುವು ನೀಡುವಂತಹ ಸನ್ನಿವೇಶ ಕಂಡುಬಂದರೂ ಮತ್ತೆ ಮಳೆ ಹೆಚ್ಚಾಗಿ ಸುರಿಯುವಂತಹ ವಾತಾವರಣ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗೋಚರಿಸುತ್ತಿದೆ.ಭಾಗಮಂಡಲದಲ್ಲಿ ನಡುರಾತ್ರಿ ಯಿಂದ ನೀರಿನಮಟ್ಟದಲ್ಲಿ ಹೆಚ್ಚು ಏರಿಕೆಯಾಗಿದ್ದು, ಬೆಳಿಗ್ಗೆ ತ್ರಿವೇಣಿ ಸಂಗಮ ಜಲಾವೃತಗೊಂಡು ಭಗಂಡೇಶ್ವರ ದೇವಾಲಯದ ಮೆಟ್ಟಿಲಿನ ತನಕವೂ ನೀರು ನುಗ್ಗಿತ್ತು. ಭಾಗಮಂಡಲ-ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಈ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎರಡು ರ್ಯಾಫ್ಟ್‍ಗಳನ್ನು ಸಿದ್ಧವಾಗಿರಿಸಲಾಗಿದೆ. ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರು ರ್ಯಾಫ್ಟ್‍ನಲ್ಲಿ ಸಂಚರಿಸಿ ವ್ಯವಸ್ಥೆ ಪರಿಶೀಲಿಸಿದರಲ್ಲದೆ ಅಗತ್ಯ ಸೂಚನೆಗಳನ್ನು ಸಂಬಂಧಿಸಿದವರಿಗೆ ನೀಡಿದರು.
ಭಾಗಮಂಡಲ ವಿಭಾಗದಲ್ಲಿ ಹೆಚ್ಚಿನ ಮಳೆಯಿಂದಾಗಿ ಮಡಿಕೇರಿ ರಸ್ತೆಯಲ್ಲಿ ಸುಮಾರು ಅರ್ಧ ಅಡಿಯಷ್ಟು
(ಮೊದಲ ಪುಟದಿಂದ) ನೀರು ನಿಂತಿತ್ತಾದರೂ ಸಂಚಾರಕ್ಕೆ ಧಕ್ಕೆಯಾಗಿರಲಿಲ್ಲ. ಕಾವೇರಿ ನದಿ ಸಾಗುವ ಪ್ರದೇಶ ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ನದಿ ಮಾರ್ಗದಲ್ಲಿ ಹಾಗೂ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲಿನ ವ್ಯಾಪ್ತಿಯಲ್ಲೂ ಧಾರಾಕಾರವಾಗಿ ಮಳೆಯಾಗುತ್ತಿದೆ. ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದಿನಿಂದಲೂ ಇತರೆಡೆಗಳಿಗಿಂತ ಅಧಿಕವಾಗಿದ್ದ ಮಳೆಯ ಪ್ರಮಾಣ ಇದೀಗ ಮತ್ತೆ ಹೆಚ್ಚಾಗುತ್ತಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಯಾಗುತ್ತಿದೆ.
2018ರ ಆಗಸ್ಟ್ ತಿಂಗಳಿನಲ್ಲಿ ಇದೇ ರೀತಿ ಪ್ರಾರಂಭಗೊಂಡಿದ್ದ ಆಶ್ಲೇಷಾ ಮಳೆಯ ಅಬ್ಬರ ಹಲವು ದಿನಗಳ ಕಾಲ ಮುಂದುವರಿದು ಜಿಲ್ಲೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಕಹಿ ಘಟನೆ ಇನ್ನೂ ಜನತೆಯ ಮನದಿಂದ ದೂರಾಗಿಲ್ಲ. ಇದೇ ಮಾದರಿಯಲ್ಲಿ ಪ್ರಸ್ತುತ ಕಾಣುತ್ತಿರುವ ಬದಲಾವಣೆಯಿಂದಾಗಿ ಆತಂಕಕಾರಿಯ ಸನ್ನಿವೇಶ ಮತ್ತೆ ಸೃಷ್ಟಿಯಾಗುತ್ತಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಳೆದ ರಾತ್ರಿ ಗುಡುಗಿನ ಶಬ್ಧವೂ ಕೇಳಿ ಬಂದಿದ್ದು, ಇದರೊಂದಿಗೆ ಗಾಳಿಯ ರಭಸವೂ ಹೆಚ್ಚಾಗಿತ್ತು. ತಾ. 6 ರಂದು ಮಳೆ-ಗಾಳಿಯ ಬಿರುಸು ಹೆಚ್ಚಿದ್ದು, ಅಪಾಯಕಾರಿ ಪ್ರದೇಶಗಳು-ಆಯಕಟ್ಟಿನ ಜಾಗಗಳಲ್ಲಿರುವ ಜನತೆ ದಿಗಿಲುಗೊಳ್ಳುವಂತಾಗಿದೆ.
ಬೆಚ್ಚಿ ಬೀಳಿಸಿದ ಗುಡುಗು
ತಾ. 6 ರಂದು ಅಪರಾಹ್ನ 12.40ರ ಸುಮಾರಿಗೆ ಮಡಿಕೇರಿಯಲ್ಲಿ ಗುಡುಗಿನ ಶಬ್ಧ ಮತ್ತೆ ಕೇಳಿ ಬಂದಿದ್ದು, ಕೆಲ ಹೊತ್ತು ಇದು ಮುಂದುವರಿದಿತ್ತು. ಇದರ ಬೆನ್ನೆಲ್ಲೇ ಮತ್ತೆ ಧಾರಾಕಾರ ಮಳೆ ಸುರಿಯಿತು. ನಡು-ನಡುವೆ ವಿದ್ಯುತ್ ಕೂಡ ಕೈಕೊಡುತ್ತಿದ್ದು, ಕೊಡಗು ಮಳೆಗಾಲದ ನೈಜತೆಯನ್ನು ಕಾಣುತ್ತಿದೆ.
ಲಕ್ಷ್ಮಣ ತೀರ್ಥ ಪ್ರವಾಹ
ದಕ್ಷಿಣ ಕೊಡಗಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ವ್ಯಾಪ್ತಿಯ ಪ್ರದೇಶಗಳು ಜಲಾವೃತಗೊಂಡಿವೆ. ಹಿನ್ನೇರಿನಿಂದಾಗಿ ನೂರಾರು ಎಕರೆ ಭತ್ತದ ಗದ್ದೆಗಳು ಮುಳುಗಡೆಯಾಗಿದ್ದು, ಬಾಳೆಲೆ ಸನಿಹದ ನಿಟ್ಟೂರು ಸೇತುವೆಯೂ ಮುಳುಗಡೆಯ ಹಂತ ತಲಪಿದೆ.
ಸಿದ್ದಾಪುರದ ಕರಡಿಗೋಡುವಿನಲ್ಲಿ ನದಿ ತೀರದಲ್ಲಿ ನೀರು ಹೆಚ್ಚಾಗುತ್ತಿದೆ. ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ನಾಗೇಶ್ ರಾವ್, ಗ್ರಾಮ ಲೆಕ್ಕಿಗ ಓಮಪ್ಪ ಬಣಕಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿ ಜನತೆಗೆ ಎಚ್ಚರದಿಂದರಲು ಸೂಚನೆ ನೀಡಿದ್ದಾರೆ.
ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿ ತುಂಬಿ ಹರಿಯುತ್ತಿದೆ. ಭಾಗಮಂಡಲ ನಾಪೋಕ್ಲು ರಸ್ತೆಯಲ್ಲಿ ನೀರು ತುಂಬಿ ಸಂಪರ್ಕ ಕಡಿತಗೊಂಡಿದೆ. ಬಿರುಸಿನ ಮಳೆಯ ಪರಿಣಾಮ ಅಲ್ಲಲ್ಲಿ ಜಲ ಎದ್ದಿವೆ. ಮಳೆಯಿಂದಾಗಿ ರೈತರು ಬಿರುಸಿನಿಂದ ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಮಂಗಳವಾರ ಮಧ್ಯಾಹ್ನದವರೆಗೆ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಅಪರಾಹ್ನ ಬಿರುಸುಗೊಂಡಿತು.
ಧಾರಾಕಾರ ಮಳೆಯಿಂದಾಗಿ ಅಲ್ಲಿ ಹಾನಿ ಆಗಿದೆ.ಕೊಳಕೇರಿ ಗ್ರಾಮದ ಟಿ.ಕೆ.ರಿತೇಶ್ ಎಂಬವರ ಮನೆಯ ತಡೆಗೋಡೆ ಕುಸಿದಿದ್ದು ಅಪಾಯ ಎದುರಾಗಿದೆ.ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೇತು ಗ್ರಾಮದ ಎಕ್ಸ್ಸೆಲ್ ವಿದ್ಯಾಸಂಸ್ಥೆಯ ಬಳಿ ಮರಮುರಿದು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.ವಿದ್ಯುತ್ ಕಂಬ ತುಂಡಾಗಿದ್ದು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಾಬಾ ತಿಮ್ಮಯ್ಯ ಹಾಗೂ ಸೆಸ್ಕ್ ಸಿಬ್ಬಂದಿ ಮರ ತುಂಡರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.