ಮಡಿಕೇರಿ, ಆ.3 : ರಾಜ್ಯದ ಎಂಟು ಕಂದಾಯ ಜಿಲ್ಲೆಗಳನ್ನೊಳ ಗೊಂಡ ಇನ್ನರ್‍ವೀಲ್ ಜಿಲ್ಲೆ 318 ಈ ಬಾರಿ ಸುವರ್ಣ ಮಹೋತ್ಸವ ವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆ ಯಲ್ಲಿ ಕೆಲವು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಇನ್ನರ್‍ವೀಲ್ ಜಿಲ್ಲೆ 318ರ ಅಧ್ಯಕ್ಷೆ ಅನುರಾಧಾ ನಂದಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಕಾವೇರಿ ನದಿ ಸಂರಕ್ಷಣೆ ಹಿನ್ನೆಲೆಯಲ್ಲಿ ಕೊಯ ಮತ್ತೂರಿನ ಇಶಾ ಫೌಂಡೇಷನ್ ಆಯೋಜಿಸಲಿರುವ ‘ಕಾವೇರಿ ಕೂಗು’ ಆಂದೋಲದ ಸಂದರ್ಭ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಕ್ಷಾಂತರ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇನ್ನರ್‍ವೀಲ್ ಜಿಲ್ಲೆ 318ರ 44 ಕ್ಲಬ್‍ಗಳ ಸದಸ್ಯರು ಯೋಜನೆಗೆ ಕೈಜೋಡಿಸಲಿರುವದಾಗಿ ಹೇಳಿದರು.

ಇನ್ನರ್‍ವೀಲ್ ಸಂಸ್ಥೆಯು ಸೇವೆ ಹಾಗೂ ಗೆಳೆತನದ ಧ್ಯೇಯದೊಂದಿಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, 1924ರಲ್ಲಿ ಮಾರ್ಗರೇಟ್ ಗೊಲ್ಡಿಂಗ್ ಅವರು ಕೇವಲ 27 ಮಂದಿ ಸದಸ್ಯರಿಂದ ಸ್ಥಾಪಿಸಿದ ಈ ಸಂಸ್ಥೆ ಪ್ರಸಕ್ತ ವಿಶ್ವದ 104 ದೇಶಗಳಲ್ಲಿ 3ಸಾವಿರಕ್ಕೂ ಅಧಿಕ ಕ್ಲಬ್‍ಗಳು ಹಾಗೂ ಒಂದು ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದುವ ಮೂಲಕ ವಿಶ್ವದ ಎರಡನೇ ಅತಿ ದೊಡ್ಡ ಮಹಿಳಾ ಸಂಘಟನೆಯಾಗಿ ಬೆಳೆದಿದೆ ಎಂದರು.

ಇನ್ನರ್‍ವೀಲ್ ಜಿಲ್ಲೆ 318ರ ವ್ಯಾಪ್ತಿಗೆ ಒಳಪಡುವ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಮಡಿಕೇರಿ ಮತ್ತು ಕುಶಾಲನಗರದಲ್ಲಿ ಮಾತ್ರ ಇನ್ನರ್‍ವೀಲ್ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದರೆ, ಈ ಬಾರಿ ಹೊಸದಾಗಿ ಸೋಮವಾರಪೇಟೆಯಲ್ಲಿ ನೂತನ ಕ್ಲಬ್ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಕ್ಲಬ್‍ಗಳನ್ನು ಆರಂಭಿಸಲು ಆಸಕ್ತರು ಮುಂದೆ ಬಂದಲ್ಲಿ ಮತ್ತಷ್ಟು ಕ್ಲಬ್‍ಗಳನ್ನು ಆರಂಭಿಸಲಾಗುವದು ಎಂದು ತಿಳಿಸಿದರು.

ದಕ್ಷಿಣ ವಲಯ ಸಮಾವೇಶ : ಸಂಸ್ಥೆಯಲ್ಲಿ ಸ್ವಯಂಸೇವಕರಾಗಿ ದುಡಿಯುವ ಸದಸ್ಯರು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಂಸ್ಥೆಯ ಧ್ಯೇಯವಾದ ಸೇವೆ ಹಾಗೂ ಗೆಳೆತನವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದು, ಇನ್ನರ್‍ವೀಲ್ ಜಿಲ್ಲೆ 318ರ ಸುವರ್ಣ ಮಹೋತ್ಸವದ ಅಂಗವಾಗಿ ಸೆ.7ಮತ್ತು 8ರಂದು ಮೈಸೂರಿನಲ್ಲಿ ಸಂಸ್ಥೆಯ ‘ಮೈಲ್‍ಸ್ಟೋನ್’ ದಕ್ಷಿಣ ವಲಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ದಕ್ಷಿಣ ವಲಯದ 7 ಇನ್ನರ್‍ವೀಲ್ ಜಿಲ್ಲೆಗಳ ಸುಮಾರು 700-800 ಮಂದಿ ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಮೈಸೂರಿನ ವಿಜಯನಗರದ ಬಂಟ್ಸ್ ಕನ್ವೆನ್ಷನ್ ಹಾಲ್‍ನಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಅಸೋಸಿಯೇಷನ್ ಆಫ್ ಇನ್ನರ್‍ವೀಲ್ ಕ್ಲಬ್ಸ್ ಆಫ್ ಇಂಡಿಯಾದ ಅಧ್ಯಕ್ಷೆ ಮಮತಾ ಗುಪ್ತಾ, ಇಶಾ ಫೌಂಡೇಷನ್‍ನ ಜಗ್ಗಿ ಗುರುದೇವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಅನಾಥ ಮಕ್ಕಳನ್ನು ದತ್ತು ಪಡೆಯುವ ‘ಮಮತಾ ಮಿಷನ್’ ಯೋಜನೆಯನ್ನು ಇದೇ ಸಂದರ್ಭ ಘೋಷಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವದೇ ಮಗು ಅನಾಥವಾಗಿ ಉಳಿಯದಂತೆ ನೋಡಿಕೊಳ್ಳುವದು ಈ ಯೋಜನೆಯ ಉದ್ದೇಶವಾಗಿದ್ದು, ಇದು ಇನ್ನರ್‍ವೀಲ್ ಅಸೋಸಿಯೇಷನ್ ಅಧ್ಯಕ್ಷೆ ಮಮತಾ ಗುಪ್ತಾ ಅವರ ಕನಸಿನ ಯೋಜನೆಯಾಗಿದೆ. ಈ ಯೋಜನೆಗೆ ಪೂರಕವಾಗಿ ಮಿಷನ್ ಮಮತಾ ಫೋಟೋ ಸ್ಪರ್ಧೆ ನಡೆಯಲಿದ್ದು, ಪ್ರತಿ ಕ್ಲಬ್‍ನಿಂದ ಒಂದು ಪ್ರವೇಶದಂತೆ ಎಲ್ಲಾ ಕ್ಲಬ್‍ಗಳಿಂದ ಆಯ್ಕೆ ಮಾಡಲಾದ ಅತ್ಯುತ್ತಮವಾದ ಒಂದು ಫೋಟೋವನ್ನು ಮಮತಾ ಮಿಷನ್ ಯೋಜನೆಯ ಲಾಂಛನ ವನ್ನಾಗಿ ಬಳಸಿಕೊಳ್ಳ ಲಾಗುತ್ತದೆ. ಇದರೊಂದಿಗೆ ರಾಯಲ್ ರೋಬ್ ಡಿಸೈನಿಂಗ್ ಸ್ಪರ್ಧೆ, ‘ಟುಗೆದರ್ ವಿ ಕುಕ್’ ಸ್ಪರ್ಧೆಗಳು ನಡೆಯಲಿದ್ದು, ಸೆ.8ರಂದು ಪಿಂಕ್ ಸ್ಯಾರಿ ವಾಕಥಾನ್ ಜರುಗಲಿದೆ ಎಂದು ಅನುರಾಧಾ ಅವರು ವಿವರಿಸಿದರು.

ಮಡಿಕೇರಿ ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ನಿಶಾ ಮೋಹನ್ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ತನ್ನ ಅಧ್ಯಕ್ಷತೆಯ ಆಡಳಿತ ಮಂಡಳಿಯು ಜು.15ರಂದು ಅಸ್ತಿತ್ವಕ್ಕೆ ಬಂದಿದ್ದು, ಇದುವರೆಗೆ ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ಗಿಡ ನೆಡುವದು, ಮೇಕೇರಿ ಶಾಲೆಯಲ್ಲಿ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ ಶಿಬಿರ, ಸುಂಟಿಕೊಪ್ಪದ ಅನಾಥರ ಕೇಂದ್ರಕ್ಕೆ ಭೇಟಿ, ಬೋಯಿಕೇರಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ, ಅಶಕ್ತ ಮಹಿಳೆಯೊಬ್ಬರಿಗೆ ನೆರವು, ಬಾಲಭವನದ ಮಕ್ಕಳಿಗೆ ಬಳೆ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾಗಿ ವಿವರಿಸಿದರು. ಮುಂದಿನ ದಿನಗಳಲ್ಲಿ ಸದಸ್ಯರ ಸಹಕಾರದೊಂದಿಗೆ ಮತ್ತಷ್ಟು ಕಾರ್ಯಕ್ರಮ ರೂಪಿಸುವದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಇನ್ನರ್‍ವೀಲ್ ಕಾರ್ಯದರ್ಶಿ ಶಫಾಲಿ ರೈ, ಖಜಾಂಚಿ ನಮಿತಾ ರೈ, ನಿಕಟಪೂರ್ವ ಅಧ್ಯಕ್ಷೆ ಲತಾ ಚೆಂಗಪ್ಪ ಹಾಗೂ ಜಿಲ್ಲಾ ಖಜಾಂಚಿ ಪೂರ್ಣಿಮಾ ರವಿ ಉಪಸ್ಥಿತರಿದ್ದರು.