ನಾಪೋಕ್ಲು, ಆ. 6: ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನೆಲಜಿ ಚೀಯಕಪೂವಂಡ ಸಚಿನ್ ಮುತ್ತಪ್ಪನವರ ತೋಟದಲ್ಲಿ ಅಡ್ಡಾಡಿರುವ ಕಾಡಾನೆಗಳಿಂದ ತೋಟದ ಕೃಷಿ ಹಾಳಾಗಿದೆ. ತೋಟದಲ್ಲಿನ ಕಾಫಿ, ಬಾಳೆ, ಶುಂಠಿ ಗಿಡಗಳು ಕಾಡಾನೆಗಳ ಧಾಳಿಗೆ ತುತ್ತಾಗಿ ನಷ್ಟ ಸಂಭವಿಸಿದೆ. ಕಾಡಾನೆಗಳ ಧಾಳಿಯಿಂದ ಇನ್ನಿತರ ರೈತರ ಬಾಳೆತೋಟ ಸಂಪೂರ್ಣವಾಗಿ ನಾಶವಾಗಿವೆ.
ಪ್ರತಿದಿನ ಸಂಜೆಯಾಗುತ್ತಿದ್ದಂತೆ ಆನೆಗಳು ಧಾಳಿ ಇಡುತ್ತಿರುವದು ಕೃಷಿಕರಿಗೆ ನುಂಗಲಾರದ ತುತ್ತಾಗಿದೆ. ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸಿದರೂ ಫಲ ಲಭಿಸಿಲ್ಲ. ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕಿದೆ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರನ್ನು ಸಚಿನ್ ಒತ್ತಾಯಿಸಿದ್ದಾರೆ.