ಕುಶಾಲನಗರ, ಆ. 6: ನೂತನ ಕಾವೇರಿ ತಾಲೂಕು ರಚನೆ ಹಿನ್ನಲೆಯಲ್ಲಿ ಕುಶಾಲನಗರ ಕೇಂದ್ರ ಸ್ಥಾನದಲ್ಲಿ ಮಿನಿ ವಿಧಾನಸೌಧ ಸ್ಥಾಪನೆಗೆ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.

ಕುಶಾಲನಗರದ ಗುಂಡೂರಾವ್ ಬಡಾವಣೆ, ಎಚ್‍ಆರ್‍ಪಿ ಕಾಲನಿ, ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡದಲ್ಲಿ ಕಂದಾಯ, ಪೊಲೀಸ್, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಸಕರೊಂದಿಗೆ ಚರ್ಚೆ ನಡೆಸಿದರು.

ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ ಸೇರಿದಂತೆ ಕಾವೇರಿ ತಾಲೂಕು ರಚನೆಗೆ ಸರಕಾರ ಅನುಮೋದನೆ ನೀಡಿದ್ದು ಸಂಬಂಧಿ ಸಿದ ಕಛೇರಿಗಳಿಗೆ ಅವಶ್ಯಕತೆಯಿರುವ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿರುವದಾಗಿ ಶಾಸಕ ಅಪ್ಪಚ್ಚುರಂಜನ್ ತಿಳಿಸಿದರು. ಮಿನಿ ವಿಧಾನಸೌಧ ನಿರ್ಮಾಣವಾಗುವದ ರೊಂದಿಗೆ ಬಹುತೇಕ ಕಛೇರಿಗಳನ್ನು ಒಂದೇ ಕಟ್ಟಡದಲ್ಲಿ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಕುಶಾಲನಗರ ಗುಂಡುರಾವ್ ಬಡಾವಣೆ ಮತ್ತು ಎಚ್‍ಆರ್‍ಪಿ ಕಾಲನಿ ಪ್ರದೇಶಗಳ ಮಾಹಿತಿ ಸಂಗ್ರಹಿಸಲಾಗಿದೆ. ಎಚ್‍ಆರ್‍ಪಿ ಕಾಲನಿಯಲ್ಲಿರುವ ಹಾರಂಗಿ ಪುನರ್ವಸತಿ ಕೇಂದ್ರಗಳ ಎಲ್ಲಾ ಕಛೇರಿಗಳನ್ನು ಹಾರಂಗಿ ಹುಲುಗುಂದದಲ್ಲಿರುವ ಅಣೆಕಟ್ಟೆ ಮುಂಭಾಗದ ಕಛೇರಿಗಳಿಗೆ ಸ್ಥಳಾಂತರಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವದು. ಉಳಿದಂತೆ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ಕಛೇರಿಗಳನ್ನು ನಿರ್ಮಿಸುವ ಚಿಂತನೆ ಮಾಡಲಾಗುತ್ತಿದೆ ಎಂದು ರಂಜನ್ ಸುದ್ದಿಗಾರರಿಗೆ ತಿಳಿಸಿದರು. ಕುಶಾಲನಗರದಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಮಾರುಕಟ್ಟೆ ಬಳಿ ಖಾಲಿ ಇರುವ ನಿವೇಶನದಲ್ಲಿ ಸರಕಾರಿ ನೌಕರರಿಗೆ ಸಿಬ್ಬಂದಿಗಳಿಗೆ ಅವಶ್ಯವಿರುವ ವಸತಿಗೃಹ ನಿರ್ಮಿಸಲು ಚಿಂತಿಸಲಾಗಿದೆ ಎಂದರು.

ಇದೇ ಸಂದರ್ಭ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಿಸಲು ಜಾಗ ಪರಿಶೀಲನೆ ಮಾಡುವ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್ ಮತ್ತು ಅಧಿಕಾರಿಗಳು ಶಾಸಕರೊಂದಿಗೆ ಚರ್ಚಿಸಿ ಸ್ಥಳ ನಿಗದಿಪಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್, ಕುಶಾಲನಗರ ಪಟ್ಟಣದಿಂದ ಸಂಚಾರಿ ಪೊಲೀಸ್ ಠಾಣೆ ಹೊಸ ವಲಯದಲ್ಲಿದ್ದು ನಾಗರಿಕರ ಮನವಿ ಮೇರೆಗೆ ಪಟ್ಟಣದ ವ್ಯಾಪ್ತಿಯಲ್ಲಿ ಕಛೇರಿ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಕ್ಷೇತ್ರದ ಶಾಸಕರೊಂದಿಗೆ ಮನವಿ ಸಲ್ಲಿಸಲಾಗಿದ್ದು ಪಟ್ಟಣ ಪಂಚಾಯ್ತಿ ಮೂಲಕ ಸ್ಥಳ ನಿಗದಿಗೊಳಿಸಲು ಕೋರಲಾಗಿದೆ ಎಂದರು.

ಈ ಸಂದರ್ಭ ಅಧಿಕಾರಿಗಳ ತಂಡದಲ್ಲಿ ಉಪವಿಭಾಗಾಧಿಕಾರಿ ಜವರೇಗೌಡ, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ಉಪ ತಹಶೀಲ್ದಾರ್ ಚಿಣ್ಣಪ್ಪ, ಡಿವೈಎಸ್ಪಿ ಮುರಳೀಧರ್, ಕಂದಾಯ ನಿರೀಕ್ಷಕರಾದ ಮಧು ಸೂದನ್, ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್, ಇಂಜಿನಿಯರ್ ಶ್ರೀದೇವಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.