ಸಿದ್ದಾಪುರ, ಆ. 3: ಸಿದ್ದಾಪುರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ , ಹಿರಿಯ ವಿದ್ಯಾರ್ಥಿಗಳಿಂದ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹಮ್ಮದ್, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು, ಶಾಲೆಗೆ ಹಾಗೂ ಪೋಷಕರಿಗೆ ಹೆಸರನ್ನು ತರಬೇಕು. ದೇಶಕ್ಕೆ ಕೀರ್ತಿ ತರಲು ಶ್ರಮಿಸಬೇಕು. ಶಾಲೆಯನ್ನು ಮನೆಯಂತೆ ಕಂಡು, ಓದಿನ ಕಡೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಸುಧಾಕರ್, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದೊಂದಿಗೆ ವಿದ್ಯಾರ್ಥಿ ಸಮೂಹದವರು ಹಾಜರಿದ್ದರು.