ಸಿದ್ದಾಪುರ, ಆ. 3: ಹಾಸನ ಸುತ್ತಮುತ್ತ ನಿರಂತರ ಉಪಟಳ ನೀಡುವದರೊಂದಿಗೆ ಇಬ್ಬರು ನಾಗರಿಕರನ್ನು ಬಲಿ ಪಡೆದಿದ್ದ ಏಕದಂತವಿರುವ ಪುಂಡಾನೆಯೊಂದನ್ನು ಜುಲೈ 28 ರಂದು ಕೊನೆಗೂ ಸೆರೆಹಿಡಿಯಲಾಗಿದೆ. ಕೊಡಗಿನ ದುಬಾರೆ ಹಾಗೂ ಮತ್ತಿಗೋಡುವಿನ ಐದು ಗಜಪಡೆಗಳ ಸಹಕಾರದಿಂದ ಈ ಪುಂಡಾನೆ ಸೆರೆಯಾಗಿದೆ.
ಹಾಸನ ಜಿಲ್ಲೆಯ ಅರಣ್ಯಾಧಿಕಾರಿಗಳೊಂದಿಗೆ ದುಬಾರೆ ಅರಣ್ಯ ವಲಯಾಧಿಕಾರಿ ಕನ್ನಂಡ ರಂಜನ್ ಚಂಗಪ್ಪ ಹಾಗೂ ದುಬಾರೆ, ಮತ್ತಿಗೋಡುವಿನ ಸಾಕಾನೆಗಳಾದ ಅಜಯ್, ಹರ್ಷ, ವಿಕ್ರಮ, ಅಭಿಮನ್ಯು, ಗೋಪಿ ಮತ್ತು ಹತ್ತು ಮಂದಿ ಮಾವುತರು ಪಾಲ್ಗೊಂಡಿದ್ದರು. ತಜ್ಞ ವೈದ್ಯ ಡಾ. ಮುಜೀಬ್ ಕೂಡ ಅರವಳಿಕೆ ನೀಡುವ ಮೂಲಕ ಈ ದೈತ್ಯದ ಸೆರೆಗೆ ಸಹಕರಿಸಿದರು.ವ್ಯಾಪಕ ಪುಂಡಾಟದೊಂದಿಗೆ ಭಯಹುಟ್ಟಿಸಿರುವ ಈ ಗಜರಾಜನನ್ನು ಸೆರೆ ಹಿಡಿಯುವ ಮೂಲಕ ಹಾಸನದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ದುಬಾರೆ ಸಾಕಾನೆ ಶಿಬಿರದಲ್ಲಿ ಇದೀಗ ಹಾಸನದಿಂದ ಸೆರೆಹಿಡಿದ ಪುಂಡಾನೆಯನ್ನು ಪಳಗಿಸಲಾಗುತ್ತಿದೆ.
ಹಾಸನದಲ್ಲಿ ಈರ್ವರನ್ನು ಬಲಿ ತೆಗೆದುಕೊಂಡು, ದಾಂಧಲೆ ನಡೆಸುತ್ತಿದ್ದ ಈ ಪುಂಡಾನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಸನದ ಸೀಗೆಗುಡ್ಡದ ಸಮೀಪ ಸೆರೆ ಹಿಡಿದಿದ್ದು, ಪಳಗಿಸುವ ಸಲುವಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ತರಲಾಗಿದೆ. ಈಗಾಗಲೇ ಕಾಡಾನೆಯನ್ನು ಕ್ರಾಲ್‍ನಲ್ಲಿ ಬಂಧಿಸಲಾಗಿದ್ದು, ಪಳಗಿಸಲು ಇಬ್ಬರು ಮಾವುತರನ್ನು ನೇಮಿಸಲಾಗಿದೆ.
ಹಾಸನದ ಪಟ್ಟಣದಲ್ಲಿ ದಾಂಧಲೆ ನಡೆಸುತ್ತಿದ್ದ ಅಂದಾಜು 34 ವರ್ಷದ ಈ ಒಂಟಿ ಸಲಗವು ಗ್ರಾಮಸ್ಥರ ಮೇಲೆ ದಾಳಿ ನಡೆಸುತ್ತಾ ಭಯಬೀತಿ ಹುಟ್ಟಿಸಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ, ಉಪಟಳ ನೀಡುತ್ತಿದ್ದ ಬೃಹತ್ ಗಾತ್ರದ ಈ ಏಕದಂತದ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಇದೀಗ ಕಾಡಾನೆಯನ್ನು ಕ್ರಾಲ್‍ನಲ್ಲಿ ಬಂಧಿಸಿದ್ದು,
(ಮೊದಲ ಪುಟದಿಂದ) ಮಾವುತರಾದ ಶರತ್ ಹಾಗೂ ಪಾಪು ಪಳಗಿಸಲು ಪ್ರಯತ್ನಿಸುತ್ತಿ ದ್ದಾರೆ. ಈ ನಡುವೆ ಪುಂಡಾನೆಯು ಕ್ರಾಲ್‍ನಲ್ಲಿ ಘೀಳಿಡುತ್ತಾ, ಸುತ್ತಲೂ ಅಳವಡಿಸಿರುವ ಮರದ ದಿಮ್ಮಿಗಳ ಮೇಲೆ ಏರುವದು, ದಂತದಿಂದ ತಿವಿಯಲು ಪ್ರಯತ್ನಿಸುತ್ತಿದೆ. ಅಲ್ಲದೆ ಕ್ರಾಲ್‍ನಿಂದ ಹೊರಬರಲು ಪ್ರಯತ್ನಿ ಸುತ್ತಿದ್ದು, ಮಾವುತರು ತಮ್ಮ ಭಾಷೆಯಲ್ಲಿ ಗಜರಾಜನನ್ನು ಪಳಗಿಸುತ್ತಿದ್ದಾರೆ. ಕೋಪ ಹೆಚ್ಚಾ ಗಿರುವ ಕಾಡಾನೆಯ ಬಳಿ ಪ್ರವಾಸಿಗಳು ಹಾಗೂ ಸ್ಥಳೀಯರನ್ನು ಬಿಡುತ್ತಿಲ್ಲ. ಕೇವಲ ಮಾವುತರು ಮಾತ್ರ ಆನೆಯ ಕ್ರಾಲ್ ನ ಬಳಿ ಇದ್ದು, ಆನೆಗೆ ಭತ್ತದ ಹುಲ್ಲು, ಸೊಪ್ಪು, ನೀರನ್ನು ಒದಗಿಸುತ್ತಿದ್ದಾರೆ.
ಈ ದೈತ್ಯದ ಕ್ರಾಲ್ ಬಳಿಯಲ್ಲೇ ಮಾವುತರು ತಂಗಿದ್ದು, ಹೊರಬರಲು ಪ್ರಯತ್ನಿಸುತ್ತಿರುವ ಪುಂಡಾನೆಯು ಘೀಳಿಡುತ್ತಾ, ಭಾರಿ ಶಬ್ದವನ್ನು ಮಾಡುತ್ತಿದೆ. ಇದರಿಂದಾಗಿ ಮಾವುತರಿಗೆ ರಾತ್ರಿ ನಿದ್ರೆಯಿಲ್ಲ ದಂತಾಗಿದೆ. ಅರಣ್ಯ ವಲಯಾಧಿಕಾರಿ ಕನ್ನಂಡ ರಂಜನ್ ನೇತೃತ್ವದಲ್ಲಿ ಈ ಗಜರಾಜನನ್ನು ಪಳಗಿಸುವ ಪ್ರಯತ್ನ ಮುಂದುವರೆದಿದೆ.
ದಸರಾಕ್ಕೆ 8 ಸಾಕಾನೆಗಳು: ಈ ಬಾರಿಯ ನಾಡಹಬ್ಬ ಮೈಸೂರು ದಸರಾಕ್ಕೆ ದುಬಾರೆ ಸಾಕಾನೆ ಶಿಬಿರದಿಂದ 8 ಸಾಕಾನೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಮೈಸೂರಿನಿಂದ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿ ಗಳು ಭೇಟಿ ನೀಡಿ ಆನೆಗಳ ಆಯ್ಕೆಯ ಬಗ್ಗೆ ಪರಿಶೀಲಿಸಿದ್ದಾರೆ.
ಹಾಸನದಿಂದ ಸೆರೆಹಿಡಿದ ಪುಂಡಾನೆಯು ಕ್ರಾಲ್‍ನಲ್ಲಿ ದಾಂಧಲೆ ನಡೆಸುತ್ತಿದ್ದು, ಕ್ರಾಲ್‍ನಿಂದ ಹೊರಬರದಂತೆ ರಾತ್ರಿ ಸಮಯದಲ್ಲಿ ದುಬಾರೆ ಸಾಕಾನೆ ಶಿಬಿರದ ನಾಲ್ಕು ಆನೆಗಳನ್ನು ಕ್ರಾಲ್‍ನ ಸುತ್ತಲೂ ನಿಲ್ಲಿಸಿ, ಮುನ್ನೆಚ್ಚರಿಕೆ ವಹಿಸಲಾಗಿದೆ. ಇತ್ತೀಚೆಗೆ ಚೆಟ್ಟಳ್ಳಿಯ ಸಮೀಪ ಸೆರೆಹಿಡಿದ ಗಂಡಾನೆಯನ್ನು ಪಳಗಿಸಲಾಗುತ್ತಿದ್ದು, ಇದೀಗ ಕಾಡಾನೆ ಮಾವುತರ ಮಾತಿಗೆ ಸ್ಪಂದಿಸುತ್ತಿದೆ ಎಂದು ಮಾವುತ ಉರುಣೆ ತಿಳಿಸಿದ್ದಾರೆ.