ಕುಶಾಲನಗರ, ಆ. 6: ಭಾಷೆ ನಾಶವಾದಲ್ಲಿ ಸಂಸ್ಕøತಿ ನಾಶವಾದಂತಾಗುತ್ತದೆ. ಸಣ್ಣ ಭಾಷೆಗಳಿಗೆ ಶಕ್ತಿ ನೀಡಿ ಉಳಿಸುವ ಪ್ರಯತ್ನ ಸಾಗಬೇಕಾಗಿದೆ ಎಂದು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಂ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಹಾಗೂ ಗೌಡ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ಗೌಡ ಸಮಾಜದ ಆವರಣದಲ್ಲಿ ಹಮ್ಮಿಕೊಂಡಿದ್ದ ಆಟಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಅರೆಭಾಷೆ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ಅಕಾಡೆಮಿಗಳ ಮೂಲಕ ಭಾಷಾ ಸಬಲೀಕರಣ ಸಾಧ್ಯ ಎಂದ ಜಯರಾಂ, ಹಬ್ಬಗಳ ಮೂಲಕ ಸಂಸ್ಕøತಿ ಬಿಂಬಿಸಲು ಸಾಧ್ಯ. ಅರೆಭಾಷೆಯನ್ನು ಶಿಕ್ಷಣದಲ್ಲಿ ಐಚ್ಛಿಕ ಭಾಷೆಯಾಗಿ ಬಳಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಮೂಲಕ ಅರೆಭಾಷೆ ಮೇಲೆ ಬೆಳಕು ಚೆಲ್ಲುವ ಕೆಲಸವಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ಕುಮಾರ್ ಮಾತನಾಡಿ, ಕೊಡಗಿನ ಪ್ರಮುಖ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಯುವ ಜನಾಂಗಕ್ಕೆ ಅರಿವು ಮೂಡಿಸುವದು ಅತ್ಯಗತ್ಯ ಎಂದರು. ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಬೀನಾ ಸೀತಾರಾಂ, ಗೌಡ ಸಮಾಜದ ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಸೂದನ ಗೋಪಾಲ್, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ರೂಪ ಗಣೇಶ್ ಅವರುಗಳು ಆಟಿ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿ ಮಾಜಿ ನಿರ್ದೇಶಕಿ ಕಡ್ಲೆರ ತುಳಸಿ, ಸುರೇಶ್ ಗೌಡ, ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಳ್ಯಕೋಡಿ ಮಾದಪ್ಪ, ವೈದ್ಯೆ ಡಾ.ಶ್ರದ್ದಾ ಮತ್ತಿತರರು ಇದ್ದರು.
ಕಾರ್ಯಕ್ರಮದ ಅಂಗವಾಗಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಆಟಿ ಸೊಪ್ಪಿನಿಂದ ತಯಾರಿಸಿದ ವಿವಿಧ ರೀತಿಯ ಭಕ್ಷ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಆಟಿ ಪಾಯಸ, ಹಲ್ವ, ಕಣಲೆ ಪಲ್ಯ, ಸಾರು, ಏಡಿ ಫ್ರೈ, ವಿವಿಧ ರೀತಿಯ ಸಿಹಿ ತಿಂಡಿಗಳು, ರೊಟ್ಟಿ, ನೀರುದೋಸೆ, ಇಡ್ಲಿ, ಕಡುಬು, ನಾಟಿ ಕೋಳಿ ಸಾರು, ಕೆಸುವಿನ ಪತ್ರೊಡೆ, ಪುಳಿ ಮುಂಚಿ ಮೊದಲಾದ ಭಕ್ಷ್ಯಗಳು ನೆರೆದವರ ಬಾಯಲ್ಲಿ ನೀರೂರಿಸಿದವು. ಸೂದನ ಲೀಲಾ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು, ಬೆಪ್ಪಾರನ ರೋಹಿಣಿ ಸ್ವಾಗತಿಸಿ, ಜಬ್ಬನ ಲತಾ ವಂದಿಸಿದರು.