ಮಡಿಕೇರಿ, ಆ. 2: ಕೊಡಗಿನ ವಿಶೇಷತೆಗಳಲ್ಲಿ ಒಂದಾದ ಕಕ್ಕಡ ಹದಿನೆಂಟರ ಸಂಭ್ರಮ ಇಂದು. ಜಿಲ್ಲೆಯಲ್ಲಿ ಇಂದು ಮದ್ದು ಪಾಯಸ ಘಮ ಘಮಿಸಲಿದ್ದರೆ; ಕಕ್ಕಡ ಕೋಳಿಯ ಭಕ್ಷ್ಯ ಭೋಜನಗಳು ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸಲಿದೆ. ಮನೆ ಮನೆಗಳಲ್ಲಿ ಮದ್ದು ಪಾಯಸ, ಮದ್ದ್‍ಪುಟ್ಟ್‍ನ ಸವಿ, ನಾಟಿಕೋಳಿಯ ಭಕ್ಷ್ಯಕ್ಕೆ ಜನತೆ ಮುಂದಾಗಿದ್ದಾರೆ. ಇದರೊಂದಿಗೆ ಪ್ರಸ್ತುತ ಈ ಕಕ್ಕಡ ಪದಿನೆಟ್ಟ್ ಸಾರ್ವತ್ರಿಕವಾಗಿಯೂ ಅಲ್ಲಲ್ಲಿ ಆಚರಿಸಲ್ಪಡುತ್ತಿದ್ದು; ಇದಕ್ಕೂ ಸಿದ್ಧತೆಗಳು ನಡೆದಿವೆ. ಕೊಡಗಿನ ಜನತೆಗೆ ಈ ದಿನ ಸಾಮಾನ್ಯ ವೆನಿಸಿದರೂ ಜಿಲ್ಲೆಗೆ ಹೊಸದಾಗಿ ಬಂದವರಿಗೆ ಇದೊಂದು ಹೆಚ್ಚಿನ ವಿಶೇಷತೆಯಾಗಿ ಕಂಡು ಬರುತ್ತದೆ.

ಕಕ್ಕಡ ಮಾಸದಲ್ಲಿ ಈ ದಿನದಂದು ಬಳಸುವ ಮದ್ದು ಸೊಪ್ಪಿನ ಮೂಲಕ ತಯಾರಿಸಲ್ಪಡುವ ಪಾಯಸ, ಕೋಳಿ ಮಾಂಸದ ತಯಾರಿ ಒಂದೆಡೆಯಾದರೆ ಮಳೆಗಾಲದ ಈ ಅವಧಿಯ ವಿಶೇಷ ಪದಾರ್ಥಗಳ ತಯಾರಿಕೆ , ಪ್ರದರ್ಶನ, ಮಾರಾಟದಂತಹ ಕಾರ್ಯಕ್ರಮಗಳೂ ಅಲ್ಲಲ್ಲಿ ನಡೆಯಲಿವೆ. ನಾಪೋಕ್ಲು ಕೊಡವ ಸಮಾಜದಲ್ಲಿ ದಿನವಿಡೀ ತೀನಿನಮ್ಮೆ ಎಂಬ ಪೈಪೋಟಿ ಯೊಂದಿಗೆ ಕಾರ್ಯಕ್ರಮ ಜರುಗಲಿದ್ದರೆ; ಪೊನ್ನಂಪೇಟೆಯಲ್ಲಿ ಕಿಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದಿಂದ ಸಂಜೆ ನಡೆಯುವ ಪಂಜಿನ ಮೆರವಣಿಗೆ ಹಾಗೂ ಇತರ ಕಾರ್ಯಕ್ರಮದಲ್ಲಿ

(ಮೊದಲ ಪುಟದಿಂದ) ನೂರಾರು ಮಂದಿ ಭಾಗಿಯಾಗಲಿದ್ದಾರೆ. ವೀರಾಜಪೇಟೆಯಲ್ಲಿ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್, ಸಿಎನ್‍ಸಿಯಿಂದ ಕ್ಯಾಪಿಟಲ್ ವಿಲೇಜ್‍ನಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಇನ್ನಿತರ ಹಲವೆಡೆ ಗಳಲ್ಲಿಯೂ ಸಾಮೂಹಿಕ ಕಾರ್ಯಕ್ರಮಗಳು ಜರುಗಲಿವೆ.

ಕೊಡಗಿನಲ್ಲಿ ಈ ಬಾರಿ ವಿಭಿನ್ನ ‘ಕಕ್ಕಡ’

ಮಳೆಗಾಲದಕ್ಕೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಮಧ್ಯಭಾಗದ ಅವಧಿಯಲ್ಲಿ ಬರುವ ಕಕ್ಕಡ ಮಾಸ ವಿಶಿಷ್ಟವಾದದ್ದು; ಕನ್ನಡದಲ್ಲಿ ಕರ್ಕಾಟಕ - ಕಟಕ ಎಂದೂ, ತುಳು ಭಾಷೆಯಲ್ಲಿ ‘ಆಟಿ’ ಎಂದು ಕರೆಯಲ್ಪಡುವ ಈ ಮಾಸ ಕೊಡಗಿನಲ್ಲಿ ಕಕ್ಕಡ ಎಂದು ಜನಜನಿತ. ತೀರಾ ರಭಸದ ಮಳೆ, ಬಿರುಗಾಳಿ ಯಂತಹ ಗಾಳಿಯ ತೀವ್ರತೆ, ಮೈಕೊರೆಯುವ ಚಳಿ, ಎದೆ ನಡುಗಿಸುವ ಸಿಡಿಲಿನ ಅಬ್ಬರ, ಎಲ್ಲಿ ನೋಡಿದರಲ್ಲಿ ಕಾರ್ಮೋಡ ಆವರಿಸಿದ ಕಾರ್ಗತ್ತಲ ಮಾದರಿಯಲ್ಲಿ ಕಂಡುಬರುವ ಭೂಮಿ. ಇದು ಕಕ್ಕಡ ಮಾಸದ ಸಾಧಾರಣ ಹವಾಮಾನ. ಹಿಂದಿನ ವಾಡಿಕೆಯಂತೆ ಈ ತಿಂಗಳಿನಲ್ಲಿ ಪುನರ್ವಸು, ಪುಷ್ಯ ಹಾಗೂ ಆಶ್ಲೇಷ ನಕ್ಷತ್ರದ ಮಳೆ ಧೋ ಎಂದು ಸುರಿಯುವದರೊಂದಿಗೆ; ಇಡೀ ಕೊಡಗು ಜಿಲ್ಲೆಯಲ್ಲಿ ಒಂದು ರೀತಿಯ ಸನ್ನಿವೇಶ ಇಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ಚಿರಪರಿಚಿತ.

ಹಿಂದಿನ ಲೆಕ್ಕಾಚಾರದಂತೆ ಸಾಧಾರಣವಾಗಿ ಜೂನ್ ಆರಂಭದಿಂದ ಮುಂಗಾರು ಮಳೆ ಕೊಡಗಿನಲ್ಲಿ ಸುರಿಯಲಾರಂಭಿಸುತ್ತದೆ. ಆರಂಭದಲ್ಲಿ ರೋಹಿಣಿ, ನಂತರ ಮೃಗಶಿರ, ಆರಿದ್ರ ನಕ್ಷತ್ರದ ಬಳಿಕ ಕಕ್ಕಡ ಮಾಸದಲ್ಲಿ ಪುಷ್ಯ ಹಾಗೂ ಪುನರ್ವಸು ಮಳೆ ನಿರಂತರವಾಗಿ ಸುರಿಯುತ್ತದೆ. ಇದರ ನಂತರ ಬರುವ ಮಖಾ ನಕ್ಷತ್ರದಲ್ಲೂ ಸಾಧಾರಣ ಮಳೆಯಾಗುವದರೊಂದಿಗೆ ಈ ಮಾಸ ಮುಕ್ತಾಯಗೊಳ್ಳುವ ವೇಳೆಗೆ ಕಾರ್ಮೋಡ ಕವಿದ ವಾತಾವರಣದ ಮರೆಯಾಗಿ ಬೆಳಕಿನ ವಾತಾವರಣ ಕಂಡುಬರುವದು. ಕೊಡಗು ಕಂಡ ವಾತಾವರಣದ ಲಕ್ಷಣ, ವಿಪರೀತ ಮಳೆ, ಚಳಿಯ ವಾತಾವರಣ ಎದುರಿಸುವದರೊಂದಿಗೆ ಕೃಷಿ ಚಟುವಟಿಕೆಯ ಮೂಲಕ ಮುಂದಿನ ವರ್ಷಕ್ಕೆ ಸಿದ್ಧತೆ ಮಾಡಿಕೊಳ್ಳುವ ಕೊಡಗಿನ ಜನರು ಈ ಪರಿಸ್ಥಿತಿ ಎದುರಿಸಲು ವಿಶಿಷ್ಟ ರೀತಿಯ ಆಹಾರ ಪದ್ಧತಿಯನ್ನೂ ಕಂಡುಕೊಂಡಿದ್ದಾರೆ. ಹಿಂದಿನ ದಿನಗಳಲ್ಲಿ ನಗರ, ಪೇಟೆಗಳಲ್ಲಿ ಈ ಅವಧಿಯಲ್ಲಿ ಆಗಿಂದಾಗ್ಗೆ ತೆರಳಲು ಅವಕಾಶವೇ ಇರುತ್ತಿರಲಿಲ್ಲ. ಆದರೂ ದೇಹವನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಲು ಪೂರ್ವಿಕರು ಎಚ್ಚರ ವಹಿಸಿ ವೈಜ್ಞಾನಿಕ ರೀತಿಯಲ್ಲೇ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.

ದೇಹದ ಉಷ್ಣಾಂಶ ಹೆಚ್ಚಿಸಿಕೊಳ್ಳಲು ಹಿರಿಯರು ಕಂಡುಕೊಂಡಿದ್ದ ಆಹಾರ ಪದ್ಧತಿ ಎಲ್ಲರ ಬಾಯಲ್ಲೂ ನೀರೂರಿಸುತ್ತದೆ. ಮಳೆಗಾಲದಲ್ಲಿ ಸಿಗುವ ಏಡಿ (ಞಂಡ್), ಮೀನು, ವಿವಿಧ ಮಾದರಿಯ ಅಣಬೆಗಳು, ಕಣಿಲೆ, ಹಣ್ಣು ಸೌತೆ, ಹಣ್ಣು ಬೆಳ್ಳರಿ, ಒಣಗಿಸಿದ ಮಾಂಸ, ಮುದುರೆ, ಉಪ್ಪಿಗೆ ಹಾಕಿ ಇಡುವ ಕಾಡು ಮಾವಿನ ಕಾಯಿ, ಮಣ್ಣು ಲೇಪಿಸಿ ಇಡುವ ಹಲಸಿನ ಬೀಜ, ಜೇನುತುಪ್ಪ ಇತ್ಯಾದಿಗಳ ಸಂಗ್ರಹ ಬಹುತೇಕ ಎಲ್ಲರ ಮನೆ ಮನೆಯಲ್ಲಿ ಸಾಧಾರಣ.

ಕಕ್ಕಡ ಕೋಳಿ... ಮದ್ದು ಪಾಯಸ

ಇವೆಲ್ಲದರೊಂದಿಗೆ ಕಕ್ಕಡ ಮಾಸದ ಮತ್ತೊಂದು ವಿಶಿಷ್ಟ ಭಕ್ಷ್ಯ ಕಕ್ಕಡದ ನಾಟಿ ಕೋಳಿ ಹಾಗೂ ಮದ್ದು ಪಾಯಸ. ಈ ಅವಧಿಯಲ್ಲಿ ಕೋಳಿಮಾಂಸ ಭಕ್ಷಿಸಿದರೆ, ಅದಕ್ಕೆ ರೋಗ ನಿರೋಧಕ ಶಕ್ತಿ ಇರುತ್ತದೆ ಎಂಬದು ಒಂದು ನಂಬಿಕೆ. ಅಲ್ಲದೆ, ವಿಶೇಷವಾಗಿ ಈ ಮಾಸ ಆರಂಭಗೊಂಡ ನಂತರದ 18ನೇ ದಿನದಂದು 18 ಬಗೆಯ ಔಷಧೀಯ ಗುಣಗಳಲ್ಲಿ ಸೊಪ್ಪಿನಿಂದ ಮಾಡುವ ಹಿಟ್ಟು, ಪಾಯಸ. ಈ ತಿಂಗಳಿನ ಮತ್ತೊಂದು ವೈಶಿಷ್ಟ್ಯ. ಇದರ ಸೇವನೆ ವರ್ಷಕ್ಕೊಮ್ಮೆ ಮಾತ್ರ. ಈ ಅವಧಿಯಲ್ಲಿ ಸಿಗುವ ಕಾಡುಹಣ್ಣುಗಳು (ಕರ್‍ಮುಂಜಿ ಹಣ್ಣು ಇತ್ಯಾದಿ) ಕೊಡಗಿನ ವಿಶೇಷತೆಗಳು.

ಇವೆಲ್ಲ ವಿಶೇಷತೆಗಳಿಗೆ ಈ ಮಾಸದಲ್ಲಿ ಕಂಡುಬರುವ ನಿರಂತರ ಮಳೆಯೇ ಮೂಲ ಆಕರ್ಷಣೆ ಎಂಬದು ಹಿರಿಯರ ಅನುಭವದ ಮಾತು. ಕಳೆದ ಕೆಲವು ವರ್ಷಗಳ ಹಿಂದೆ ಈ ಕಕ್ಕಡ ಮಾಸದ ವೈಶಿಷ್ಟ್ಯತೆ ಬಹುತೇಕ ಮರೆಯಾದಂತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಬಹಿರಂಗ ಆಚರಣೆ, ಹೆಚ್ಚಿನ ಪ್ರಚಾರದಿಂದಾಗಿ ಇದರ ಮಹತ್ವಕ್ಕೆ ಮತ್ತೆ ಮನ್ನಣೆ ಕಂಡುಬರುತ್ತಿದ್ದು, ಈಗಿನ ಜನತೆಯೂ ವಿಶೇಷತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ.

ಆದರೆ ಈ ಬಾರಿ ವಿಭಿನ್ನ: ಪ್ರಸಕ್ತ ವರ್ಷ ಕೊಡಗಿನಲ್ಲಿ ಮುಂಗಾರು ಕ್ಷೀಣಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲವೂ ಏರು-ಪೇರಾಗುತ್ತಿದೆ. ಧೋ ಎಂದು ಸುರಿಯುವ ಮಳೆಯ ಬದಲು ಕಕ್ಕಡದಲ್ಲೂ ಬಿಸಿಲಿನ ವಾತಾವರಣ ಕಂಡಬರುತ್ತಿದೆ. ಹಿಂದಿನ ವರ್ಷಗಳಂತೆ ಅಣಬೆಗಳು ಸಿಗುತ್ತಿಲ್ಲ. ಕಣಿಲೆಗೂ ಕಡಿವಾಣವಾಗಿದೆ. ತೀರಾ ಬಿರುಸಿನಿಂದ ನಡೆಯಬೇಕಿದ್ದ ನಾಟಿ ಕಾರ್ಯವೂ ವಿಳಂಬ ಗತಿಯಲ್ಲಿದೆ. ಮೈದುಂಬಿ ಹರಿಯಬೇಕಿದ್ದ ನದಿ, ತೋಡು, ತೊರೆಗಳಲ್ಲಿ ನೀರಿನ ಏರಿಕೆ ಹೆಚ್ಚಾಗಿ ಕಂಡುಬಂದಿಲ್ಲ. ಈ ಮಾಸದಲ್ಲಿ ಸಾಧಾರಣವಾಗಿ ಹುಟ್ಟುತ್ತಿದ್ದ ಜಲಮೂಲವೂ ಗೋಚರಿಸಿಲ್ಲ. ಈ ರೀತಿಯ ಬದಲಾದ ವಾತಾವರಣದ ನಡುವೆ ಪ್ರಸಕ್ತ ವರ್ಷದ ಆಟಿ ಮಾಸ ಮುಂದುವರಿಯುತ್ತಿದೆ. ಆಗಸ್ಟ್ ಮೂರರಂದು (ಇಂದು) ಮಾಸದ ವಿಶೇಷವಾದ ಕಕ್ಕಡ ಪದಿನೆಟ್ಟ್ (ಆಟಿ ಹದಿನೆಂಟು) ಆಚರಿಸಲ್ಪಡಲಿದೆ. ಈ ಹಿಂದಿನ ವರ್ಷಗಳಂತೆ ಇತರ ವಿಶೇಷ ಐಟಂಗಳಿಗೆ ಕೊರತೆ ಕಂಡುಬರುತ್ತಿದ್ದರೂ ಜನತೆ ಮದ್ದು ಪಾಯಸ, ಕಕ್ಕಡ ಕೋಳಿಯ ನಿರೀಕ್ಷೆಯಲ್ಲಿದ್ದಾರೆ.

- ಶಶಿ