ಕುಶಾಲನಗರ, ಆ. 6: ಮೈಸೂರಿನಿಂದ ಕುಶಾಲನಗರಕ್ಕೆ ನೂತನ ಹವಾನಿಯಂತ್ರಿತ ವೋಲ್ವೋ ಸಾರಿಗೆ ಬಸ್ ಸೌಲಭ್ಯ ಈ ತಿಂಗಳ 9 ರಿಂದ ಪ್ರಾರಂಭವಾಗಲಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೈಸೂರು ನಗರ ಸಾರಿಗೆ ವಿಭಾಗ ಈ ಯೋಜನೆ ಪ್ರಾರಂಭಿಸಲಿದ್ದು ಮೈಸೂರಿನಿಂದ ಕುಶಾಲನಗರಕ್ಕೆ ಕೇವಲ 2 ಗಂಟೆಗಳ ಅವಧಿಯ ಪ್ರಯಾಣದೊಂದಿಗೆ ರೂ. 100 ದರ ನಿಗದಿಪಡಿಸಲಾಗಿದೆ ಎಂದು ಮೈಸೂರು ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಮರಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಮೈಸೂರಿನಿಂದ 3 ಬಸ್‍ಗಳು ಮತ್ತು ಕುಶಾಲನಗರದಿಂದ 3 ಬಸ್‍ಗಳು ಸಂಚರಿಸಲಿದ್ದು ಪ್ರಯಾಣಿಕರ ಒತ್ತಡ ಹೆಚ್ಚಾದಲ್ಲಿ ಹೆಚ್ಚುವರಿ 4 ಬಸ್‍ಗಳನ್ನು ಸಂಚಾರಕ್ಕೆ ಒದಗಿಸಲಾಗುವದು. ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಕೆಲವೇ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ. ಮೈಸೂರಿನಿಂದ ಹೊರಟು ಇಲವಾಲ, ಹುಣಸೂರು, ಪಿರಿಯಾಪಟ್ಟಣ, ಬೈಲುಕೊಪ್ಪ, ಕುಶಾಲನಗರ ನಿಲ್ದಾಣಗಳಲ್ಲಿ ಬಸ್ ನಿಲುಗಡೆಗೊಳ್ಳುವದು. ಮೈಸೂರಿನಿಂದ ಬೆಳಗ್ಗೆ 8.15 ಕ್ಕೆ ನಿರ್ಗಮಿಸುವ ಬಸ್ ರಾತ್ರಿ 8.15 ರ ತನಕ ಸಂಚಾರ ನಡೆಸಲಿದೆ. ಕುಶಾಲನಗರದಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6.30 ರ ತನಕ ಬಸ್ ಸಂಚರಿಸುವ ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದು ಮರಿಗೌಡ ತಿಳಿಸಿದ್ದಾರೆ.