ಗೋಣಿಕೊಪ್ಪಲು, ಆ.3: ದುಡಿದು ತಿನ್ನುವ ವಯಸ್ಸಿನಲ್ಲಿ ಮೈ ಬಗ್ಗಿಸಿ ದುಡಿಯುವ ಬದಲು ಕಳ್ಳತನದಿಂದ ಸುಲಭವಾಗಿ ಹಣ ಸಂಪಾದಿಸಿ ಮಜಾ ಉಡಾಯಿಸಲು ತೆರಳಿದ 5 ಜನರ ತಂಡ ಇದೀಗ ಮಾಡಿದ ತಪ್ಪಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲುವಾಸ ಅನುಭವಿಸುವಂತಾಗಿದೆ.
ಗೋಣಿಕೊಪ್ಪಲು ಎರಡನೆ ವಿಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸುಧಾರಣೆಗೆ ಕೆಲವು ಆಡುಗಳನ್ನು ಸಾಕುತ್ತ ಬದುಕು ಕಟ್ಟಿಕೊಂಡಿದ್ದ ಲಕ್ಷ್ಮಿನಾರಾಯಣ ಅವರು ಅನೇಕ ವರ್ಷಗಳಿಂದ ಆಡು ಸಾಕಾಣಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಎಂದಿನಂತೆ ತಾ.2 ರಂದು ರಾತ್ರಿ ಆಡುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮಲಗಿದ್ದರು.
ಮಧ್ಯ ರಾತ್ರಿ ವೇಳೆಯಲ್ಲಿ ಕೊಟ್ಟಿಗೆಯಲ್ಲಿ ಸದ್ದು ಬಂದ ಕಾರಣ ತೆರಳಿ ನೋಡಿದಾಗ ಕಟ್ಟಿ ಹಾಕಲಾಗಿದ್ದ 8 ಆಡುಗಳು ಕಾಣೆಯಾಗಿದ್ದವು. ತಡರಾತ್ರಿಯಲ್ಲಿಯೇ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ತೆರಳಿದ ದಂಪತಿ ದೂರು ನೀಡಿದರು.
ತಕ್ಷಣ ಕಾರ್ಯಾಚರಣೆ ಆರಂಭಿಸಿದ ಗೋಣಿಕೊಪ್ಪಲು ಪೋಲೀಸ್ ಠಾಣೆಯ ಠಾಣಾಧಿಕಾರಿ ಶ್ರೀಧರ್ ರಾತ್ರಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಿಗೆ ಸುದ್ದಿ ರವಾನಿಸುವ ಮೂಲಕ ಆರೋಪಿಗಳ ಸೆರೆಗೆ ಬಲೆ ಬೀಸಿದ್ದರು.ಅಷ್ಟೊತ್ತಿಗಾಗಲೇ ಈ ಖದೀಮರ ತಂಡ ವಾಹನದಲ್ಲಿ ಆಡುಗಳನ್ನು ತುಂಬಿಕೊಂಡು ತಿತಿಮತಿ ಸಮೀಪದ ಆನೆ ಚೌಕೂರು ಗೇಟ್ ದಾಟಿ ಪಿರಿಯಾಪಟ್ಟಣ ತಲಪಿತ್ತು.
ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿದ್ದ ಗಣೇಶ್ ಅವರಿಗೆ ಇಲ್ಲಿನ ಪೊಲೀಸರು ಸುದ್ದಿ ಮುಟ್ಟಿಸಿದರು. ರಾತ್ರಿಯ ಪಾಳೆಯದ ರೌಂಡ್ ನಲ್ಲಿದ್ದ ಗಣೇಶ್ ರವರು ವಾಹನ ತಪಾಸಣೆ ಮಾಡುವ ಭರವಸೆ ನೀಡಿದರು. ಐದು ಜನರ ತಂಡ ತಮ್ಮ ಟಾಟ ಏಸ್ ವಾಹನದಲ್ಲಿ ಕದ್ದ ಆಡುಗಳನ್ನು ತುಂಬಿಸಿಕೊಂಡು ಮುಂಜಾನೆ 4 ಗಂಟೆಗೆ ಪಿರಿಯಾಪಟ್ಟಣ ತಲಪಿದ್ದಾರೆ. ಕರ್ತವ್ಯದಲ್ಲಿದ್ದ ಠಾಣಾಧಿಕಾರಿ ಗಣೇಶ್ ಹಾಗೂ ತಂಡ ತಪಾಸಣೆ ನಡೆಸಿ
ಆರೋಪಿಗಳಾದ ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮದ ಕೃಷ್ಣಪ್ಪ ಅವರ ಮಗ ಸುಲೇಮಾನ್ ಅಲಿಯಾಸ್ ವಿನೋದ್ (24), ಗೋಣಿಕೊಪ್ಪಲು ಎರಡನೇ ವಿಭಾಗದ ರಾಮಕೃಷ್ಣ ಎಂಬವರ ಮಗ ಮುತ್ತು (26) ರಾಜ ಎಂಬವರ ಮಗ ಶಿವು (24) ಹಾಗೂ ಶೇಕರ್ ಎಂಬವರ ಮಗ ಕಿರಣ(25) ಇವರುಗಳನ್ನು ಬಂಧಿಸಿದ್ದಾರೆ.
ನಂತರ ಗೋಣಿಕೊಪ್ಪಲು ಪೊಲೀಸರಿಗೆ ವಿಷಯ ತಿಳಿಸಿ ಆಡು ಕಳೆದುಕೊಂಡ ಲಕ್ಷ್ಮಿ,ನಾರಾಯಣ್ ರವರನ್ನು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಕರೆಸಿಕೊಂಡು ಕಳವಾಗಿದ್ದ ಆಡುಗಳನ್ನು ನೀಡಿದ್ದಾರೆ. ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಗೋಣಿಕೊಪ್ಪಲು ವೃತ್ತದ ದಿವಾಕರ್ ಮಾರ್ಗದರ್ಶನದಲ್ಲಿ ಎಸ್‍ಐ ಶ್ರೀಧರ್ ಸಿಬ್ಬಂದಿಗಳಾದ ಕೃಷ್ಣ, ಮಂಜು ಸಾಲಿಯಾನ್ ಮುಂತಾ ದವರು ಕಾರ್ಯಾಚರಣೆಯಲ್ಲಿದ್ದರು.
- ಹೆಚ್.ಕೆ.ಜಗದೀಶ್