ಮಡಿಕೇರಿ, ಆ. 6: ಕೊಡಗಿನ ಪವಿತ್ರ ಮಣ್ಣಿನಲ್ಲಿ ಸಮೃದ್ಧ ಸಾಹಿತ್ಯ ಕೃಷಿಯಲ್ಲಿ ಸಾಕಷ್ಟು ಮಂದಿ ತೊಡಗಿಸಿಕೊಂಡಿದ್ದು, ಮಹಿಳೆಯರಿಗೆ ಸಾಹಿತ್ಯ ರಂಗದಲ್ಲಿ ಆಸಕ್ತಿ ಹೆಚ್ಚಿರುವದು ಗಮನಾರ್ಹವಾಗಿದೆ. ಸಾಹಿತ್ಯ, ಸಾಂಸ್ಕøತಿಕ ಜೀವನದಲ್ಲಿ ಜಿಲ್ಲೆಯ ಯುವಪೀಳಿಗೆಯೂ ಹೆಚ್ಚು ಆಸಕ್ತಿ ವಹಿಸುತ್ತಿರುವ ಬೆಳವಣಿಗೆ ಕೊಡಗಿನ ಭವಿಷ್ಯ ಈ ವಿಚಾರದಲ್ಲಿ ಉಜ್ವಲವಾಗಿದೆ ಎಂದು ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಶ್ಲಾಘಿಸಿದ್ದಾರೆ.
ಚೇರಂಬಾಣೆ ಕೊಡವ ಸಮಾಜದಲ್ಲಿ ಆಯೋಜಿತ ಮಡಿಕೇರಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ನೆರವೇರಿಸಿದ ಸೋಮೇಶ್, ನಡಿಕೇರಿಯಂಡ ಚಿಣ್ಣಪ್ಪ ಅವರ ಸಾಹಿತ್ಯ ಕೃತಿಗಳು ಕೊಡಗಿನ ಸಾಹಿತ್ಯ ಲೋಕವನ್ನು ಶ್ರೀಮಂತವಾಗಿಸಿತ್ತು. ಈ ನೆಲದಲ್ಲಿ ಸಮೃದ್ಧವಾಗಿ ಸಾಹಿತ್ಯ ಕೃಷಿ ಸಾಧ್ಯ ಎಂದು ಸಾವಿರಾರು ಲೇಖಕರು, ಕವಿಗಳು ನಿರೂಪಿಸಿದ್ದಾರೆ ಎಂದರಲ್ಲದೇ, ಕೊಡಗಿನ ಸಾಹಿತ್ಯ ರಂಗ ಇಲ್ಲಿನ ದೈವತ್ವ, ಶೂರತ್ವದ ಗುಣಗಳಷ್ಟೇ ಪ್ರಬಲವಾಗಿದ್ದು, ದೇವನಿರ್ಮಿತ ಕೊಡಗಿನ ಪುಣ್ಯ ನೆಲ ಇಡೀ ಪ್ರಪಂಚದಲ್ಲಿಯೇ ಎಲ್ಲಿಯೂ ದೊರಕದಷ್ಟು ಸಮೃದ್ಧವಾಗಿದೆ, ಮನುಷ್ಯನ ಆಂತರಿಕ ಸುಖಕ್ಕೂ ಈ ನೆಲ ಅತ್ಯುತ್ತಮವಾಗಿದೆ ಎಂದು ಹೇಳಿದರು.
ಸಾಹಿತ್ಯ, ಸಾಂಸ್ಕøತಿಕ ಜೀವನದಲ್ಲಿ ಯುವಪೀಳಿಗೆಯೂ ಹೆಚ್ಚು ಆಸಕ್ತಿ ವಹಿಸುತ್ತಿರುವದು ಉತ್ತಮ ಬೆಳವಣಿಗೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯ ಸಾಕಷ್ಟು ಸುಪ್ತ ಪ್ರತಿಭೆಗಳಿಗೆ ವೇದಿಕೆ ನೀಡಿದೆ. ದೇವಾಲಯ ನಿರ್ಮಾಣ, ಶಿಕ್ಷಣ ಸಂಸ್ಥೆಯ ಪ್ರಾರಂಭ, ವನ್ಯಜೀವಿಗಳ ಆರೈಕೆಯಷ್ಟೇ ಸಾಹಿತ್ಯ ಮತ್ತು ಸಾಂಸ್ಕøತಿಕ ರಂಗದಲ್ಲಿ ಸಕ್ರಿಯರಾಗುವದು ಮಾನವನಾಗಿ ಹುಟ್ಟಿದ ಮೇಲೆ ಅಗತ್ಯವಾದ ಕ್ರಿಯೆಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಇಂಥ ಸಮ್ಮೇಳನ ಸಾಹಿತ್ಯ ರಚನೆಗೆ ಮತ್ತಷ್ಟು ಪೆÇ್ರೀತ್ಸಾಹ ತರುವಂತಾಗಲಿ ಎಂದು ಹಾರೈಸಿದರು. ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ್ ಮಾತನಾಡಿ, ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳು ಹೆಚ್ಚುತ್ತಲೇ ಇರಬೇಕು. ಅನ್ಯ ಭಾಷೆಗಳ ಪ್ರಭಾವ ಹೆಚ್ಚಾದರೆ ಕನ್ನಡಕ್ಕೆ ಅಪಾಯ ಖಂಡಿತಾ ಎಂಬದನ್ನೂ ಮರೆಯಬಾರದು ಎಂದೂ ಜಯರಾಮ್ ಕಿವಿಮಾತು ಹೇಳಿದರು.
ತಲಕಾವೇರಿ - ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಕೊಡಗಿನಲ್ಲಿ ತಾನು ಗಮನಿಸಿದಂತೆ ಮಹಿಳೆಯರಿಗೆ ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿಯಿದೆ. ಹೀಗಾಗಿಯೇ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಾರೆ ಎಂದರಲ್ಲದೇ; ಮಹಿಳೆಯರೇ ಮನೆಯಲ್ಲಿ ಮಕ್ಕಳಿಗೆ ಮೊದಲ ಗುರುವಾಗಿರುವದರಿಂದ ಈ ಬೆಳವಣಿಗೆ ಮೆಚ್ಚುವಂಥದ್ದು ಎಂದರು.
ಕನ್ನಡ ಸಾಹಿತ್ಯ ಪರಿಷತ್‍ನ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಚೇರಂಬಾಣೆ ಗ್ರಾಮ ಪಂಚಾಯಿತಿ, ಸ್ಥಳೀಯ ವಿದ್ಯಾಸಂಸ್ಥೆಗಳ ಬೆಂಬಲದಿಂದ ಈ ಗ್ರಾಮದಲ್ಲಿ ಕನ್ನಡಮ್ಮನ ಸಾಹಿತ್ಯ ಸೇವೆ ಅತ್ಯಂತ ಯಶಸ್ವಿಗೆ ಕಾರಣವಾಯಿತು. ಕನ್ನಡ ಭಾಷೆ ಅತ್ಯಂತ ಸುಲಲಿತವಾಗಿದ್ದು ಕನ್ನಡ ಭಾಷೆಗೆ ಖಂಡಿತಾ ಉಜ್ವಲ ಭವಿಷ್ಯವಿದೆ. ಹೀಗಾಗಿ ಕನ್ನಡಕ್ಕೆ ಧಕ್ಕೆ ಬಂದೀತು ಎಂಬ ಆತಂಕ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಚೇರಂಬಾಣೆಯ ಗ್ರಾ.ಪಂ. ಅಧ್ಯಕ್ಷ ಅಶೋಕ್, ಚೇರಂಬಾಣೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುಕ್ಕಾಟಿ ಎನ್. ಮಾದಪ್ಪ ವೇದಿಕೆಯಲ್ಲಿದ್ದರು. ಕಸಾಪ ಜಿಲ್ಲಾ ನಿರ್ದೇಶಕ ಎಂ.ಬಿ. ಜೋಯಪ್ಪ ಸ್ವಾಗತಿಸಿ ಕೆ.ಎಲ್. ರೋಹಿಣಿ ನಿರೂಪಿಸಿದರು.
ಮಡಿಕೇರಿ ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ಚೇರಂಬಾಣೆ ವ್ಯಾಪ್ತಿಯ ಗ್ರಾಮಸ್ಥರು ಕೊಡವ ಸಮಾಜದಲ್ಲಿ ಕಿಕ್ಕಿರಿದು ಸೇರಿದ್ದು ಗಮನಾರ್ಹವಾಗಿತ್ತು.