ಶ್ರೀಮಂಗಲ, ಆ. 3: ಭತ್ತದ ಕೃಷಿಯಲ್ಲಿ ಯಾಂತ್ರೀಕರಣದ ಪರಿಚಯ ಹಾಗೂ ಬಳಕೆ ನಂತರ ಕಾರ್ಮಿಕರ ಕೊರತೆ ಮತ್ತು ಭತ್ತದ ಕೃಷಿ ಲಾಭದಾಯಕವಲ್ಲ ಎಂಬ ಸಮಸ್ಯೆಗೆ ಪರಿಹಾರ ದೊರೆತಿದ್ದು, ಯಾಂತ್ರೀಕರಣ ಬಳಕೆಯಿಂದ ಭತ್ತದ ಕೃಷಿಯನ್ನು ಲಾಭದಾಯಕವಾಗಿ ಹಾಗೂ ಸುಲಭವಾಗಿ ಕಡಿಮೆ ಅವಧಿಯಲ್ಲಿ ಮಾಡಲು ಸಾಧ್ಯವಿದೆ. ಆದ್ದರಿಂದ ಇದೇ ಕಾರಣ ಮುಂದಿಟ್ಟು ಭತ್ತದ ಗದ್ದೆಯನ್ನು ಪಾಳು ಬಿಡುವದನ್ನು ಬಿಡಬೇಕು ಎಂದು ಯುಕೋ ಸಂಘಟನೆಯ “ನಾಡ ಮಣ್ಣ್ - ನಾಡ ಕೂಳ್” ಯೋಜನೆಯ ನಿರ್ದೇಶಕ ಚೆÀಪ್ಪುಡಿರ ಸುಜು ಕರುಂಬಯ್ಯ ಪ್ರತಿಪಾದಿಸಿದರು.

ಅರುವತ್ತೊಕ್ಲು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳೊಂದಿಗೆ ಈ ಸಂಸ್ಥೆಯ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಅವರ ಗದ್ದೆಯಲ್ಲಿ “ನಾಡ ಮಣ್ಣ್ - ನಾಡ ಕೂಳ್” ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಬಗ್ಗೆ ಜಾಗೃತಿ ಹಾಗೂ ಯಾಂತ್ರೀಕರಣದ ಬಳಕೆ- ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭತ್ತದ ಕೃಷಿಯಲ್ಲಿ ಬಿತ್ತನೆ, ನಾಟಿ, ಉಳುಮೆ, ಕಟಾವು ಸೇರಿದಂತೆ ಎಲ್ಲಾ ಕೆಲಸಕ್ಕೂ ಯಾಂತ್ರೀಕರಣದಿಂದ ಲಾಭದಾಯಕವಾಗಿ ಪರಿವರ್ತಿಸಲು ಸಾಧ್ಯವಿದೆ. ಇಲ್ಲಿಯವರೆಗೆ ಕಾರ್ಮಿಕರ ಕೊರತೆ ಮತ್ತು ಭತ್ತದ ಕೃಷಿ ಲಾಭದಾಯಕವಲ್ಲ ಎಂದು ಗದ್ದೆಗಳನ್ನು ಪಾಳು ಬಿಡುವದು, ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡುವದು ನಡೆಯುತ್ತಿದೆ. ಆದರೆ ಇದು ಸರಿಯಲ್ಲ. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆ ಹೊರತು ಅದರಿಂದ ಪಲಾಯನ ಮಾಡುವದು ಸರಿಯಲ್ಲ ಎಂದು ಹೇಳಿದರು.

ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಭತ್ತದ ಕೃಷಿಯಲ್ಲಿ ಕೊಡಗಿನ ಸಂಸ್ಕøತಿ ಅಡಗಿದೆ. ಅದರಲ್ಲೂ ಕೊಡವರ ಎಲ್ಲಾ ಹಬ್ಬಗಳು ಭತ್ತದ ಕೃಷಿ ಹಾಗೂ ಈ ಮಣ್ಣಿನೊಂದಿಗೆ ಸಂಬಂಧ ಬೆರೆತಿರುವದಾಗಿದೆ. ಭತ್ತದ ಗದ್ದೆಗಳನ್ನು ಕೃಷಿ ಮಾಡಿದಾಗ ಗದ್ದೆಗಳಲ್ಲಿ ಆರು ತಿಂಗಳು ನೀರು ಇಂಗುವದರಿಂದ ಅಂತರ್ಜಲ ಮಟ್ಟ ಏರಿಕೆಯಾಗುತ್ತಿದ್ದು, ಭೂಮಿ ನೀರನ್ನು ಹಿಡಿದಿಟ್ಟುಕೊಂಡು ನದಿ, ತೋಡು, ಕೆರೆ, ಬಾವಿಗಳಿಗೆ ಬಿಡುಗಡೆ ಮಾಡುತ್ತದೆ. ಇದರಿಂದ ನದಿ, ತೋಡು, ಕೆರೆ, ಕಟ್ಟೆ ಬಾವಿಗಳಲ್ಲಿ ವರ್ಷಂಪೂರ್ತಿ ನೀರಿನ ಲಭ್ಯತೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಭೂಮಿಯನ್ನು ಪಾಳು ಬಿಡುವದು ಹಾಗೂ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುತ್ತಿರುವದರಿಂದ ಮಳೆಯ ನೀರು ಹರಿದು ನೇರವಾಗಿ ನದಿ ತೋಡುಗಳ ಮೂಲಕ ಸಮುದ್ರ ಸೇರುತ್ತಿದೆ. ಮಳೆ ನಿಂತ ಒಂದೆರೆಡು ದಿನದಲ್ಲಿಯೇ ನದಿ ತೋಡುಗಳಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಬತ್ತಿ ಹೋಗುತ್ತಿದೆ ಎಂದು ಭತ್ತದ ಕೃಷಿಯ ಮಹತ್ವದ ಬಗ್ಗೆ ವಿವರಿಸಿದರು.

ಸರಕಾರ ಕೊಡಗಿನಲ್ಲಿ ಭತ್ತದ ಕೃಷಿಗೆ ವಿಶೇಷ ಪ್ರೋತ್ಸಾಹ ನೀಡಬೇಕು. ಪಾಳು ಬಿಟ್ಟ ಭತ್ತದ ಗದ್ದೆಗಳಲ್ಲಿ ಕೃಷಿ ಮಾಡಲು ವಿಶೇಷ ಪ್ರೋತ್ಸಾಹ ಧನ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.

ಸರ್ವದೈವತಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ರೈತರ ದುಡಿಮೆಯ ಮಹತ್ವ, ಕೃಷಿ, ಮಣ್ಣಿನ ಫಲವತ್ತತೆ, ಕೃಷಿಯಲ್ಲಿ ವೈಜ್ಞಾನಿಕತೆ ಬಗ್ಗೆ ವಿವರಿಸಿದ ಅವರು ಕೊಡಗಿನಲ್ಲಿ ಕೃಷಿಗೆ ಹೆಚ್ಚಿನ ಮಹತ್ವವನ್ನು ಮುಂದಿನ ಪೀಳಿಗೆಯಾಗಿರುವ ಇಂದಿನ ವಿದ್ಯಾರ್ಥಿಗಳು ನೀಡುವಂತಾಗಬೇಕು ಎಂದು ಹೇಳಿದರು.

ಈ ಸಂದರ್ಭ ವಿದ್ಯಾರ್ಥಿಗಳು ಭತ್ತದ ಕೃಷಿಯ ಯಾಂತ್ರೀಕರಣ ಕಾರ್ಯಾಗಾರದಲ್ಲಿ ಪಾಲ್ಗೊಂಡು ಭತ್ತದ ನಾಟಿ ಮಾಡುವ ಯಂತ್ರವನ್ನು ಚಲಾಯಿಸಿ; ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವತಃ ನಾಟಿ ಮಾಡುವ ಮೂಲಕ ಭತ್ತದ ಕೃಷಿಯ ಅನುಭವದೊಂದಿಗೆ ಸಂತಸಪಟ್ಟರು. ಶಾಲೆಯ ಪ್ರಾಂಶುಪಾಲೆ ಲಲಿತಾ ಮೊಣ್ಣಪ್ಪ, ಉಪನ್ಯಾಸಕಿ ರಕ್ಷಿತಾ, ಶಿಕ್ಷಕರಾದ ಪ್ರಮೋದ್, ನಿಧಿ ಸೋಮಣ್ಣ, ರವಿಚಂದ್ರನ್ ಹಾಜರಿದ್ದರು.