ಗೋಣಿಕೊಪ್ಪಲು, ಆ. 6: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ, ಗಾಳಿಗೆ ಮನೆ, ಮರ, ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು. ಗ್ರಾಮೀಣ ಭಾಗದಲ್ಲಿ ವಿದ್ಯುತ್‍ಚ್ಛಕ್ತಿ ಇಲ್ಲದೆ ಜನತೆ ಸಂಕಷ್ಟದಲ್ಲಿದ್ದಾರೆ. ವಿಶೇಷವಾಗಿ ದ.ಕೊಡಗಿನ ಪೊನ್ನಪ್ಪಸಂತೆ, ಮಾಯಮುಡಿ, ಕಿರುಗೂರು, ಪಂಚಾಯಿತಿ ವ್ಯಾಪ್ತಿಯಲ್ಲಿ ಅನಾಹುತಗಳು ನಡೆದಿದ್ದು ಯಾವದೇ ಪ್ರಾಣಪಾಯ ಸಂಭವಿಸಿಲ್ಲ. ದ. ಕೊಡಗಿನ ಬಾಳೆಲೆ, ಪೊನ್ನಂಪೇಟೆ ಮಾರ್ಗದ ಮತ್ತೂರು ಬಳಿ ಹಾಗೂ ಬಾಳೆಲೆ, ಮಾಯಮುಡಿ ರಸ್ತೆ ಬದಿಯಲ್ಲಿದ್ದ ಮರ ಹಾಗೂ ವಿದ್ಯುತ್ ಕಂಬ ರಸ್ತೆಗೆ ಬಿದ್ದ ಪರಿಣಾಮ ಈ ಭಾಗದಲ್ಲಿ ಮುಂಜಾನೆ ರಸ್ತೆ ಸಂಚಾರಕ್ಕೆ ತೊಡಕುಂಟಾಗಿತ್ತು.

ಗಾಳಿ ಮಳೆಯಿಂದಾಗಿ ಪೊನ್ನಂಪೇಟೆ ಪಂಚಾಯ್ತಿ ವ್ಯಾಪ್ತಿಯ ಬಿಳೂರು ಗ್ರಾಮದ ಈಚಲಬಾಣೆ ಪೈಸಾರಿಯ ಎರವರ ಚಿಕ್ಕಿ ಎಂಬವರಿಗೆ ಸೇರಿದ ಮನೆಯು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಸ್ಥಳಕ್ಕೆ ಪಂಚಾಯ್ತಿ ಪಿಡಿಒ,ಕಂದಾಯ ಇಲಾಖಾಧಿಕಾರಿ ಹಾಗೂ ಗೋಣಿಕೊಪ್ಪ ಆರ್.ಎಂ.ಸಿ.ಯ ಅಧ್ಯಕ್ಷ ಹಾಗೂ ಪಂಚಾಯ್ತಿ ಸದಸ್ಯ ವಿನು ಚಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪೊನ್ನಂಪ್ಪಸಂತೆ ಪಂಚಾಯ್ತಿ ವ್ಯಾಪ್ತಿಯ ದೂಪದಕೊಲ್ಲಿ ಪೈಸಾರಿಯಲ್ಲಿದ್ದ ಬೃಹತ್ ಗಾತ್ರದ ಬೀಟಿ ಮರವು ಬುಡ ಸಹಿತ ಧರೆಗೆ ಉರುಳಿ ಅಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್ ಸಂಪೂರ್ಣ ಹಾನಿ ಗೊಳಗಾಗಿದೆ. ಅಲ್ಲದೆ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಸ್ಥಳಕ್ಕೆ ಪೊನ್ನಂಪೇಟೆ ಅರಣ್ಯ ಇಲಾಖೆಯ ಆರ್‍ಎಫ್‍ಓ ಗಂಗಾಧರ್ ಹಾಗೂ ಸಿಬ್ಬಂದಿ ತೆರಳಿ ಮರವನ್ನು ತೆರವುಗೊಳಿಸಿದರು ಈ ಸಂದರ್ಭ ಪಂಚಾಯ್ತಿ ಅಧಿಕಾರಿಗಳು ಪಂಚಾಯ್ತಿ ಸದಸ್ಯರಾದ ವಿನು ಚಂಗಪ್ಪ ಹಾಜರಿದ್ದರು.ದ.ಕೊಡಗಿನ ತಿತಿಮತಿ,ಬಾಳೆಲೆ, ಶ್ರೀಮಂಗಲ, (ಮೊದಲ ಪುಟದಿಂದ) ಹುದಿಕೇರಿ,ಕುಟ್ಟ, ತೆರಾಲು ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಚೆಸ್ಕಾಂನ ಸಿಬ್ಬಂದಿ ಸುರಿಯುತ್ತಿರುವ ಮಳೆಯ ನಡುವೆ ಕೆಲಸ ನಿರ್ವಹಿಸುತ್ತಿದ್ದಾರೆ. ಕಿರುಗೂರು ಪಂಚಾಯ್ತಿಯ ಮತ್ತೂರು, ಭಾಗದಲ್ಲಿ ಹಾಗೂ ಮಾಯಮುಡಿ ಪಂಚಾಯಿತಿಯ ಧನುಗಾಲದಲ್ಲಿ ಎರಡು ಟ್ರಾನ್ಸ್‍ಫಾರ್ಮ್‍ಗಳು, 8 ವಿದ್ಯುತ್‍ಕಂಬಗಳು ಹಾಳಾಗಿವೆ.

ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ಆರನೇ ವಾರ್ಡ್‍ನ ಕಾವೇರಿ ಹಿಲ್ಸ್ ಬಡಾವಣೆಗೆ ತೆರಳುವ ರಸ್ತೆಯು ಭಾರೀ ಗುಂಡಿ ಬಿದ್ದುದ್ದು ಸುರಿದ ಮಳೆ ನೀರು ಗುಂಡಿಯಲ್ಲಿಯೇ ನಿಂತಿದ್ದು ನಾಗರಿಕರಿಗೆ ನಡೆದಾಡುವದೇ ಕಷ್ಟವಾಗಿದೆ. ಲಭ್ಯವಿರುವ ಸಿಬ್ಬಂದಿಗಳ ಸಹಕಾರದಿಂದ ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿರುವ ಚೆಸ್ಕಾಂ ಸಿಬ್ಬಂದಿಗಳು ಗಾಳಿ,ಮಳೆಯನ್ನು ಲೆಕ್ಕಿಸದೆ ಗ್ರಾಹಕರಿಗೆ ವಿದ್ಯುತ್ ನೀಡಲು ಹರ ಸಾಹಸ ಪಡುತ್ತಿದ್ದಾರೆ. ವೀರಾಜಪೇಟೆ ತಾಲೂಕಿನ ಚೆಸ್ಕಾಂ ಎಇಇ ಅಂಕಯ್ಯ ಸೇರಿದಂತೆ ಚೆಸ್ಕಾಂನ ಸಹಾಯಕ ಇಂಜಿನಿಯರ್‍ಗಳಾದ ಗೋಣಿಕೊಪ್ಪಲುವಿನ ಕೃಷ್ಣಕುಮಾರ್ ಶ್ರೀಮಂಗಲದ ವಿಜಯ ಕುಮಾರ್, ಬಾಳೆಲೆಯ ಮನುಕುಮಾರ್, ತಮ್ಮ ಸಿಬ್ಬಂದಿಗಳ ಸಹಕಾರ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ.

ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಗೊಳ ಗ್ರಾಮದ ಮುತ್ತಮ್ಮ ಎಂಬವರ ಮನೆಯು ಭಾಗಶಃ ಕುಸಿದಿದ್ದು ಸ್ಥಳಕ್ಕೆ ಪೊನ್ನಂಪೇಟೆ ರೆವೆನ್ಯೂ ಅಧಿಕಾರಿ ರಾಧಕೃಷ್ಣ ಹಾಗೂ ಗ್ರಾಮ ಲೆಕ್ಕಿಗರಾದ ಸುಚಿತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಲ್ಲೇರಿ ಬಳಿಯ ಅಡ್ಡ ರಸ್ತೆಯಲ್ಲಿ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಮರ ತೆರವುಗೊಳಿಸಿದರು.

ಪೊನ್ನಂಪೇಟೆ ಪೊಲೀಸ್ ಠಾಣೆ ಮುಂಭಾಗದಲ್ಲಿದ್ದ ಬೃಹತ್ ಗಾತ್ರದ ಹಲಸಿನ ಮರವು ಬಿದ್ದ ಪರಿಣಾಮ ಮರದ ಕೆಳಗೆ ಪೊಲೀಸರು ದಸ್ತಗಿರಿ ಮಾಡಿ ತಂದು ನಿಲ್ಲಿಸಿದ್ದ ವಾಹನಗಳಿಗೆ ತೀವ್ರ ಜಖಂ ಉಂಟಾಗಿದೆ ಸ್ಥಳಕ್ಕೆ ತೆರಳಿದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಗಂಗಾಧರ್ ಹಾಗೂ ಸಿಬ್ಬಂದಿ ಮರ ತೆರವು ಕಾರ್ಯ ನಡೆಸಿದರು. ಗೋಣಿಕೊಪ್ಪಲುವಿನ ಕೀರೆ ಹೊಳೆಯು ನೀರಿನ ಮಟ್ಟ ಏರುತ್ತಿದ್ದು ಮಳೆ ಮುಂದುವರೆದಲ್ಲಿ ಹೊಳೆಯ ಬದಿಯಲ್ಲಿರುವ ನಾಗರಿಕರಿಗೆ ತೊಂದರೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸಿದ್ದಾಪುರ: ಕರಡಿಗೋಡು, ಗುಹ್ಯ ಕೊಂಡಂಗೇರಿ ಗ್ರಾಮದ ನದಿ ದಡದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕ ನಾಗೇಶ್‍ರಾವ್ ಹಾಗೂ ಗ್ರಾಮ ಲೆಕ್ಕಿಗ ಓಮಪ್ಪ ಓಂಕಾರ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಂಡಿದ್ದಾರೆ.

ಕಂದಾಯ ಇಲಾಖಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿರುವದಾಗಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ನಾಗೇಶ್ ತಿಳಿಸಿದ್ದಾರೆ. ಕರಡಿಗೋಡುವಿನಲ್ಲಿ ಪ್ರವಾಹ ನೀರು ಏರಿಕೆಯಾಗಿದ್ದು, ಕರಡಿಗೋಡು-ಚಿಕ್ಕನಳ್ಳಿ ಪೈಸಾರಿಗೆ ತೆರಳುವ ಕಿರುಸೇತುವೆ ಮುಳುಗಡೆಗೊಂಡಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಜಲಾವೃತಗೊಂಡಿದೆ.

ಕರಡಿಗೋಡು ನದಿ ದಡದಲ್ಲಿ ಪ್ರವಾಹ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ನೀರಿನ ಹೊಡೆತಕ್ಕೆ ನದಿದಡ ಕುಸಿಯುವ ಸಾಧ್ಯತೆ ಇದೆ. ಶಾಶ್ವತ ಸೂರಿಗಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕೂಡ ಶಾಶ್ವತ ಸೂರು ಮರೀಚಿಕೆಯಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ನೆಲ್ಯಹುದಿಕೇರಿಯ ಭಾಗದಲ್ಲಿ ಪ್ರವಾಹ ನೀರು ಏರಿಕೆಯಾಗಿದ್ದು, ಬೆಟ್ಟದಕಾಡು-ಬರಡಿ ಕುಂಬಾರಗುಂಡಿಯ ನದಿ ದಡದ ನಿವಾಸಿಗಳಿಗೆ ಪ್ರವಾಹಭೀತಿ ಎದುರಾಗಿದೆ. ನೆಲ್ಯಹುದಿಕೇರಿ ಗ್ರಾಮದ ನದಿದಡದಲ್ಲಿ ಪ್ರವಾಹ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಲೆಗಳಲ್ಲಿ ಪರಿಹಾರ ಕೇಂದ್ರ ತೆರೆಯುವ ಬಗ್ಗೆ ಕುಶಾಲನಗರ ಕಂದಾಯ ಇಲಾಖಾಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ಪ್ರವಾಹಪೀಡಿತ ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬರಡಿ, ಬೆಟ್ಟದಕಾಡು ಕುಂಬಾರ ಗುಂಡಿಗಳಿಗೆ ಕುಶಾಲನಗರ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸಂತೋಷ್ ಭೇಟಿ ನೀಡಿ ಅಗತ್ಯ ಕ್ರಮಕೈಗೊಂಡಿದ್ದಾರೆ. ಈಗಾಗಲೇ ನದಿದಡದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಪರಿವೀಕ್ಷಕ ಮಧುಸೂದನ್ ತಿಳಿಸಿದರು.

ಕರಡಿಗೋಡುವಿನ ನಿವಾಸಿಗಳು ತಾವು ಸ್ಥಳಾಂತರಗೊಳ್ಳುತ್ತೇವೆಂದು ಜಿಲ್ಲಾಡಳಿತಕ್ಕೆ, ಪಂಚಾಯಿತಿಯ ಮುಖಾಂತರ ಮನವಿ ಪತ್ರ ನೀಡಿ ವರ್ಷಗಳು ಕಳೆದಿರುತ್ತದೆ. ಆದರೆ ಬದಲೀ ವ್ಯವಸ್ಥೆಯಾಗದೇ ಕರಡಿಗೋಡು ನಿವಾಸಿಗಳು ಭಯದಲ್ಲೇ ದಿನದೂಡುವಂತಾಗಿದ್ದು, ತಮ್ಮ ಮಕ್ಕಳೊಂದಿಗೆ ರಾತ್ರಿ ನಿದ್ರಿಸದೇ ಮನೆಯನ್ನು ಹಾಗೂ ಸಾಮಗ್ರಿಗಳನ್ನು ಕಾಯುತ್ತಿರುವ ದೃಶ್ಯಕಂಡುಬಂದಿದೆ. ಸರಕಾರ ಈ ಬಗ್ಗೆ ಆಸಕ್ತಿ ವಹಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಜನಜೀವನ ಅಸ್ತವ್ಯಸ್ತ

ಶ್ರೀಮಂಗಲ: ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಧಾರಾಕಾರ ಮಳೆಯಾಗಿದೆ. ಮಂಗಳವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಶಬ್ಧದ ಗುಡುಗಿನಿಂದ ಜನ ಬೆಚ್ಚಿ ಬಿದ್ದಿದ್ದಾರೆ.

ಘಟ್ಟ ಪ್ರದೇಶದ ಗ್ರಾಮೀಣ ಭಾಗದಲ್ಲಿ ಕಳೆದ 4 ದಿನಗಳಿಂದ ವಿದ್ಯುತ್ ವ್ಯತ್ಯಯ ಮುಂದುವರಿದಿದ್ದು, ತೀವ್ರ ಗಾಳಿ ಮಳೆಗೆ ವಿದ್ಯುತ್ ಮಾರ್ಗದಲ್ಲಿ ಅಡಚಣೆ ಉಂಟಾಗಿದೆ. ಬಿರುನಾಣಿ, ಹುದಿಕೇರಿ, ಟಿ. ಶೆಟ್ಟಿಗೇರಿ, ಶ್ರೀಮಂಗಲ, ಬಿ. ಶೆಟ್ಟಿಗೇರಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಕಡಿತ ಮುಂದುವರಿದಿದೆ.

ಬಿರುನಾಣಿಗೆ ಅತೀ ಹೆಚ್ಚು ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 112 ಮಿ.ಮೀ. ಮಳೆಯಾಗಿದ್ದು, ಶ್ರೀಮಂಗಲ ವ್ಯಾಪ್ತಿಗೆ 80 ಮಿ.ಮೀ. ಮಳೆಯಾಗಿದೆ. ಬಿರುನಾಣಿಗೆ ಇದುವರೆಗೆ 2590 ಮಿ.ಮೀ. (104 ಇಂಚು) ಮಳೆಯಾಗಿದೆ. ಕಳೆದ 5 ದಿನಗಳಿಂದ 440 ಮಿ.ಮೀ. ಮಳೆಯಾಗಿದ್ದು, ಸರಾಸರಿ 88 ಮಿ.ಮೀ. ಮಳೆ ಸುರಿದಿದೆ.

ಮಳೆಯಿಂದ ಬಿರುನಾಣಿ-ಟಿ.ಶೆಟ್ಟಿಗೇರಿ ನಡುವೆ ಕೆ.ಆರ್. ಬಳಿ ಕಕ್ಕಟ್ಟ್‍ಪೊಳೆ ನದಿಯಲ್ಲಿ ಹಳೆ ಸೇತುವೆ ಮಟ್ಟಕ್ಕೆ ನದಿ ತುಂಬಿ ಹರಿಯುತ್ತಿದ್ದು, ನದಿ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ಏರಿಕೆಯಾಗಿರುವದರಿಂದ ಈ ನದಿಯಲ್ಲಿ ರ್ಯಾಫ್ಟಿಂಗ್ ಸ್ಥಗಿತಗೊಳಿಸಲಾಗಿದೆ. ಹೈಸೊಡ್ಲೂರು ಬಳಿ ಬಸ್ ಶೆಲ್ಟರ್‍ಗೆ ಮರ ಬಿದ್ದು ಹಾನಿಯಾಗಿದೆ.

ಗೋಣಿಕೊಪ್ಪಲಿಗೆ 41 ಇಂಚು ಮಳೆ

ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗೋಣಿಕೊಪ್ಪಲಿನಲ್ಲಿ ಈವರೆಗೂ ಸುಮಾರು 41 ಇಂಚು ಮಳೆಯಾಗಿದೆ. ಇಂದೂ ಹಗಲು ಹೊತ್ತಿನಲ್ಲಿ ಸುಮಾರು ಮೂರು ಇಂಚು ಮಳೆ ದಾಖಲಾಗಿದೆ.

ಪ್ರತೀ ವರ್ಷ ಮಳೆಗಾಲಕ್ಕೂ ಮುನ್ನ ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿನ ಕೀರೆಹೊಳೆ ಹಾಗೂ ಕೈಕೇರಿ ತೋಡುವಿನ ಹೂಳೆತ್ತಲಾಗುತ್ತಿತ್ತು. ಈ ಬಾರಿ ಇಲ್ಲಿನ ಎರಡನೇ ವಿಭಾಗದ ಬಳಿ ಸುಮಾರು ರೂ.2 ಲಕ್ಷ ವೆಚ್ಚದ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದು ಅಪೂರ್ಣವಾಗಿದೆ. ಮಳೆರಾಯ ಇದೇ ರೀತಿ ಆರ್ಭಟಿಸಿದ್ದಲ್ಲಿ ಇಲ್ಲಿನ ಕೀರೆಹೊಳೆಯಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೀರೆಹೊಳೆ ಹಾಗೂ ಕೈಕೇರಿ ತೋಡುವಿನಲ್ಲಿ ಕಾಡು ಬೆಳೆದಿದ್ದು, ನೀರು ಸರಾಗವಾಗಿ ಹರಿದು ಹೋಗಲು ಅಡಚಣೆ ಉಂಟಾಗಿದೆ.

ಗೋಣಿಕೊಪ್ಪಲು ಮುಖ್ಯರಸ್ತೆಯ ಇಬ್ಬದಿಯ ಚರಂಡಿಯನ್ನು ಶುಚಿಗೊಳಿಸದ ಕಾರಣ ಚರಂಡಿಯಲ್ಲಿ ಅಲ್ಲಲ್ಲಿ ಕೊಳಚೆ ನೀರು ನಿಂತಿರುವದಾಗಿ ನಾಗರಿಕರು ಆರೋಪಿಸಿದ್ದಾರೆ. ಕೆಲವು ಕಡೆ ಚರಂಡಿಯಲ್ಲಿಯೂ ಕಾಡು ಬೆಳೆದಿದ್ದೂ, ಕೆಲವು ವರ್ತಕರು ಅಂಗಡಿಯ ತ್ಯಾಜ್ಯವನ್ನು ಚರಂಡಿಗಳಿಗೇ ಸುರಿಯುವ ಹಿನ್ನೆಲೆ ಮಳೆಯ ನೀರು ಸರಾಗವಾಗಿ ಹರಿದುಹೋಗಲು ಅಡ್ಡಿಯಾಗಿದೆ.

ಗೋಣಿಕೊಪ್ಪ ವರದಿ: ಮೂರು ದಿನಗಳಲ್ಲಿ ಗೋಣಿಕೊಪ್ಪ ಭಾಗಕ್ಕೆ 10 ಇಂಚು, ಪೊನ್ನಂಪೇಟೆಗೆ 18 ಇಂಚು ಮಳೆಯಾಗಿದೆ. ಸಾಮಾನ್ಯವಾಗಿ ದಕ್ಷಿಣ ಕೊಡಗಿನ ದಕ್ಷಿಣ ಭಾಗದಲ್ಲಿ ಮಾತ್ರ ಸುರಿಯುತ್ತಿದ್ದ ಮಳೆ ಈ ಭಾಗದಲ್ಲೂ ಕಾಣಿಸಿಕೊಳ್ಳುವ ಮೂಲಕ ಆಶ್ಚರ್ಯ ಮೂಡಿಸಿದೆ. ಇದರ ಬೆನ್ನೆಲ್ಲೆ ಶ್ರೀಮಂಗಲ, ಬಿರುನಾಣಿ ವ್ಯಾಪ್ತಿಗೆ ಇದರ ದುಪ್ಪಟ್ಟು ಮಳೆ ಬಿದ್ದಿದೆ.

ಪೊನ್ನಂಪೇಟೆಗೆ ಆಗಸ್ಟ್ 4ನೇ ದಿನಾಂಕದಿಂದ ಸತತವಾಗಿ 6 ಇಂಚು ಮಳೆ ಸುರಿದಿದೆ. ಗೋಣಿಕೊಪ್ಪಕ್ಕೆ ಆಗಸ್ಟ್ 4 ರಂದು 4.5 ಇಂಚು, 5 ರಂದು 3.5 ಇಂಚು, 6 ರಂದು 2 ಇಂಚು ಮಳೆ ಸುರಿದಿದೆ. ಈ ಭಾಗಕ್ಕೆ ಮಳೆ ಕಡಿಮೆ ಎಂದು ಹೇಳಿಕೊಳ್ಳುತ್ತಿದ್ದವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಯಮುಡಿ, ಪಾಲಿಬೆಟ್ಟ, ತಿತಿಮತಿ, ಬಾಳೆಲೆ, ಕಿರುಗೂರು, ನಲ್ಲೂರು, ಅಮ್ಮತ್ತಿ ಭಾಗಕ್ಕೆ ಉತ್ತಮ ಮಳೆಯಾಯಿತು. ತಣ್ಣನೆಯ ಗಾಳಿಯೊಂದಿಗೆ ಗುಡುಗಿನ ಶಬ್ದ ಆಗೊಮ್ಮೆ, ಈಗೊಮ್ಮೆ ಜನರನ್ನು ಎಚ್ಚರಿಸುವಂತಿತ್ತು.

ಗೋಣಿಕೊಪ್ಪ ಕೀರೆಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಒಂದಷ್ಟು ಭಾಗದಲ್ಲಿ ಹೂಳು ಎತ್ತದ ಕಾರಣ ಪ್ರವಾಹ ಆತಂಕ ಮೂಡಿಸಿದೆ. ಬೈಪಾಸ್ ರಸ್ತೆಯ ತೋಡು ಕೂಡ ಪ್ರವಾಹದ ಭೀತಿ ಮೂಡಿಸಿದೆ. ಸ್ಥಳೀಯ ಮನೆಗಳಿಗೆ ನುಗ್ಗುತ್ತಿರುವ ನೀರಿನಿಂದ ಒಂದೆರಡು ಮನೆಗಳ ನಿವಾಸಿಗಳು ಸಂಬಂದಿಕರ ಮನೆಗೆ ತೆರಳಿದ್ದಾರೆ.

ಗಾಳಿ, ಮಳೆ ಮುನ್ಸೂಚನೆ: ಆಗಸ್ಟ್ 8 ರಿಂದ ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸತತ 3 ಇಂಚುಗಳಷ್ಟು ಮಳೆಯಾಗುವ ಮುನ್ಸೂಚನೆ ಬಗ್ಗೆ ಕೆವಿಕೆ ಪ್ರಾಕೃತಿಕ ವಿಕೋಪ ಮುನ್ಸೂಚನಾ ವಿಭಾಗದ ಪ್ರಕಟಣೆ ತಿಳಿಸಿದೆ. ಸೋಮವಾರಪೇಟೆ ತಾಲೂಕು ಹೊರತುಪಡಿಸಿ 3 ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಬಗ್ಗೆ ಗೋಣಿಕೊಪ್ಪ ಕೆವಿಕೆ ಹವಾಮಾನ ವಿಜ್ಞಾನಿ ಸಹನಾಹೆಗ್ಡೆ ಮಾಹಿತಿ ನೀಡಿದ್ದಾರೆ.

ಮನೆಗಳು ಜಲಾವೃತ

ಸಿದ್ದಾಪುರ: ವ್ಯಾಪ್ತಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು ಕರಡಿಗೋಡು ಗ್ರಾಮದ ನದಿ ದಡದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.ಪ್ರವಾಹದ ನೀರಿನಿಂದಾಗಿ ಕರಡಿಗೋಡಿನ ನದಿ ದಡದ 12 ಮನೆಗಳು ಜಲಾವೃತಗೊಂಡಿದ್ದು, ನಿವಾಸಿಗಳು ಆತಂಕಕ್ಕೆ ಸಿಲುಕಿದ್ದಾರೆ.ಇದೇ ರೀತಿ ಮಳೆ ಮುಂದುವರಿದಲ್ಲಿ ಮತ್ತಷ್ಟು ಮನೆಗಳು ಜಲಾವೃತಗೊಳ್ಳುವ ಸಾದ್ಯತೆ ಕಂಡು ಬಂದಿದೆ.ಕರಡಿಗೋಡಿನ ನದಿ ದಡದ ನಿವಾಸಿಗಳಿಗೆ ಸ್ಥಳೀಯ ಸರಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ಕಂದಾಯ ಇಲಾಖೆಯ ವತಿಯಿಂದ ತೆರೆಯಲಾಗಿದ್ದು ಎಲ್ಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆಯೆಂದು ಆರ್.ಐ. ನಾಗೇಶ್ ರಾವ್, ವಿ.ಎ. ಓಮಪ್ಪ ಬಣಕಾರ್ ತಿಳಿಸಿದ್ದಾರೆ.

ಚಿತ್ರ ವರದಿ: ಹೆಚ್.ಕೆ. ಜಗದೀಶ್, ಡಿ.ಎಂ. ರಾಜ್‍ಕುಮಾರ್,

ಸುದ್ದಿಪುತ್ರ, ಟಿ.ಎಲ್.ಎಸ್., ವಾಸು,