ಮಡಿಕೇರಿ, ಆ. 6: ಮಂಗಳೂರಿನ ಐಜಿಪಿ ಕಚೇರಿ ಡಿವೈಎಸ್‍ಪಿ ಆಗಿದ್ದ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಲು ಸಿಬಿಐಗೆ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸಿಬಿಐ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ, ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅಕ್ಟೋಬರ್ 31ರ ವರೆಗೆ ಅವಕಾಶ ನೀಡಿತು. ತನಿಖೆಯ ಅವಧಿಯನ್ನು ಮತ್ತೆ ಆರು ತಿಂಗಳಿಗೆ ವಿಸ್ತರಿಸುವಂತೆ ಸಿಬಿಐ ಪರ ವಕೀಲರು ಮನವಿ ಮಾಡಿದ್ದರು. ಆದರೆ, ವಿಸ್ತರಣೆ ಕೋರಿ ಕಳೆದ ಮಾರ್ಚ್‍ನಲ್ಲೇ ಅರ್ಜಿ ಸಲ್ಲಿಸಿರುವದರಿಂದ ಈಗಾಗಲೇ ನಾಲ್ಕು ತಿಂಗಳು ಕಳೆದಿವೆ. ಅಕ್ಟೋಬರ್ ಅಂತ್ಯಕ್ಕೆ ವರದಿ ಸಲ್ಲಿಸಬೇಕು ಎಂದು ಪೀಠ ಸೂಚಿಸಿತು.
2016ರ ಜುಲೈ 7 ರಂದು ನಗರದ ವಸತಿಗೃಹವೊಂದರಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆ ಕೋರಿ ಗಣಪತಿ ಅವರ ತಂದೆ ಕುಶಾಲಪ್ಪ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಆದರ್ಶಕುಮಾರ್ ಗೋಯಲ್ ಹಾಗೂ ಯು.ಯು. ಲಲಿತ್ ಅವರಿದ್ದ ಪೀಠವು 2017ರ ಸೆಪ್ಟೆಂಬರ್ 5 ರಂದು ಸಿಬಿಐ ತನಿಖೆಗೆ ಆದೇಶಿಸಿತ್ತು.