ಸೋಮವಾರಪೇಟೆ, ಆ. 6: ತಾಲೂಕಿನ ಮಾದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರು ತಮ್ಮ ಮನೆಯಲ್ಲೇ ಕ್ಲಿನಿಕ್ ನಡೆಸುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಸುಳ್ಳು ದೂರು ನೀಡುವ ಮೂಲಕ ಜನಪ್ರತಿನಿಧಿಗಳು ಮತ್ತು ರೋಗಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ, ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು, ಮಾದಾಪುರ ಆಸ್ಪತ್ರೆಯ ವೈದ್ಯರು, ಜನಪ್ರತಿನಿಧಿಗಳು ಮತ್ತು ರೋಗಿಗಳ ವಿರುದ್ಧ ವಿನಾಕಾರಣ ದೂರು ನೀಡುತ್ತಿದ್ದಾರೆ. ತಕ್ಷಣ ಅವರನ್ನು ಬೇರೆಡೆಗೆ ಕಳುಹಿಸಲು ಕ್ರಮ ಕೈಗೊಳ್ಳಿ ಎಂದು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಅವರನ್ನು ಒತ್ತಾಯಿಸಿದರು.

‘ಈಗಾಗಲೇ ಆ ವೈದ್ಯರಿಗೆ ತಿಳುವಳಿಕೆ ಹೇಳಲಾಗಿದೆ. ಕೊಡಗಿನಲ್ಲಿ ವೈದ್ಯರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ; ಮೊದಲೇ ಡಾಕ್ಟರ್ಸ್ ಬರೋದಿಲ್ಲ’ ಎಂದು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಹೇಳುತ್ತಿದ್ದಂತೆ ಎದ್ದುನಿಂತ ಸದಸ್ಯ ಕುಶಾಲಪ್ಪ, ‘ಹಾಗಾದ್ರೆ ಜನಪ್ರತಿನಿಧಿಗಳು ಮತ್ತು ರೋಗಿಗಳು ಅಟ್ರಾಸಿಟಿ ಕೇಸ್ ಹಾಕಿಸಿಕೊಳ್ಳಬೇಕಾ? ಅವರ ವಿರುದ್ಧ ಮೇಲಧಿಕಾರಿಗಳಿಗೆ ವರದಿ ನೀಡಿ;ಕ್ರಮ ಜರುಗಿಸಿ’ ಎಂದು ಆಗ್ರಹಿಸಿದರು.

ತಾಲೂಕು ವ್ಯಾಪ್ತಿಯ ಬೆಟ್ಟದಳ್ಳಿ ಪಂಚಾಯಿತಿಗೆ ಸೇರುವ ಬೀದಳ್ಳಿಯಲ್ಲಿ ಆಯುರ್ವೇದ ಚಿಕಿತ್ಸಾ ಘಟಕದೊಂದಿಗೆ, ಗೋ ಶಾಲೆಯನ್ನು ಸ್ಥಾಪಿಸಲು ಮುಂದಾಗಿ, ಜಿಲ್ಲಾಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವವರ ಬಗ್ಗೆ ಇಲಾಖೆ ಏನು ಕ್ರಮ ಕೈಗೊಂಡಿದೆ? ಎಂದು ಸದಸ್ಯರಾದ ಕುಶಾಲಪ್ಪ ಅವರು ಪಶು ಸಂಗೋಪನಾ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ. ಖಾಸಗಿ ವ್ಯಕ್ತಿಗಳು ಪ್ರಾರಂಭಿಸಿರುವ ಘಟಕವಾಗಿದೆ ಎಂದು ಸಭೆಗೆ ತಿಳಿಸಿದರು.

ಬಳಗುಂದ ಸಸ್ಯ ಕ್ಷೇತ್ರದಲ್ಲಿ ಸುಮಾರು 3 ಸಾವಿರ ಕಾಳು ಮೆಣಸಿನ ಗಿಡಗಳನ್ನು ಅಲ್ಲಿನ ಸಿಬ್ಬಂದಿಯೋರ್ವರು ಕೃಷಿಕರೋರ್ವರಿಗೆ ಮಾರಾಟ ಮಾಡಿದ್ದಾರೆ ಎಂದು ಸದಸ್ಯರಾದ ಬಿ.ಬಿ. ಸತೀಶ್ ಆರೋಪಿಸಿದರು. ಇದರ ಬಗ್ಗೆ ಸೂಕ್ತ ತನಿಖೆಕೈಗೊಂಡು ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸಿಬ್ಬಂದಿಯನ್ನು ತಕ್ಷಣ ಅಮಾನತು ಮಾಡಿ ಸಂಬಂಧಿಸಿದ ನಷ್ಟವನ್ನು ಆತನಿಂದಲೇ ಭರಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ತಜ್ಞ ವೈದ್ಯರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಆದರೆ, ಕೆಲವರು ರಾಜೀನಾಮೆ ನೀಡಿ ತೆರಳುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಅಸಹಾಯಕತೆ ವ್ಯಕ್ತಪಡಿಸಿದರು.

ಸುಂಟಿಕೊಪ್ಪದಲ್ಲಿ ರಕ್ಷಾ ಸಮಿತಿಯ ಸಭೆ ಇದುವರೆಗೂ ಕರೆದಿಲ್ಲ ಎಂದು ಸದಸ್ಯೆ ವಿಮಲಾವತಿ ಆರೋಪಿಸಿದರು. ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ 600ಕ್ಕೂ ಅಧಿಕ ಕಾರ್ಡುದಾರರಿಗೆ ವಿತರಿಸಲು ಆಹಾರ ಇಲಾಖೆಯ ವತಿಯಿಂದ ಕೇವಲ 90 ಲೀಟರ್ ಸೀಮೆಎಣ್ಣೆಯನ್ನು ನೀಡಿದ್ದಾರೆ. ಇದನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಬೇಕೆಂದು ಅಧಿಕಾರಿಗಳೇ ತಿಳಿಸಬೇಕೆಂದು ಸದಸ್ಯರು ಆಗ್ರಹಿಸಿದರು.

ಸ್ಕಾರ್ಪಿಯೋ, ಬೊಲೇರೋ ವಾಹನದಲ್ಲಿ ಆಗಮಿಸುವ ಶ್ರೀಮಂತರಿಗೂ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಆದರೆ ನಿಜವಾದ ಬಡವರಿಗೆ ಇಂದಿಗೂ ಬಿಪಿಎಲ್ ಕಾರ್ಡ್ ನೀಡಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಆರೋಪಿಸಿದರು.

ಇಲ್ಲಿನ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಯಲ್ಲಿ ಯೋಗ ಮತ್ತು ಪ್ರಕೃತ್ತಿ ಚಿಕಿತ್ಸೆ ಘಟಕ ತೆರೆಯಲು 2013ರಲ್ಲಿ ಮಂಜೂರಾತಿ ನೀಡಲಾಗಿತ್ತು. ಕ್ರಿಯಾಯೋಜನೆಯಲ್ಲಿ ರೂ. 6.90 ಲಕ್ಷ ಕಾದಿರಿಸಲಾಗಿದೆ. ಕಟ್ಟಣ ನಿರ್ಮಾಣಕ್ಕೆ ತಳಪಾಯ ಮಾಡಲು ಉದ್ದೇಶಿಸಲಾಗಿದೆ ಎಂದು ವೈದ್ಯರಾದ ಸ್ಮಿತ ಸಭೆಗೆ ತಿಳಿಸಿದರು.

ಮಳೆಗಾಲದಲ್ಲಿ ರಸ್ತೆಯ ಮೇಲೆ ಬೀಳುವ ಮರಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕಂಬ ಹಾಗೂ ತಂತಿಗಳನ್ನು ತೆರವುಗೊಳಿಸಲು ವಿದ್ಯುತ್ ಇಲಾಖೆಯ ಸಹಕಾರವನ್ನು ಪಡೆದುಕೊಳ್ಳಬೇಕೆಂದು ವಲಯ ಅರಣ್ಯಾಧಿಕಾರಿ ಶಮಾ ಅವರಿಗೆ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೂಚಿಸಿದರು.

ತಾಲೂಕಿನಲ್ಲಿ 3 ಡೆಂಗ್ಯೂ ಪ್ರಕರಣ ಮತ್ತು 2 ಚಿಕುಂಗುನ್ಯಾ ಪ್ರಕರಣ ಸಾಬೀತಾಗಿದ್ದು, ಇದೀಗ ನಿಯಂತ್ರಣದಲ್ಲಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಸಮರ್ಪಕವಾಗಿ ಔಷಧ ದಾಸ್ತಾನಿದೆ ಎಂದು ಆರೋಗ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಕುಶಾಲನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಾಲೂಕು ಆರೋಗ್ಯಾಧಿಕಾರಿ ಕಚೇರಿಯನ್ನು ಉದ್ಘಾಟಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಯಿತು.

ತಾಲೂಕಿನಲ್ಲಿ ಅಕ್ರಮ ಗೋಸಾಗಾಟವನ್ನು ತಡೆಯಬೇಕಿದೆ. ನೂತನವಾಗಿ ಗೋ ಶಾಲೆಯನ್ನು ತೆರೆಯಲು ಕ್ರಮ ಕೈಗೊಳ್ಳಿ. ಅಕ್ರಮ ಗೋ ಸಾಗಾಟ ತಡೆಗಟ್ಟಲು ಪೊಲೀಸ್ ಇಲಾಖೆಗೆ ಸೂಚಿಸಬೇಕೆಂದು ಸದಸ್ಯ ಮಣಿ ಉತ್ತಪ್ಪ ಸಭೆಯಲ್ಲಿ ಹೇಳಿದರು.

ತಾಲೂಕಿನಲ್ಲಿ ಅಕ್ರಮ ಬಾಂಗ್ಲಾದೇಶಿಯರು ನೆಲೆಸಿರುವ ಬಗ್ಗೆ ತನಿಖೆ ನಡೆಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಜಿಲ್ಲೆಯಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದರೆ ಹೊರಗೆ ಹಾಕುವ ಕೆಲಸ ಆಗಬೇಕು ಎಂದು ಮಣಿ ಉತ್ತಪ್ಪ ಒತ್ತಾಯಿಸಿದರು. ಲೋಕೋಪಯೋಗಿ ಇಲಾಖೆ ಮತ್ತು ಹಾರಂಗಿ ಜಲಾನಯನ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗದ ಹಿನ್ನೆಲೆ ನೋಟೀಸ್ ನೀಡುವಂತೆ ಸಭೆ ತೀರ್ಮಾನಿಸಿತು.

ಪ್ರಧಾನ್‍ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರು ಹೆಸರು ನೋಂದಾಯಿಸಿಕೊಳ್ಳಲು ಕಾಲಾವಕಾಶವಿದೆ ಎಂದು ಕೃಷಿ ಇಲಾಖೆಯ ಡಾ. ರಾಜಶೇಖರ್ ಹೇಳಿದರು. ಅಂಬೇಡ್ಕರ್ ವಸತಿ ಶಾಲೆಯನ್ನು ತಕ್ಷಣ ಸ್ಥಳಾಂತರಗೊಳಿಸಲು ಕ್ರಮವಹಿಸಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು. ಶನಿವಾರಸಂತೆ ಬಿಸಿಎಂ ವಿದ್ಯಾರ್ಥಿ ನಿಲಯ ಶಿಥಿಲಾವಸ್ಥೆಯಲ್ಲಿ, ವಿದ್ಯಾರ್ಥಿ ನಿಲಯದ ಅವಶ್ಯಕತೆ ಇಲ್ಲದಿದ್ದರೆ ಸಮುದಾಯ ಭವನ ನಿರ್ಮಿಸಲು ಕ್ರಮವಹಿಸುವಂತೆ ಸದಸ್ಯೆ ತಂಗಮ್ಮ ಅವರು ಸಲಹೆ ನೀಡಿದರು. ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಸುನೀಲ್‍ಕುಮಾರ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.