ಸೋಮವಾರಪೇಟೆ, ಆ. 3: ವಿಪತ್ತುಗಳು ಸಂಭವಿಸಿದ ಸಂದರ್ಭ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಗಳು ಮಾದಾಪುರದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಮಾದಾಪುರ ಗ್ರಾ.ಪಂ. ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಅತಿವೃಷ್ಟಿ, ರಸ್ತೆ ಅಪಘಾತ, ಹೃದಯಾಘಾತದಂತಹ ಘಟನೆಗಳು ಎದುರಾದ ಸಂದರ್ಭ ತಕ್ಷಣಕ್ಕೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬದರ ಬಗ್ಗೆ ಎನ್‍ಡಿಆರ್‍ಎಫ್‍ನ ಸಿಬ್ಬಂದಿಗಳು ಪ್ರಾತ್ಯಕ್ಷತೆಯ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಮಕ್ಕಳ ಗಂಟಲಲ್ಲಿ ಗಟ್ಟಿಯಾದ ವಸ್ತುಗಳು ಸಿಕ್ಕಿಹಾಕಿಕೊಂಡರೆ ಅದನ್ನು ತೆಗೆಯುವ ಬಗೆ, ನೀರಿನಲ್ಲಿ ಬಿದ್ದವರ ರಕ್ಷಣೆ, ಗಾಯಗಳಿಂದ ಹೆಚ್ಚಿನ ರಕ್ತಸ್ರಾವವನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಎನ್. ಲತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ಕಂದಾಯ ನಿರೀಕ್ಷಕ ಶಿವಪ್ಪ, ಪಂಚಾಯಿತಿ ಸದಸ್ಯರುಗಳು, ಸಿಬ್ಬಂದಿಗಳು, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.