ಮಡಿಕೇರಿ, ಆ. 5: ಜಿಲ್ಲೆಯಲ್ಲಿ ಇಂದು ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು. ಈ ಪ್ರಯುಕ್ತ ಹಲವು ದೇವಾಲಯಗಳಲ್ಲಿ ನಾಗದೇವರಿಗೆ ವಿಶೇಷ ಅಭಿಷೇಕಗಳು - ಪೂಜೆಗಳು ನೆರವೇರಿದವು.
ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿಯು ವಿವಿಧ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆದವು. ಓಂಕಾರೇಶ್ವರ ದೇವಾಲಯ ಅಶ್ವತ್ಥಕಟ್ಟೆ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ದಂಡಿನ ಮಾರಿಯಮ್ಮ ದೇವಾಲಯ, ಕೋಟೆ ಮಾರಿಯಮ್ಮ ದೇವಾಲಯ, ದೃಷ್ಠಿ ಗಣಪತಿ ದೇವಾಲಯ, ಮುತ್ತಪ್ಪ ದೇವಾಲಯ ಸೇರಿದಂತೆ ಹಲವಾರು ನಾಗ ಸನ್ನಿಧಿಗಳಲ್ಲಿ ನಾಗದೇವರಿಗೆ ಎಳನೀರು ಅಭಿಷೇಕ, ಹಾಲಿನ ಅಭಿಷೇಕ, ಮಹಾಪೂಜೆ, ಮಹಾಮಂಗಳಾರತಿಯೊಂದಿಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ಕೂಡಿಗೆ
ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಾಗರಪಂಚಮಿ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.
ಇದರ ಅಂಗವಾಗಿ ಶ್ರೀ ಉದ್ಬವ ಸುಬ್ರಹ್ಮಣ್ಯ ಸ್ವಾಮಿಗೆ 1008 ಲೀಟರ್ ಕಬ್ಬಿನಹಾಲಿನ ಅಭಿಷೇಕ, ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ವಿಶೇಷ ಪೂಜೆ, ವಿವಿಧ ಅಭಿಷೇಕಗಳು, ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನದ ಪ್ರಧಾನ ಅರ್ಚಕ ನವೀನ್‍ಭಟ್ ಮತ್ತು ಅನಂತಮೂರ್ತಿ ಅವರ ನೇತೃತ್ವದಲ್ಲಿ ನಡೆದವು.
ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ; ಸಂಜೆ ರಂಗಪೂಜೆ ಮತ್ತು ವಿವಿಧ ಪೂಜಾ ಕಾರ್ಯಗಳು ನೆರವೇರಿದವು.
ಗುಡ್ಡೆಹೊಸೂರು
ಇಲ್ಲಿಗೆ ಸಮೀಪದ ಸುಣ್ಣದಕೆರೆ ಗ್ರಾಮದ ಶ್ರೀ ಮುನೇಶ್ವರ ಮತ್ತು ನಾಗ ದೇವರ ಬನದಲ್ಲಿ ನಾಗರಪಂಚಮಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಈ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಪೊನ್ನಪ್ಪ, ಕಾರ್ಯದರ್ಶಿ ಗೋಪಾಲ ಮತ್ತು ಸದಸ್ಯರು ಇದ್ದರು.
ಕರಿಕೆ
ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನಶಾಸ್ತಾವು ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.
ದೇವಾಲಯದ ಆವರಣದಲ್ಲಿರುವ ನಾಗ ದೇವರಿಗೆ ಕ್ಷೀರಾಭಿಷೇಕ, ನಡೆಸಲಾಯಿತು. ದೇವಾಲಯದ ಅಧÀ್ಯಕ್ಷ ಕೆ.ಎ. ನಾರಾಯಣ, ಉಪಾಧ್ಯಕ್ಷ ಕೆ.ಡಿ.ಬಾಲಕೃಷ್ಣ, ಕಾರ್ಯದರ್ಶಿ ತಾರೇಶ ಹೊದ್ದೆಟ್ಟಿ, ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಸೋಮವಾರಪೇಟೆ
ಸಮೀಪದ ಸಿದ್ದಲಿಂಗಪುರ- ಅರಶಿಣಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ನಾಗರಪಂಚಮಿ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯ ಆವರಣದಲ್ಲಿರುವ ಶ್ರೀ ನವನಾಗ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ರುದ್ರಾಭಿಷೇಕ, ಗಣಹೋಮ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ನಡೆದವು.
ಪಟ್ಟಣದ ಆನೆಕೆರೆ ಬಳಿಯಿರುವ ನಾಗ ಸನ್ನಿಧಿಯಲ್ಲೂ ವಿಶೇಷ ಪೂಜೆಗಳು ನಡೆದವು. ಸುತ್ತಮುತ್ತಲಿನ ಭಕ್ತಾದಿಗಳು ನಾಗ ಬನಕ್ಕೆ ಆಗಮಿಸಿ, ಪೂಜೆ ನೆರವೇರಿಸಿದರು.
ಸುಂಟಿಕೊಪ್ಪ
ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದಲ್ಲಿ ನಾಗನಿಗೆ ಹೂವಿನ ಅಲಂಕಾರ, ಹಾಲಿನ ಅಭಿಷೇಕ, ಎಳನೀರು ಅಭಿಷೇಕ ನಡೆಸಲಾಯಿತು. ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ದೇವಾಲಯ ಸಮಿತಿಯ ಸುಕುಮಾರ್, ಸುರೇಶ್ ಗೋಪಿ, ದಿನು ದೇವಯ್ಯ, ಸುನಿಲ್, ಮನು ಸೇರಿದಂತೆ ಇತರರು ಪಾಲ್ಗೊಂಡಿದ್ದರು.