ಮಡಿಕೇರಿ, ಆ. 3: ಕೊಡಗು ಜಿಲ್ಲೆಯು ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಕಕ್ಕಡ ಮಾಸದ 18ನೆಯ ದಿವಸ ಬಳಸುವ ಮದ್ದು ಸೊಪ್ಪಿನ ರಸದಿಂದ ತಯಾರಿಸುವ ವಿಶೇಷ ಔಷಧೀಯ ಗುಣವುಳ್ಳ ಮದ್ದ್‍ಸೊಪ್ಪಿನ ಕುರಿತಾಗಿ ಸೂಕ್ತ ಸಂಶೋಧನೆ ನಡೆಸಿ, ‘ಪೇಟೆಂಟ್’ ಗಳಿಸಲು ಪ್ರಯತ್ನ ನಡೆಸು ವಂತಾಗಬೇಕಿದೆ ಎಂದು ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ನಿವೃತ್ತ ಪೊಫೆಸÀರ್ ಇಟ್ಟೀರ ಕೆ. ಬಿದ್ದಪ್ಪ ಅವರು ಅಭಿಪ್ರಾಯಪಟ್ಟರು.

ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್‍ನಿಂದ ಇಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಜರುಗಿದ ಕಕ್ಕಡ 18ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ ದರು. ಇದೊಂದು ಅಚ್ಚರಿದಾಯಕವಾ ದಂತಹ ವಿಚಾರವೂ ಆಗಿದೆ. ಈ ಸೊಪ್ಪಿನ ರಸ ಔಷಧೀಯ ಗುಣವನ್ನು ಹೊಂದಿದ್ದು; ಕೊಡಗಿನಲ್ಲಿ ಹಿಂದಿನ ಕಾಲದಿಂದಲೂ ಭಾರೀ ಮಳೆಗಾಲದ ಸಂದರ್ಭ ಕಕ್ಕಡ ಮಾಸದಲ್ಲಿ ಬಳಸಲ್ಪಡುತ್ತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಿ ‘ಪೇಟೆಂಟ್’ ಪಡೆದುಕೊಂಡಲ್ಲಿ ಅದು ಇನ್ನಷ್ಟು ಪ್ರಯೋಜನಕಾರಿ ಯಾಗಲಿದೆ ಎಂದವರು ಹೇಳಿದರು.

ಅ.ಕೊ.ಸ.ದ ಗೌರವ ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ಅವರು, ಪ್ರಸ್ತುತದ ಆಚರಣೆಗಳು ಈ ಹಿಂದಿನ ವರ್ಷಗಳಿಗಿಂತ ವಿಭಿನ್ನವಾಗಿದೆ. ಆದರೆ ಇದಕ್ಕಿಂತ ಮಿಗಿಲಾದದ್ದು ಪೂರ್ವಿಕರು ಕಂಡು ಹಿಡಿದಿರುವ ಈ ವಿಚಾರ ಮಹತ್ವದ್ದು ಎಂಬದನ್ನು ಅರಿತುಕೊಳ್ಳ ಬೇಕೆಂದರು. ಈಗಿನ ಆಚರಣೆಗಳು ಎಷ್ಟೇ ಇದ್ದರೂ ಹಿಂದಿನಷ್ಟು ಮಹತ್ವ ಗೋಚರಿಸುತ್ತಿಲ್ಲ ಎಂದವರು ಹೇಳಿದರು.

ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಗದ್ದೆ ಕೆಲಸದಲ್ಲಿ ನಿರತರಾಗಿ ರುತ್ತಿದ್ದ ಜನರು ಮನೆ ಮನೆಗಳಲ್ಲಿ ಇದನ್ನು ಆಚರಿಸುತ್ತಿದ್ದರು. ಇದೀಗ ಗದ್ದೆ ಕೆಲಸ ಕಡಿಮೆಯಾಗಿರುವದು ಸಾರ್ವತ್ರಿಕ ಆಚರಣೆಗೆ ಕಾರಣವಾಗಿದೆ ಎಂದರು.

ಕಕ್ಕಡ ಹದಿನೆಂಟರ ವಿಶೇಷತೆಯ ಕುರಿತು ವಿಚಾರ ಮಂಡನೆ ಮಾಡಿದ ಶಿಕ್ಷಕಿ ಚೋಕೀರ ಅನಿತಾ ದೇವಯ್ಯ ಅವರು ಕಕ್ಕಡದ ಮಹತ್ವ, ಈ ಸಂದರ್ಭದ ತಿಂಡಿ - ತಿನಿಸುಗಳ ಬಗ್ಗೆ ಹಾಗೂ ಈ ಹಿಂದಿನ ಕಾಲದ ಆಚರಣೆ ಹಾಗೂ ಪ್ರಸ್ತುತದ ಆಚರಣೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಯುವ ಪೀಳಿಗೆಗೆ ಇದರ ಮಹತ್ವದ ಅರಿವು ಮೂಡಿಸುವ ಕುರಿತೂ ಹೇಳಿದ ಅವರು, ಈಗಿನ ಸಾಮೂಹಿಕ ಆಚರಣೆ ಜನಾಂಗವನ್ನು ಬೆಸೆಯುತ್ತಿರುವ ಬಗ್ಗೆ ಗಮನ ಸೆಳೆದರು.

ಅಧ್ಯಕ್ಷತೆ ವಹಿಸಿದ್ದ ಪೊಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿ, ಕಾರ್ಯಕ್ರಮ ಆಯೋಜನೆಯ ಕುರಿತು ವಿವರಿಸಿದರು. ಅ.ಕೊ.ಸ.ದ ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ ಸೇರಿದಂತೆ ಪೊಮ್ಮಕ್ಕಡ ಪರಿಷತ್‍ನ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಮದ್ದ್‍ಪಾಯಸ, ಮದ್ದ್‍ಪುಟ್ಟ್, ಕಣಿಲೆ, ಕೆಸ, ಪತ್ರೊಡೆ, ಮಾವಿನ ಸಾರು ಸೇರಿದಂತೆ ಕಕ್ಕಡ ಕೋಳಿಯ ಖಾದ್ಯಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಕೋಟೆರ ನೈಲ್ ಚಂಗಪ್ಪ ಪ್ರಾರ್ಥಿಸಿ, ತೀತಿರ ಊರ್ಮಿಳಾ ಸ್ವಾಗತಿಸಿ, ನಿರೂಪಿಸಿ ದರು. ಮಳವಂಡ ಪೂವಿ ಮುತ್ತಪ್ಪ ವಂದಿಸಿದರು.