ಸೋಮವಾರಪೇಟೆ, ಆ.5: ಚುನಾವಣೆ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದಡಿ ಎಲ್ಲರ ಏಳಿಗೆಗೆ ಶ್ರಮಿಸಲಾಗುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವದು ದಿಟ್ಟ ಕ್ರಮ. ತ್ರಿವಳಿ ತಲಾಕ್‍ನ್ನು ಕಾನೂನು ಬಾಹಿರಗೊಳಿಸುವ ಮೂಲಕ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಜೀವನ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನ ಕ್ರಾಂತಿಕಾರಕ ಎಂದು ಬಣ್ಣಿಸಿದರು.

ಭಾರತದ ಭೂ ಭಾಗವಾಗಿದ್ದರೂ ಹಲವಷ್ಟು ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಇದರಿಂದಾಗಿ ಒಂದೇ ದೇಶದಲ್ಲಿ ಎರಡು ಧÀ್ವಜ, ಎರಡು ಕಾನೂನಿಗಳಿದ್ದವು. ಹಿಂದಿನ ಸರ್ಕಾರಗಳು ದೇಶದ ಏಕತೆಯ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ದೇಶ- ಒಂದು ಕಾನೂನು ಎಂಬಂತೆ ತೀರ್ಮಾನ ಕೈಗೊಂಡಿರುವದು ಪ್ರಶಂಸನೀಯ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಕೊಡಗಿಗೆ ಬೇಡವಾದ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ್ದಾರೆ.

ಕಳೆದ ಸಾಲಿನ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದರೂ ಹಿಂದಿನ ರಾಜ್ಯ ಸರ್ಕಾರ ಪರಿಹಾರ ಧನ ಒದಗಿಸಿಲ್ಲ. ಕೇಂದ್ರದ ಎನ್‍ಡಿಆರ್‍ಎಫ್‍ನಿಂದ ಅನುದಾನ ಬಂದಿದ್ದರೂ ಜಿಲ್ಲೆಗೆ ನೀಡಿಲ್ಲ. ಕೇವಲ 131 ಕೋಟಿ ಅನುದಾನ ನೀಡುವ ಮೂಲಕ ಪರಿಹಾರದಲ್ಲೂ ಅನ್ಯಾಯ ಎಸಗಿತ್ತು ಎಂದು ಟೀಕಿಸಿದರು.

ಈ ಬಗ್ಗೆ ಈಗಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಗಮನ ಸೆಳೆದ ಸಂದರ್ಭ ರೂ. 540 ಕೋಟಿ ಪರಿಹಾರ ಒದಗಿಸಿದ್ದಾರೆ. ಇದರೊಂದಿಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದ ಸಿ ಮತ್ತು ಡಿ ಜಾಗವನ್ನು ನೀಡುವ ಬಗ್ಗೆಯೂ ಪ್ರಸ್ತಾಪಿಸಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.

ಗೋಷ್ಠಿಯಲ್ಲಿದ್ದ ಬಿಜೆಪಿ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ಮಾತನಾಡಿ, ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆರವು ಗೊಳಿಸಿದ್ದರಿಂದ ಭಯೋತ್ಪಾದನೆಗೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ. ಮಂಜುನಾಥ್ ಮಾತನಾಡಿ, ಕಾಶ್ಮೀರದ ವಿಚಾರದಲ್ಲಿ ಬಿಜೆಪಿಯ ಬದ್ದತೆ ಪ್ರಕಟವಾಗಿದೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಶ್ಯಾಂಪ್ರಸಾದ್ ಮುಖರ್ಜಿ ಅವರ ಹೋರಾಟಕ್ಕೆ ಹಲವು ದಶಕಗಳ ನಂತರ ಫಲ ದೊರೆತಿದೆ ಎಂದು ಅಭಿಪ್ರಾಯಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸಮಿತಿ ಸದಸ್ಯೆ ಉಷಾ ತೇಜಸ್ವಿ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು ಅವರುಗಳು ಉಪಸ್ಥಿತರಿದ್ದರು.