ಮಡಿಕೇರಿ, ಆ. 5: ಕರ್ನಾಟಕ - ಕೇರಳ ರಾಜ್ಯಗಳ ನಡುವೆ ಕೊಡಗಿನ ಮುಖಾಂತರ ಸಂಪರ್ಕ ಬೆಸೆಯುವ; ಪೆರುಂಬಾಡಿ ಹಾಗೂ ಮಾಕುಟ್ಟ ಮಧ್ಯೆ ಕಳೆದ ರಾತ್ರಿ ಅಂತರರಾಜ್ಯ ಹೆದ್ದಾರಿಯಲ್ಲಿ ಕುಸಿತ ಉಂಟಾಗಿ ವಾಹನಗಳ ಓಡಾಟಕ್ಕೆ ಅಡ್ಡಿ ಉಂಟಾಗಿದೆ. ವಿಷಯ ತಿಳಿಯುತ್ತಲೇ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಬೆಳ್ಳಂಬೆಳಿಗ್ಗೆ ಸ್ಥಳಕ್ಕೆ ತೆರಳಿ ಖುದ್ದು ಪರಿಶೀಲನೆಯೊಂದಿಗೆ ಈ ಮಾರ್ಗದಲ್ಲಿ ಮೂರು ದಿನಗಳ ತನಕ ವಾಹನಗಳ ಸಂಚಾರ ನಿರ್ಬಂಧಿಸಿದ್ದಾರೆ.ಅಲ್ಲದೆ, ಮೂರು ದಿನಗಳಲ್ಲಿ ಕುಸಿತ ಉಂಟಾಗಿರುವ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸುವ ಮುಖಾಂತರ; ಲಘು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುವ ದಿಸೆಯಲ್ಲಿ ತುರ್ತು ಕ್ರಮ ವಹಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುವದರೊಂದಿಗೆ; ಜೆಲ್ಲಿಕಲ್ಲು, ಮರಳು ಮೂಟೆಗಳನ್ನು ಇರಿಸಿ ತುರ್ತು ಕೆಲಸಕ್ಕೆ ಮುಂದಾಗಿದ್ದಾರೆ.
ಅಂತೆಯೇ ವೀರಾಜಪೇಟೆಯ ಪೆರುಂಬಾಡಿಯಿಂದ ಮಾಕುಟ್ಟದತ್ತ ಯಾವದೇ ವಾಹನಗಳು ತೆರಳದಂತೆ; ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ಬೆಳಿಗ್ಗೆಯಿಂದಲೇ ರಸ್ತೆ ಸಂಚಾರ ನಿರ್ಬಂಧಿಸಿರುವದು ಕಂಡು ಬಂದಿದೆ. ಆ ಕಡೆಯಿಂದ ಕೇರಳದ ಕೂಟುಹೊಳೆ ಸೇತುವೆಯಿಂದ ಮಾಕುಟ್ಟದತ್ತ ಬರುವ ಎಲ್ಲಾ ವಾಹನಗಳ ಸಂಚಾರ ತಡೆಹಿಡಿ ಯಲಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ ಮಾಕುಟ್ಟ ಮಾರ್ಗದಲ್ಲಿ ರಸ್ತೆ ಬದಿ ಕುಸಿದಿದ್ದ ವೇಳೆ, ಸರಿಪಡಿಸಲಾಗಿದ್ದ ಸ್ಥಳದಲ್ಲೇ ನಿನ್ನೆ ತಡರಾತ್ರಿ ಕುಸಿತ ಉಂಟಾಗಿರುವದು ಗೋಚರಿಸಿದೆ.
ಕೊಣನೂರು - ಮಾಕುಟ್ಟ ಅಂತರರಾಜ್ಯ ಹೆದ್ದಾರಿಯ 82 ಕಿ.ಮೀ. ಬಳಿ ವಾಟೆಕಾಡು (ಮೊದಲ ಪುಟದಿಂದ) ಎಂಬಲ್ಲಿನ ತಿರುವೊಂದರ ಈ ಹೆದ್ದಾರಿಯ ಮುಖ್ಯರಸ್ತೆಯ ಮಧ್ಯದಿಂದ ಸುಮಾರು 40 ಅಡಿಯಷ್ಟು ಭೂಕುಸಿತ ಉಂಟಾಗಿದೆ. ಭಾರೀ ಗಾತ್ರದ ಮರಗಳ ಸಹಿತ ಕಳೆದ ವರ್ಷ ಸರಿಪಡಿಸಲಾಗಿದ್ದ ತಡೆಗೋಡೆಯನ್ನು ಮಣ್ಣು ಸಹಿತ ಎಳೆದೊಯ್ದಿರುವ ದೃಶ್ಯ ಎದುರಾಗಿದೆ.
ಉಭಯ ಸಂಕಟ : ಅಂತರರಾಜ್ಯ ಹೆದ್ದಾರಿಯಲ್ಲಿ ಕಳೆದ ವರ್ಷ ಪ್ರಸಕ್ತ ಮರು ಕುಸಿದಿರುವ ಸ್ಥಳ ಸೇರಿದಂತೆ ಒಟ್ಟು 50 ಕಡೆಗಳಲ್ಲಿ ಈ ಹೆದ್ದಾರಿಯ ಅಲ್ಲಲ್ಲಿ ಭೂಕುಸಿತದೊಂದಿಗೆ 265 ಮರಗಳು ನೆಲಕಚ್ಚಿದ್ದವು. ಲೋಕೋಪಯೋಗಿ ಇಲಾಖೆಯಿಂದ ತಾತ್ಕಾಲಿಕ ರಿಪೇರಿ ಮಾಡಿದ್ದು; ಈ ಹೆದ್ದಾರಿಯ ಎಡಭಾಗ ಕೆರ್ಟಿ ಮೀಸಲು ಅರಣ್ಯ ಪ್ರದೇಶವಾಗಿದೆ. ರಸ್ತೆಯ ಬಲಭಾಗ ಉರ್ಟಿ ಮೀಸಲು ವನ್ಯಜೀವಿ ಅರಣ್ಯ ಪ್ರದೇಶವಾಗಿದೆ. ಪರಿಣಾಮ ರಸ್ತೆ ಅಗಲೀಕರಣಕ್ಕೂ ಅರಣ್ಯ ಇಲಾಖೆಯಿಂದ ಅನುಮತಿ ಲಭಿಸದೆ ಉಭಯ ಸಂಕಟ ಎದುರಾಗಿದೆ.
ಮೇಲ್ಮನೆ ಸದಸ್ಯರ ಭೇಟಿ : ಭೂಕುಸಿತದಿಂದ ಮಾಕುಟ್ಟ ಹೆದ್ದಾರಿ ಬಂದ್ ಆಗಿರುವ ವಿಷಯ ತಿಳಿದು; ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಈ ಸಂದರ್ಭ ಲೋಕೋಪಯೋಗಿ ಇಂಜಿನಿಯರ್ ಇಬ್ರಾಹಿಂ ಅವರೊಂದಿಗೆ ಚರ್ಚಿಸಿದ ಅವರು, ತುರ್ತಾಗಿ ತಾತ್ಕಾಲಿಕ ಕೆಲಸ ಕೈಗೊಂಡು; ಕೊಡಗಿನಿಂದ ಕಣ್ಣೂರು ವಿಮಾನ ನಿಲ್ದಾಣ ಹಾಗೂ ಇತರೆಡೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ನಿಗಾವಹಿಸುವಂತೆ ಸಲಹೆ ನೀಡಿದರು.
ಅಲ್ಲದೆ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ತಜ್ಞರ ಅಭಿಪ್ರಾಯ ಪಡೆದು; ಭವಿಷ್ಯದಲ್ಲಿ ಸಮಸ್ಯೆ ಮರುಕಳಿಸದಂತೆ ಸರಿಯಾದ ರೀತಿಯಲ್ಲಿ ಸರಕಾರದ ಅನುದಾನ ಪಡೆದು ಕಾಮಗಾರಿ ನಿರ್ವಹಿಸಲು ಪ್ರಯತ್ನಿಸುವದಾಗಿ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಲೋಕೋಪಯೋಗಿ ಇಂಜಿನಿಯರ್‍ಗಳ ಸಲಹೆಯಂತೆ ಮಾಕುಟ್ಟ ಹೆದ್ದಾರಿಗೆ ಶಾಶ್ವತ ಕಾಯಕಲ್ಪ ನೀಡಲು ಸರಕಾರದ ಗಮನ ಸೆಳೆಯುವ ಇಂಗಿನ ವ್ಯಕ್ತಪಡಿಸಿದರು.
ಅಸಮಾಧಾನ : ಕ್ಷೇತ್ರದ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಹಾಗೂ ತಾ.ಪಂ. ಸದಸ್ಯ ಗಣೇಶ್ ಅವರುಗಳು ಪ್ರತಿಕ್ರಿಯೆ ನೀಡಿ; ಕಳೆದ ಮಳೆಗಾಲದ ಹಾನಿಯಿಂದ ಈ ರಸ್ತೆಯ ಅಲ್ಲಲ್ಲಿ ಸರಿಪಡಿಸುವ ಕಾಮಗಾರಿಗೆ ಕೋಟಿಗಟ್ಟಲೆ ಹಣ ವ್ಯಯಿಸಿದರೂ; ಗುಣಾತ್ಮಕ ಕಾಮಗಾರಿ ನಿರ್ವಹಿಸದೆ ಮತ್ತೆ ಅಪಾಯ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಸಕ್ತ ತುರ್ತು ದುರಸ್ತಿಯೊಂದಿಗೆ ಕಣ್ಣೂರು ವಿಮಾನ ನಿಲ್ದಾಣ ಹಾಗೂ ಇತರೆಡೆ ತೆರಳಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಇಂಜಿನಿಯರ್ ಪ್ರತಿಕ್ರಿಯೆ : ಲೋಕೋಪಯೋಗಿ ಇಂಜಿನಿಯರ್ ಇಬ್ರಾಹಿಂ ಪ್ರತಿಕ್ರಿಯಿಸಿ; ಮೂರು ದಿನಗಳಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತುರ್ತು ಕೆಲಸ ಪೂರೈಸಲಾಗುವದು; ಆ ಬಳಿಕ ಸ್ವತಃ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕಾಮಗಾರಿ ವೀಕ್ಷಿಸಿ, ಅನುಮತಿ ನೀಡಿದರೆ ಲಘು ವಾಹನಗಳಿಗೆ ಅವಕಾಶ ಕಲ್ಪಿಸಲಾಗುವದು ಎಂದರು.
ಕೊಡಗು ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭ ವೀರಾಜಪೇಟೆ ತಹಶೀಲ್ದಾರ್ ಹಾಗೂ ಕಂದಾಯ ಸಿಬ್ಬಂದಿ ಮತ್ತು ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಕಿರಿಯ ಅಭಿಯಂತರ ಸುಬ್ಬಯ್ಯ ಮೊದಲಾದವರು ಹಾಜರಿದ್ದು, ಮಾಹಿತಿ ನೀಡಿದರು.