ಕೂಡಿಗೆ, ಆ. 3 : ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಸರ್ಕಾರದ ಆದೇಶದಂತೆ ಮುಖ್ಯ ನಾಲೆಗೆ ನೀರನ್ನು ಹರಿಬಿಡಲಾಗುತ್ತಿತ್ತು. 15 ದಿನಗಳ ನಂತರ ಇದೀಗ ನೀರನ್ನು ಸ್ಥಗಿತಗೊಳಿಸಲಾಗಿದೆ.
ಕಾವೇರಿ ನೀರಾವರಿ ನಿಗಮ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯ ತೀರ್ಮಾನದಂತೆ ಈ ಬಾರಿ ನೀರಿಲ್ಲದೆ ಬರಡಾಗಿರುವ ಜಲಾಶಯದಿಂದ ಅಲ್ಪ ಸ್ವಲ್ಪ ಇದ್ದ ನೀರನ್ನು ಕಳೆದ 15 ದಿನಗಳಿಂದ ಮುಖ್ಯ ನಾಲೆಗಳ ಮೂಲಕ ಕೆರೆ ಕಟ್ಟೆ ತುಂಬಲು ಹಾಗೂ ದನಕರುಗಳಿಗೆ ಕುಡಿಯಲು 1000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿತ್ತು. ಆದರೆ, ಇದೀಗ ಮಳೆಯ ಪ್ರಮಾಣವು ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ತೀರಾ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ಬೇಸಾಯ ಮಾಡಲು ನೀರು ಹರಿಸಲು ನಿಗಮದಿಂದ ಯಾವದೇ ರೀತಿಯ ಆದೇಶ ಬಾರದ ಹಿನ್ನೆಲೆಯಲ್ಲಿ ಇಂದಿನಿಂದ 1 ವಾರದವರೆಗೆ ನೀರನ್ನು ಸ್ಥಗಿತಗೊಳಿಸಲಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಇಲಾಖೆಯ ಇಂಜಿನಿಯರ್‍ಗಳು ನಮಗೆ ನೀರನ್ನು ಸ್ಥಗಿತಗೊಳಿಸಲು ಆದೇಶ ಬಂದಿದೆ. ನೀರನ್ನು ನಾಲೆಗಳಲ್ಲಿ ಸ್ಥಗಿತಗೊಳಿಸಲಾಗಿದೆ. ರೈತರು ಒತ್ತಾಯ ಮಾಡಿದರೂ ಸಹ ನಾವು ಸ್ಪಲ್ಪ ಪ್ರಮಾಣದಲ್ಲಿಯೂ ನೀರನ್ನು ಹರಿಸಲು ಸಾಧ್ಯವಿಲ್ಲ. ಅಧಿಕಾರಿಗಳ ಆದೇಶ ಬಂದಲ್ಲಿ ಮಾತ್ರ ನೀರನ್ನು ಹರಿಸಲು ಸಾಧ್ಯವಾಗುತ್ತದೆ. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಮಟ್ಟದಲ್ಲಿರುವದರಿಂದ ಒಂದು ವಾರ ನೀರನ್ನು ನಾಲೆಗೆ ಹರಿಸದಂತೆ ಸ್ಥಗಿತಗೊಳಿಸಿ ನಂತರ ಒಂದು ವಾರದವರೆಗೆ ನೀರನ್ನು ಹರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.