ವೀರಾಜಪೇಟೆ, ಆ. 6: ವೀರಾಜಪೇಟೆ ಕೇರಳ ರಾಜ್ಯ ಸಂರ್ಪಕದ ಮಾಕುಟ್ಟ ಅರಣ್ಯ ವಲಯದ ವಾಟೆ ಕೊಲ್ಲಿ ಬಳಿ ಭೂ ಕುಸಿತವಾಗಿರುವ ಸ್ಥಳಕ್ಕೆ ಶಾಸಕ ಕೆ. ಜಿ ಬೋಪಯ್ಯ ಹಾಗೂ ಕೇರಳದ ಪೆರಾವೂರ್ ಶಾಸಕ ಸನ್ನಿ ಜೊಷೇಫ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಬೋಪಯ್ಯ ಇದೇ ಜಾಗದಲ್ಲಿ ಕಳೆದ ಸಾಲಿನ ಮಳೆಗೆ ಭೂ ಕುಸಿತವಾಗಿತ್ತು. ನಂತರ ತಡೆ ಗೋಡೆ ನಿರ್ಮಾಣ ಮಾಡಿದರೂ ಮತ್ತೆ ಭೂಮಿಯ ತಳ ಭಾಗದಲ್ಲಿ ಜಲ ಎದ್ದ ಕಾರಣ ತಡೆ ಗೋಡೆ ಕುಸಿದು ರಸ್ತೆಗೆ ಹಾನಿಯಾಗಿದೆ. ಈಗ ತಾತ್ಕಾಲಿಕವಾಗಿ ದುರಸ್ತಿ ಮಾಡಿ ಲಘು ವಾಹನಕ್ಕೆ 3-4 ದಿನದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ.

ಈಗ ಕುಸಿದಿರುವ ಭಾಗಕ್ಕೆ ತಡೆ ಗೋಡೆಗೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಾಗಿದೆ. ಇದರ ಬದಲು ಅರಣ್ಯದೊಳಗೆ ಸ್ವಲ್ಪ ದೂರ ಪರ್ಯಾಯ ರಸ್ತೆ ಮಾಡುವದು ಸೂಕ್ತವಾಗಿದ್ದು, ಇದಕ್ಕೆ ಎಷ್ಟು ಜಾಗ ಬೇಕಾಗುತ್ತದೆಯೋ ಅಷ್ಟು ಜಾಗವನ್ನು ಕಂದಾಯ ಇಲಾಖೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇದರ ಸರ್ವೆ ನಡೆಸುವಂತೆ ತಹಶೀಲ್ದಾರ್‍ಗೆ ಸೂಚನೆ ನೀಡಿದ್ದೇನೆ. ಇದರ ಕುರಿತು ಅರಣ್ಯ ಕಾಯಿದೆ ಯಂತೆ ವೈಲ್ಡ್ ಲೈಫ್ ಬೋರ್ಡ್‍ಗೆ ಅರ್ಜಿ ಸಲ್ಲಿಸಿ, ಬೋರ್ಡ್ ಅಧ್ಯಕರೂ ಆಗಿರುವ ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಗುತ್ತದೆ ಎಂದರು.

ಕೇರಳದ ಪೆರಾವೂರು ಶಾಸಕ ಸನ್ನಿ ಜೊಷೇಫ್ ಮಾತನಾಡಿ, ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಪರ್ಯಾಯ ಮಾರ್ಗ ಕಂಡುಕೊಂಡು ರಸ್ತೆ ಅಭಿವೃದ್ಧಿಗೆ ನಾವು ಕೈ ಜೋಡಿಸುತ್ತೇವೆ. ಕೂಟು ಹೊಳೆಯ ಹಳೆ ಸೇತುವೆ ಬದಲು ನೂತನ ಸೇತುವೆಗೂ ಅರಣ್ಯ ಇಲಾಖೆ ಅಡ್ಡಿಯಾಗಿದೆ ಇದನ್ನು ಸರಿ ಪಡಿಸಿಕೊಂಡು ಕೇರಳಕ್ಕಿರುವ ಅಂತರ್ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಆಗಬೇಕು. ಭೂ ಕುಸಿತ ಸ್ಥಳದಲ್ಲಿ ಪರ್ಯಾಯ ರಸ್ತೆ ಮತ್ತು ರಸ್ತೆ ಅಗಲೀಕರಣ ಆಗಬೇಕು. ನಿಯಮ ದಂತೆ ಅರಣ್ಯ ಇಲಾಖೆ ಯೊಂದಿಗೆ ವ್ಯವಹರಿಸಲಾಗುತ್ತದೆ ಎಂದರು.

ಈ ಸಂದರ್ಭ ಕೇರಳದ ಇರಟ್ಟಿಯ ನಗರಸಭೆಯ ಅಧ್ಯಕ್ಷೆ ಶ್ರೀಜಾ ಸಬಾಸ್ಟೀನ್ , ಜಿಲ್ಲಾ ಲೋಕೊಪ ಯೋಗಿ ಅಧಿಕಾರಿ ಇಬ್ರಾಹಿಂ, ವೀರಾಜಪೇಟೆ ಕಾರ್ಯಪಾಲಕ ಅಭಿಯಂತರ ಮೂವೇರ ಸುರೇಶ್, ಜಿ.ಪಂ. ಅಧ್ಯಕ್ಷ ಹರೀಶ್, ತಹಶೀಲ್ದಾರ್ ಪುರಂದರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಷಣ್ಮಗ, ಮತ್ತಿತರ ಗಣ್ಯರು ಇದ್ದರು.