ಮಡಿಕೇರಿ, ಆ. 6 : 2019ನೇ ಮುಂಗಾರು ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಸಮಸ್ಯೆಗಳು ಮತ್ತು ಅದಕ್ಕೆ ಜಿಲ್ಲಾಡಳಿತದಿಂದ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ.

ಕೊಡಗು ಜಿಲ್ಲೆಗೆ ಜೂನ್ ಮೊದಲನೇ ವಾರದಲ್ಲಿ ಮುಂಗಾರು ಕಾಲಿರಿಸಿದ್ದು, ಜೂನ್ ಮಾಹೆಯ ಅಂತ್ಯದವರೆಗೂ ಜಿಲ್ಲೆಯಲ್ಲಿ ಮುಂಗಾರು ಕ್ಷೀಣವಾಗಿ ಮುಂದುವರೆದಿತ್ತು. ಆದರೆ ಜುಲೈ ಮಾಹೆಯಲ್ಲಿ ಮುಂಗಾರು ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಚುರುಕುಗೊಂಡಿದ್ದು, ಜುಲೈ23 ರವರೆಗಿನ ಮಾಹಿತಿಯನ್ನು ಉಲ್ಲೇಖದ ಪತ್ರಿಕಾ ಪ್ರಕಟಣೆಯಲ್ಲಿ ಈಗಾಗಲೇ ನೀಡಲಾಗಿದೆ.

ಇದೀಗ ತಾ. 5 ರಿಂದ 7ರ ಬೆಳಿಗ್ಗೆವರೆಗೆ ಜಿಲ್ಲೆಯಲ್ಲಿ ಆರೆಂಜ್ `ಅಲರ್ಟ್ ಮತ್ತು ತಾ.7 ರಿಂದ 9 ರ ಬೆಳಿಗ್ಗೆವರೆಗೆ ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುತ್ತದೆ. ಜಿಲ್ಲೆಗೆ ಜನವರಿ ಮಾಹೆಯಿಂದ ಈವರೆಗೆ 1,158.62 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 2,634.29 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಶೇ.43.99 ರಷ್ಟಿರುತ್ತದೆ. ಅತೀವೃಷ್ಟಿಯಿಂದ ಆಗಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿರುತ್ತಾರೆ. ಯಾವದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವದೇ ಆತಂಕ ಪಡುವ ಅಗತ್ಯವಿರುವದಿಲ್ಲ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ 24x7 ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾಟ್ಸಪ್‍ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತಿದೆ.

ತಾ.24 ರಿಂದ ಈವರೆಗೆ ಜಿಲ್ಲೆಯಲ್ಲಿ ಬಿದ್ದ ಮಳೆಗೆ ಉಂಟಾದ ಸಮಸ್ಯೆಗಳು ಮತ್ತು ಅವುಗಳಿಗೆ ಜಿಲ್ಲಾಡಳಿತದಿಂದ ಕೈಗೊಂಡ ಕ್ರಮದ ವಿವರಗಳು ಇಂತಿವೆ.

ಜಾನುವಾರು ಪ್ರಾಣ ಹಾನಿ (ಒಟ್ಟು 10) : ಸೋಮವಾರಪೇಟೆ ತಾಲೂಕಿನಲ್ಲಿ 10 ಆಡುಗಳು ಅತಿವೃಷ್ಟಿಯಿಂದ ಮೃತಪಟ್ಟಿರುತ್ತದೆ. ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ಒಟ್ಟು ರೂ.30,000/-ಗಳನ್ನು ಸಂಬಂಧಪಟ್ಟ ಮಾಲೀಕರುಗಳಿಗೆ ಪಾವತಿಸಲಾಗಿರುತ್ತದೆ.

ವಾಸದ ಮನೆ ಹಾನಿ (ಒಟ್ಟು 11) : ಮಡಿಕೇರಿ ತಾಲೂಕಿನಲ್ಲಿ 11 ಮನೆಗಳಿಗೆ ಹಾನಿಯಾಗಿರುತ್ತದೆ. ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ಒಟ್ಟು

ರೂ.3,68,802/- ಗಳನ್ನು ಸಂಬಂಧಪಟ್ಟ ಸಂತ್ರಸ್ತರಿಗೆ ಪಾವತಿಸಲಾಗಿರುತ್ತದೆ.

ರಸ್ತೆ ಮತ್ತು ಇತರ ಮೂಲಭೂತ ಸೌಕರ್ಯಗಳು : ವೀರಾಜಪೇಟೆ-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಭಾರೀ ಮಳೆಯಿಂದ ರಸ್ತೆ ಕುಸಿದು ಹೋಗಿರುತ್ತದೆ. ತುರ್ತಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ, ಮುಂಜಾಗ್ರತಾ ಕ್ರಮವಾಗಿ ಎಲಾ ವಿಧದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಅಲ್ಲದೆ ಕುಸಿದು ಹೋದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಲಾಗುತ್ತಿದೆ. ತಾತ್ಕಾಲಿಕ ರಸ್ತೆ ಕಾಮಗಾರಿ ಪೂರ್ಣಗೊಂಡ ತಕ್ಷಣ ಶಾಶ್ವತ ಕಾಮಗಾರಿಗೆ ಚಾಲನೆ ನೀಡಲಾಗುವದು. ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಆಗುತ್ತಿರುವ ಭಾರೀ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದ್ದು, ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಮಡಿಕೇರಿ- ಭಾಗಮಂಡಲ ಮತ್ತು ನಾಪೋಕ್ಲು-ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸ್ಥಳದಲ್ಲಿ ಅಗ್ನಿ ಶಾಮಕ, ಗೃಹ ರಕ್ಷಕ ದಳದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, ಫೈಬರ್ ಬೋಟ್ ಮತ್ತು ರಿವರ್ ರಾಫ್ಟ್ ಬಳಸಿ ಸಾರ್ವಜನಿಕರನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಿಸಲಾಗುತ್ತಿದೆ. ಹೋಂ ಗಾರ್ಡ್ ಸಿಬ್ಬಂದಿಗಳು ಸ್ಥಳದಲ್ಲಿ 24x7 ಕಾರ್ಯನಿರ್ವಹಿಸುತ್ತಿದ್ದಾರೆ. ಇವುಗಳಷ್ಟೇ ಅಲ್ಲದೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಣ್ಣ ಪುಟ್ಟ ಮಣ್ಣು ಕುಸಿತಗಳು ಉಂಟಾಗುತ್ತಿದ್ದು, ತಕ್ಷಣವೇ ಅವುಗಳನ್ನು ಸಂಬಂಧಪಟ್ಟ ಇಲಾಖೆಗಳ ಮುಖಾಂತರ ತೆರವುಗೊಳಿಸಲಾಗುತ್ತಿದೆ.

ಹಾಗೆಯೇ ಜಿಲ್ಲೆಯ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬ, ಲೈನ್‍ಗಳು ನೆಲ ಕಚ್ಚಿದ್ದು, ತಕ್ಷಣವೇ ಚೆಸ್ಕಾಂ ಇಲಾಖೆಯಿಂದ ಕ್ರಮ ವಹಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆ. ಕೆಲವು ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಅಗ್ನಿಶಾಮಕ ಮತ್ತು ಸ್ಥಳೀಯ ಪ್ರಾಧಿಕಾರಗಳಿಂದ ತಕ್ಷಣವೇ ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಅಪಾಯಕಾರಿಯಾಗಿರುವ, ವಿದ್ಯುತ್ ಲೈನ್‍ಗಳ ಮೇಲೆ ಬಾಗಿರುವ ಮರದ ಕೊಂಬೆಗಳನ್ನು ತೆಗೆಯಲು ಮನವಿಗಳು ಬಂದಿದ್ದು, ಅರಣ್ಯ ಇಲಾಖೆ ಮತ್ತು ಚೆಸ್ಕಾಂ ಇಲಾಖೆಯವರ ಸಹಕಾರದೊಂದಿಗೆ ಮರದ ಕೊಂಬೆಗಳನ್ನು ತೆಗೆಯಲು ಆದ್ಯತೆ ಮೇಲೆ ಕ್ರಮ ವಹಿಸಲಾಗುತ್ತಿದೆ. ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ:08272-221077 ಮತ್ತು ವಾಟ್ಸಪ್ ನಂ. 8550001077ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.