ಶನಿವಾರಸಂತೆ, ಆ. 3: ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಾಲ್ಕು ಮಂದಿ ಸಹಾಯಕ ಠಾಣಾಧಿಕಾರಿಗಳಿಗೆ, ಶನಿವಾರಸಂತೆ ಪೊಲೀಸ್ ಠಾಣೆ ಹಾಗೂ ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯ ಪೊಲೀಸರಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಹಾಯಕ ಠಾಣಾಧಿಕಾರಿ ನಂಜುಂಡೇಗೌಡ ಅವರು ಸೇವೆಯಿಂದ ನಿವೃತ್ತಗೊಂಡಿದ್ದಾರೆ. ಸಹಾಯಕ ಠಾಣಾಧಿಕಾರಿಗಳಾದ ಗೋವಿಂದರಾಜ್ ಮಡಿಕೇರಿ ನಗರ ಠಾಣೆಗೆ, ಶಿವಣ್ಣ ವೀರಾಜಪೇಟೆ ಗ್ರಾಮಾಂತರ ಠಾಣೆಗೆ ಹಾಗೂ ಬಸವರಾಜು ಶೆಟ್ಟಿ ಪೊನ್ನಂಪೇಟೆ ಠಾಣೆಗೆ ವರ್ಗಾವಣೆಗೊಂಡಿದ್ದು, ಇವರುಗಳನ್ನು ಬೀಳ್ಕೊಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಮಾತನಾಡಿ, ಪೊಲೀಸರಿಗೆ ವರ್ಗಾವಣೆ ಸರ್ವೆ ಸಾಮಾನ್ಯ ಮುಂದೆಯೂ ಉತ್ತಮ ಸೇವೆ ಸಲ್ಲಿಸುವಂತೆ ಹೇಳಿದರು. ಸಭೆಯನ್ನು ಉದ್ದೇಶಿಸಿ ಎಎಸ್‍ಐ ಚೆಲುವರಾಜ್, ಸಿಬ್ಬಂದಿಗಳಾದ ಎಂ.ಎಸ್. ಬೋಪಣ್ಣ, ಈರಪ್ಪ, ಲೋಕೇಶ್, ಪ್ರದೀಪ್‍ಕುಮಾರ್, ಪರಮೇಶ್, ರಘು, ಮಹಿಳಾ ಸಿಬ್ಬಂದಿಗಳಾದ ಪೂರ್ಣಿಮಾ, ಶಶಿ, ಸವಿತಾ, ಸೋನಿ ಮಾತನಾಡಿದರು. ಸಭೆಯಲ್ಲಿ ಕುಶಾಲನಗರ ಪಿಎಸ್‍ಐ ಜಗದೀಶ್, ಶುಂಟಿಕೊಪ್ಪದ ಪಿಎಸ್‍ಐ ಜಯರಾಂ, ಶನಿವಾರಸಂತೆ ಎಎಸ್‍ಐಗಳಾದ ಹೆಚ್.ಎಂ. ಗೋವಿಂದ್, ಶಿವಲಿಂಗ ಹಾಗೂ ಪೊಲೀಸರ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಪೂರ್ಣಿಮಾ ಸ್ವಾಗತಿಸಿ, ಎಂ.ಎಸ್. ಬೋಪಣ್ಣ ನಿರೂಪಿಸಿ, ಎಎಸ್‍ಐ ಚೆಲುವರಾಜ್ ವಂದಿಸಿದರು.