ಮಡಿಕೇರಿ, ಆ.3 : ಬದುಕಿನಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವದರ ಜೊತೆಗೆ ಆತ್ಮ ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಸಲಹೆ ಮಾಡಿದ್ದಾರೆ.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ 2019ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಎಸ್ಪಿ ಅವರು, ಯಾವದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸುವದರ ಜೊತೆಗೆ ಸಮಸ್ಯೆಗಳು ಬಂದಾಗ ಧೃತಿಗೆಡದೆ ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಜೀವನದಲ್ಲಿ ಏಳು ಬೀಳು ಸಮಾನವಾಗಿ ಸ್ವೀಕರಿಸಬೇಕು ಎಂದರು.

ವಿದ್ಯಾರ್ಥಿಗಳು ಸಮಾಜದಲ್ಲಿ ಹಿರಿಯರು, ಸಹೋದ್ಯೋಗಿಗಳು, ಇತರರ ಬಗ್ಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಉದ್ಯೋಗ ಪಡೆಯಲು ಪ್ರಯತ್ನಿಸಬೇಕು. ಯಾವ ಹುದ್ದೆಯು ಸಹ ಕಡಿಮೆಯಿಲ್ಲ ಎಂಬದನ್ನು ಭಾವಿಸಬೇಕು ಎಂದು ಅವರು ನುಡಿದರು.

ಈಗಿನ ಜಗತ್ತಿನಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ. ಬೌದ್ಧಿಕ ಗುಣಮಟ್ಟ ಹೆಚ್ಚಾಗುವದರೊಂದಿಗೆ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳ ಬೇಕು ಎಂದು ಹೇಳಿದರು.

ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪೋಷಕರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಹಾಗೂ ವಿದ್ಯಾರ್ಥಿಗಳು ಶಿಸ್ತು, ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರು ಕಿವಿ ಮಾತು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ ಮಾತನಾಡಿ ಇಂದಿನ ಆಧುನಿಕ ಬದುಕಿನಲ್ಲಿ ಉದ್ಯೋಗಾವಕಾಶಗಳು ಸಾಕಷ್ಟು ಇದ್ದು, ಅವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕು ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಕೆ.ಎಂ.ಭವಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

2019 ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಚರಿತಾ ಪೂಣಚ್ಚ ಎನ್. ಪ್ರಥಮ (584) ಹಾಗೂ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ವಿದ್ಯಾಶ್ರೀ ಬಿ.ಡಿ. ದ್ವಿತೀಯ (582), ವಾಣಿಜ್ಯ ವಿಭಾಗದಲ್ಲಿ ಸಂತ ಜೋಸೆಫರ ಪಿಯು ಕಾಲೇಜಿನ ಸಪ್ಪನಾ ಕೆ.ಎ. ಪ್ರಥಮ (588) ಹಾಗೂ ಗೊಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಜನಿತ್ ಬಿ.ಸಿ. ದ್ವಿತೀಯ (584), ಕಲಾ ವಿಭಾಗದಲಿ ್ಲಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಜೀವ ಕೆ.ಪಿ. ಪ್ರಥಮ (565) ಹಾಗೂ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದಿವ್ಯ ಎಸ್.ಕೆ. ದ್ವಿತೀಯ ಸ್ಥಾನ (542) ಪಡೆದಿದ್ದು, ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸಿ.ಎಂ. ಮಹಾ ಲಿಂಗಯ್ಯ ಅವರು ಸ್ವಾಗತಿಸಿದರು, ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕ ನಂದೀಶ್ ನಿರೂಪಿಸಿ, ವಂದಿಸಿದರು.