ಸೋಮವಾರಪೇಟೆ, ಆ. 3: ದಾಬೋಲ್ಕರ್ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದ್ದು, ಇವರುಗಳ ಪರ ವಾದ ಮಂಡಿಸುತ್ತಿರುವ ಸಂಜೀವ್ ಪುನೇಲಕರ್ ಅವರ ವಿರುದ್ಧ ಮಹಾರಾಷ್ಟ್ರ ಸರ್ಕಾರದ ಪೊಲೀಸರು ಪ್ರಕರಣ ದಾಖಲಿಸಿರುವದನ್ನು ಖಂಡಿಸಿ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಮನವಿ ಸಲ್ಲಿಸಿದರು.
ಹಿಂದೂಪರ ಕಾರ್ಯಕರ್ತರನ್ನು ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿರುವ ಸಂಜೀವ್ ಅವರ ಮೇಲೆಯೂ ಪ್ರಕರಣ ದಾಖಲಿಸಿರುವದು ಖಂಡನೀಯ. ತಕ್ಷಣ ಈ ಮೊಕದ್ದಮೆಯನ್ನು ಹಿಂಪಡೆಯಬೇಕೆಂದು ತಾಲೂಕು ಶಿರಸ್ತೇದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದರೊಂದಿಗೆ ಲಾಲ್ ಕಪ್ತಾನ ಸಿನಿಮಾದಲ್ಲಿ ಹಿಂದೂ ನಾಗಸಾಧುಗಳನ್ನು ವಿಕೃತವಾಗಿ ತೋರಿಸುವ ಮೂಲಕ ಹಿಂದೂ ಧರ್ಮದ ಅವಹೇಳನ ಮಾಡಲಾಗಿದೆ. ಈ ಹಿನ್ನೆಲೆ ಚಲನಚಿತ್ರವನ್ನು ದೇಶಾದ್ಯಂತ ನಿಷೇಧಿಸಬೇಕು. ದೇಶಾದ್ಯಂತ ಗೋಹತ್ಯಾ ಮಸೂದೆ ಸಂಪೂರ್ಣವಾಗಿ ಅಂಗೀಕಾರ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳಾದ ರತ್ನಕುಮಾರ್, ಪಿ. ಮಧು, ಲಕ್ಷ್ಮಿಕಾಂತ್, ಮಂಜುನಾಥ್, ರಾಜು, ಶರಣ್ ಅವರುಗಳು ಉಪಸ್ಥಿತರಿದ್ದರು.