ಮಡಿಕೇರಿ, ಆ. 5: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ 7.52 ಇಂಚು ಮಳೆಯಾಗಿದೆ. ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಒಟ್ಟು 125 ಇಂಚು ಮಳೆ ದಾಖಲಾಗಿದೆ. ಇನ್ನು ಭಾಗಮಂಡಲ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ 6 ಇಂಚು ಮಳೆ ಸುರಿದಿದ್ದು, ಸಂಗಮ ತಟ ಹಾಗೂ ಅಯ್ಯಂಗೇರಿ ಮಾರ್ಗದಲ್ಲಿ ನೀರಿನ ಮಟ್ಟ ಏರತೊಡಗಿದೆ. ರಸ್ತೆಯಲ್ಲಿ ನೀರು ಹರಿಯುವಂತಾಗಿದ್ದು, ಮಳೆ ಹೀಗೆ ಮುಂದುವರಿದರೆ ನಾಪೋಕ್ಲು ಹಾಗೂ ಮಡಿಕೇರಿ ರಸ್ತೆ ಸಂಪರ್ಕ ಸ್ಥಗಿತಗೊಳ್ಳುವ ಸಂಭವವಿದೆ.ಇನ್ನು ಉತ್ತರ ಕೊಡಗಿನ ಶಾಂತಳ್ಳಿ ವ್ಯಾಪ್ತಿಯಲ್ಲಿ 4.53 ಇಂಚು ಮಳೆಯಾಗಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ಸುತ್ತಮುತ್ತ ಸರಾಸರಿ 4 ಇಂಚು ಮಳೆ ದಾಖಲಾಗಿದ್ದು, ಪೊನ್ನಂಪೇಟೆಯಿಂದ ಹಳ್ಳಿಗಟ್ಟುವಿಗೆ ತೆರಳುವ ಕುಂದ ರಸ್ತೆಯ ಸೇತುವೆಯು ಮುಳುಗಡೆಗೊಂಡು ಅಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಂದಾಯ ಅಧಿಕಾರಿ ತಿಳಿಸಿದ್ದಾರೆ.ಅಲ್ಲಲ್ಲಿ ಮಳೆ: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 2.45 ಇಂಚು ಮಳೆಯಾಗಿದ್ದು, ನಾಪೋಕ್ಲು ಸುತ್ತ ಮುತ್ತ 3.16 ಇಂಚು ಹಾಗೂ ಸಂಪಾಜೆ ವ್ಯಾಪ್ತಿಯಲ್ಲಿ 1.74 ಇಂಚು ಮಳೆ ದಾಖಲಾಗಿದೆ.

ಸೋಮವಾರಪೇಟೆ ಸುತ್ತಮುತ್ತ 2.06 ಇಂಚು, ಶನಿವಾರಸಂತೆಗೆ 1.89 ಇಂಚು, ಕೊಡ್ಲಿಪೇಟೆ 2.47 ಇಂಚು, ಕುಶಾಲನಗರ 0.90 ಇಂಚು ಹಾಗೂ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ 1.03 ಇಂಚು ಮಳೆ ದಾಖಲಾಗಿದೆ.

ವೀರಾಜಪೇಟೆಯಲ್ಲಿ 2.73 ಇಂಚು, ಹುದಿಕೇರಿ 1.90 ಇಂಚು, ಶ್ರೀಮಂಗಲ

(ಮೊದಲ ಪುಟದಿಂದ) ಸುತ್ತಮುತ್ತ 1.70 ಇಂಚು, ಅಮ್ಮತ್ತಿಗೆ 1.04 ಇಂಚು ಹಾಗೂ ಬಾಳೆಲೆ ವ್ಯಾಪ್ತಿಯಲ್ಲಿ 1.89 ಇಂಚು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ 2.58 ಇಂಚು ಸರಾಸರಿ ಮಳೆಯಾಗಿದೆ.

ವಾರ್ಷಿಕ ಮಳೆ: ಕಳೆದ ಜನವರಿಯಿಂದ ಇದುವರೆಗೆ ಕೊಡಗಿನಲ್ಲಿ ಸರಾಸರಿ 42.59 ಇಂಚು ಮಳೆಯಾಗಿದೆ. ಹಿಂದಿನ ವರ್ಷ ಈ ಅವಧಿಗೆ 103.52 ಇಂಚು ದಾಖಲಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ 57.52 ಇಂಚು ಮಳೆಯಾದರೆ, ಕಳೆದ ವರ್ಷ ಈ ಅವಧಿಗೆ 146.06 ಇಂಚು ದಾಖಲಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಪ್ರಸಕ್ತ 44.67 ಇಂಚು ದಾಖಲಾಗಿದ್ದು, ಕಳೆದ ಸಾಲಿನಲ್ಲಿ 82.64 ಇಂಚು ದಾಖಲಾಗಿತ್ತು. ಅತ್ತ ಸೋಮವಾರಪೇಟೆ ತಾಲೂಕಿನಲ್ಲಿ ಈ ಅವಧಿಗೆ ಅತ್ಯಲ್ಪ ಪ್ರಮಾಣದಲ್ಲಿ 25.58 ಇಂಚು ಹಾಗೂ ಕಳೆದ ವರ್ಷ ಈ ವೇಳೆಗೆ 82.03 ಇಂಚು ಮಳೆಯಾಗಿತ್ತು.

ಹಾರಂಗಿ: ಹಾರಂಗಿ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, 1230 ಕೂಸೆಕ್ಸ್ ಬರುವಂತಾಗಿದೆ. ಕಳೆದ ವರ್ಷ ಈ ಅವಧಿಗೆ 5662 ಕ್ಯೂಸೆಕ್ಸ್‍ನೊಂದಿಗೆ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಿಗಿಂತ 2833.29 ಅಡಿ ನೀರಿತ್ತು.

ವೀರಾಜಪೇಟೆ ವರದಿ

ಮನೆಗೆ ಜಖಂ

ಕಳೆದ ಮೂರು ದಿನಗಳಿಂದ ವೀರಾಜಪೇಟೆ ವಿಭಾಗಕ್ಕೆ ವ್ಯಾಪಕ ಮಳೆ ಸುರಿಯುತ್ತಿದ್ದು ಇದರ ಪರಿಣಾಮ ನಿನ್ನೆ ದಿನ ರಾತ್ರಿ ಸುರಿದ ಭಾರೀ ಮಳೆಗೆ ಇಲ್ಲಿನ ಕೀರ್ತಿ ಲೇಔಟ್‍ನಲ್ಲಿರುವ ಪೂವಯ್ಯ ಎಂಬವರ ಆರ್.ಸಿ.ಸಿ. ಮನೆ ಮೇಲೆ ತಡೆಗೋಡೆ ಬಿದ್ದು ಮನೆ ಭಾಗಶಃ ಜಖಂಗೊಂಡು ನಷ್ಟ ಸಂಭವಿಸಿದೆ.

ಅಲ್ಲದೆ ಸುನಿಲ್ ಹಾಗೂ ಪೂವಮ್ಮ ಎಂಬವರ ಆರ್.ಸಿ.ಸಿ. ಮನೆ ಮೇಲೆ ತಡೆಗೋಡೆ ಬೀಳುವ ಸಂಭವವಿದೆ. ಈ ಮನೆಗಳಲ್ಲಿ ಯಾರೂ ವಾಸ ಮಾಡದಿದ್ದುದರಿಂದ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ.

ಘಟನೆಯ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿನ್ನೆ ದಿನ ರಾತ್ರಿ ಬಿದ್ದ ಮಳೆಗೆ ಇಲ್ಲಿನ ನೆಹರೂನಗರ, ಮಲೆತಿರಿಕೆಬೆಟ್ಟ, ಅರಸುನಗರದ ಬೆಟ್ಟದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನಿವಾಸಿಗಳು ಭಯದ ವಾತಾವರಣ ದಲ್ಲಿ ಜೀವನ ನಡೆಸುತ್ತಿದ್ದಾರೆ.

ವೀರಾಜಪೇಟೆ ವಿಭಾಗಕ್ಕೆ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕದನೂರು ಗ್ರಾಮದ ಕಾವೇರಿ ಉಪ ಹೊಳೆ, ಬೇತರಿ ಗ್ರಾಮದ ಕಾವೇರಿ ಹೊಳೆಯ ನೀರಿನ ಮಟ್ಟ ನಿರಂತರ ಏರುತ್ತಿದೆ.

ಗೋಣಿಕೊಪ್ಪಲು: ವೆಂಕಟಪ್ಪ ಬಡಾವಣೆಯ ಮೊಹಿದೀನ್, ಜಬ್ಬರ್, ಮಹೇಶ್, ಹರೀಶ್ ಕಾಮತ್, ಸಂತೋಷ್ ಎಂಬವರ ಮನೆಗೆ ನೀರು ನುಗ್ಗಿದ್ದು ಮನೆಯೊಳಗಿನ ವಸ್ತುಗಳಿಗೆ ಹಾನಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಮನೆ ಖಾಲಿ ಮಾಡಿದ್ದು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.ಈ ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.

ನೀರಿನ ರಭಸಕ್ಕೆ ತೊಡಿನಲ್ಲಿದ್ದ ಹಾವುಗಳು ಮನೆಯ ಒಳಗೆ ಪ್ರವೇಶಿಸಿದ್ದು ಮುಂಜಾನೆ ಮನೆ ಮಾಲೀಕರು ಪರಿಶೀಲನೆ ನಡೆಸಿದಾಗ ಹಾವುಗಳು ಗೋಚರವಾದವು. ಪಂಚಾಯಿತಿ ತೋಡಿನಲ್ಲಿರುವ ಕಸ ಕಡ್ಡಿಗಳನ್ನು ತೆರವುಗೊಳಿಸಿ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಬೇಕಾಗಿತ್ತು. ಆದರೆ ಆಡಳಿತ ವೈಫಲ್ಯದಿಂದ ಪಂಚಾಯಿತಿ ಈ ಕೆಲಸಕ್ಕೆ ಮುಂದಾಗಿರಲಿಲ್ಲ. ತೋಡು ಗಳಲ್ಲಿ ಹಾಗೂ ಕೀರೆಹೊಳೆಯಲ್ಲಿ ಹೂಳು ತುಂಬಿದ್ದು ಕಳೆದ ಹಲವಾರು ವರ್ಷಗಳಿಂದ ಹೂಳು ಎತ್ತದೆ ಹೊಳೆ ಹಾಗೂ ತೋಡುಗಳು ಕಸದ ರಾಶಿಯಿಂದ ತುಂಬಿ ಹೋಗಿವೆ.

ಕೆಲವು ಮಂದಿ ತೋಡನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣಗೊಂಡಿದ್ದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗು ತ್ತಿಲ್ಲ. ತೋಡನ್ನು ಅತಿಕ್ರಮಣ ಮಾಡಿ ಕೊಂಡವರ ಮೇಲೆ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಹಲವು ಭಾರಿ ಪಂಚಾಯಿತಿಗೆ ದೂರು ನೀಡಿದ್ದರೂ ಈ ಬಗ್ಗೆ ಕ್ರಮಕ್ಕೆ ಮುಂದಾಗದಿರುವದೇ ಇಂತಹ ಅನಾಹುತಕ್ಕೆ ಕಾರಣಗಳಾಗಿವೆ ಎಂದು ಸಾರ್ವಜನಿಕರು ತಮ್ಮ ಅಸಮಾದಾನ ತೋಡಿಕೊಂಡಿದ್ದಾರೆ.

ಬಿರುನಾಣಿಗೆ 99 ಇಂಚು ಮಳೆ

ಶ್ರೀವiಂಗಲ: ದ.ಕೊಡಗಿನ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಾಳೆ ಮುಂದುವರೆದಿದ್ದು, ಬಿರುನಾಣಿ ವ್ಯಾಪ್ತಿಗೆ ಈತನಕ 99 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 160 ಇಂಚು ಮಳೆಯಾಗಿತ್ತು.

ಶ್ರೀಮಂಗಲ, ಬಿರುನಾಣಿ, ಹುದಿಕೇರಿ, ಟಿ-ಶೆಟ್ಟಿಗೇರಿ, ಬಿ-ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಮಳೆಯಾಗಿದ್ದು, 4.42 ಇಂಚು ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗುತ್ತಿರುವದರಿಂದ ಟಿ-ಶೆಟ್ಟಿಗೇರಿಯ ಖಾಸಗಿ ಶಾಲೆಯ ಆಡಳಿತ ಮಂಡಳಿ ತನ್ನ ವಿವೇಚನೆ ಬಳಸಿ ಸೋಮವಾರ ಮಕ್ಕಳಿಗೆ ರಜೆ ಘೋಷಿಸಿದೆ. ಬಹುತೇಕ ಮಕ್ಕಳು ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದು, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಮರ ಬಿದ್ದಿರುವದು, ತೋಡು ನದಿಗಳು ತುಂಬಿ ಹರಿಯುತ್ತಿರುವದರಿಂದ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪೋಷಕರ ಒತ್ತ್ತಾಯದ ಮೇರೆಗೆ ಶಾಲಾಡಳಿತ ಮಂಡಳಿ ರಜೆ ಘೋಷಿಸಿದೆ.

ಅಧಿಕ ಮಳೆ ಸುರಿಯುವ ಈ ವ್ಯಾಪ್ತಿಯಲ್ಲಿ ದೂರವಾಣಿ ಅವ್ಯವಸ್ಥೆ ಉಂಟಾಗಿದ್ದು, ವಿದ್ಯುತ್ ವ್ಯತ್ಯಯ ಕಂಡು ಬಂದಿದೆ. ವಿದ್ಯುತ್ ಕಡಿತದಿಂದ ಬಿರುನಾಣಿಯ ಬಿ.ಎಸ್.ಎನ್.ಎಲ್ ಸೇವೆ ಸ್ಥಗಿತವಾಗಿದೆ. ವಿದ್ಯುತ್ ಬಂದಾಗ ಮಾತ್ರ ಚಾಲನೆಗೊಳ್ಳುತ್ತಿದೆ.

ಅಧಿಕ ಮಳೆಯಿಂದ ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲಿ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿ ಹಾನಿಯಾಗುತ್ತಿವೆ ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ತಂಬಿ ನಾಣಯ್ಯ ತಿಳಿಸಿದ್ದಾರೆ. ಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಲಕ್ಷ್ಮಣ ತೀರ್ಥ ನದಿಯ ಹಿನ್ನೀರಿಗೆ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವ್ರತವಾಗಿದ್ದು, ಭತ್ತದ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಬಿರುಸಿನ ಗಾಳಿ-ಮಳೆ

ನಾಪೆÇೀಕ್ಲು: ಕಳೆದೆರಡು ದಿನಗಳಿಂದ ನಾಲ್ಕುನಾಡು ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣದಲ್ಲಿ ಏರಿಕೆ ಯಾಗಿದೆ. ಆಗಾಗ ಬಿರುಸಿನ ಗಾಳಿಯು ಬೀಸುತ್ತಿದೆ. ಹಿಂದಿನ ವರ್ಷಗಳ ಗಾಳಿ, ಮಳೆಗೆ ಹೋಲಿಸಿದರೆ ಇದು ಕಡಿಮೆ ಎನಿಸಿದರೂ, ಪ್ರಸ್ತುತ ವರ್ಷದಲ್ಲಿ ಈಗ ಸುರಿಯುತ್ತಿರುವದು ಬಿರುಸಿನ ಮಳೆ ಎನ್ನಬಹುದು. ಆದರೂ ಕಾವೇರಿ ನದಿ ಹೊರತುಪಡಿಸಿ ಇನ್ನಿತರ ಹೊಳೆ, ತೋಡು, ಹಳ್ಳ ಕೊಳ್ಳಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ತುಂಬಿಲ್ಲ.

ಮಳೆ ಸುರಿಯುವ ಪ್ರಮಾಣದಲ್ಲಿ ಕಡಿಮೆಯಾದರೂ, ತಿಂಗಳುಗಳಿಂದ ತುಂತುರು ಮಳೆ, ಮೋಡ ಕವಿದ ವಾತಾವರಣದ ಕಾರಣದಿಂದ ರೋಬಸ್ಟಾ ಕಾಫಿ ಫಸಲು ನೆಲಕಚ್ಚಿದೆ ಎನ್ನುತ್ತಾರೆ ಬೆಳೆಗಾರರು. ರೋಬಸ್ಟಾ ಮತ್ತು ಕಾವೇರಿ ಕಾಫಿ ಕಾಯಿ ಮತ್ತು ಎಲೆಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವು ಕಾಫಿಗಿಡಗಳಲ್ಲಿ ಸಂಪೂರ್ಣ ಕಾಫಿ ಫಸಲು ಉದುರಿಹೋಗಿರುವದು ಕಂಡುಬರುತ್ತಿದೆ.

ಹಣ್ಣಾದ ಕಾವೇರಿ ಕಾಫಿ: ಮಳೆಯ ಏರುಪೇರಿನ ಕಾರಣದಿಂದ ಅಕ್ಟೋಬರ್ - ನವಂಬರ್ ತಿಂಗಳಲ್ಲಿ ಹಣ್ಣಾಗುವ ಕಾವೇರಿ ಕಾಫಿ ಜುಲೈ, ಆಗಸ್ಟ್ ತಿಂಗಳಲ್ಲಿ ಹಣ್ಣಾಗುವ ಮೂಲಕ ಬೆಳೆಗಾರರಿಗೆ ಮತ್ತೊಂದು ಸಮಸ್ಯೆಯನ್ನು ತಂದೊಡ್ಡಿದೆ. ಹಣ್ಣಾದ ಕಾಫಿ ಉದುರುತ್ತಿದ್ದು ಇದನ್ನು ಕುಯ್ಲು ಮಾಡಿ ಒಣಗಿಸಲು ಸಾಧ್ಯವಾಗದ ಪರಿಸ್ಥಿತಿ ಬೆಳೆಗಾರರಿಗೆ ಎದುರಾಗಿದೆ. ಈ ವ್ಯಾಪ್ತಿಯಲ್ಲಿ ಕಾವೇರಿ ಕಾಫಿಯನ್ನು ಬೆಳೆಗಾರರು ಅಂತರ್ ಬೆಳೆಯಾಗಿ ಬೆಳೆಯುತ್ತಿದ್ದು ತೋಟದ ನಿರ್ವಹಣಾ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಇದಕ್ಕೂ ಕಲ್ಲು ಬಿದ್ದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಾಡಾನೆ ಹಾವಳಿ: ಮಳೆಯ ನಡುವೆ ಕಾಡಾನೆ ಹಾವಳಿ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವದು ಬೆಳೆಗಾರರ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿಯನ್ನು ತಂದೊಡ್ಡಿದೆ. ಚೆಯ್ಯಂಡಾಣೆ, ಚೇಲಾವರ, ಮರಂದೋಡ, ಯವಕಪಾಡಿ, ನಾಲಡಿ, ನೆಲಜಿ, ಪೇರೂರು ಗ್ರಾಮಗಳಲ್ಲಿ ಕಾಡಾನೆ ಹಾವಳಿ ನಿರಂತರವಾಗಿದೆ. ಸಂಜೆಯಾಗು ತ್ತಿದ್ದಂತೆ ಆಗಮಿಸುವ ಕಾಡಾನೆಗಳಿಂದ ಜನ ಪ್ರಾಣವನ್ನು ಪಣಕ್ಕಿಟ್ಟು ಬದುಕುವ ಪರಿಸ್ಥಿತಿ ಎದುರಾಗಿದೆ. ಸಂಜೆ ಶಾಲೆಯಿಂದ ಮರಳುವ ಮಕ್ಕಳು, ಅಂಗಡಿಗಳಿಗೆ ತೆರಳುವ ಕಾರ್ಮಿಕರು ಮರಳಿ ಮನೆ ಸೇರುವವರೆಗೆ ನೆಮ್ಮದಿ ಇಲ್ಲ. ಆನೆ ಹಾವಳಿಯಿಂದ ಬಾಳೆ, ಕಾಫಿ, ಅಡಿಕೆ, ತೆಂಗು ತೋಟಗಳು ಸಂಪೂರ್ಣ ನಾಶವಾಗುತ್ತಿದೆ. ಕಾರ್ಮಿಕರು ಕೂಡ ಹೆದರಿ ತೋಟ ಕೆಲಸಕ್ಕೆ ಆಗಮಿಸುತ್ತಿಲ್ಲ.

ಸಿದ್ದಾಪುರ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಸಿದ್ದಾಪುರದ ಕರಡಿಗೋಡು, ನೆಲ್ಯಹುದಿಕೇರಿ, ಕೊಂಡಂಗೇರಿ ಭಾಗದಲ್ಲಿ ಹೊಳೆಯ ನೀರಿನ ಪ್ರಮಾಣ ಹೆಚ್ಚಾಗಿರುವದರಿಂದ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ನಾಗೇಶ್ ರಾವ್, ಗ್ರಾಮ ಲೆಕ್ಕಿಗ ಓಮಪ್ಪ ಬಣಕಾರ್, ಸಹಾಯಕ ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡರು.

-ಪಿ.ವಿ.ಪ್ರಭಾಕರ್, ಹರೀಶ್ ಮಾದಪ್ಪ, ಜಗದೀಶ್, ಡಿ.ಎಂ.ಆರ್., ವಾಸು, ಕೆ.ಕೆ.ಎಸ್.