ವೀರಾಜಪೇಟೆ, ಆ. 3: ಸಮೀಪದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೂರು-ಭಾಗಮಂಡಲ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಇಲ್ಲಿನ ಅಂಬಟ್ಟಿ ಗ್ರಾಮದಲ್ಲಿ ಇಂದು ಅಪರಾಹ್ನ ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆಲ್ಟೋ (ಕೆ.ಎ.12 ಪಿ.9481) ಕಾರಿನಲ್ಲಿದ್ದ ನವೀನ್ ಹಾಗೂ ಸಬಿತಾ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ನವೀನ್ ದಂಪತಿ ಅಂಬಟ್ಟಿ ಗ್ರಾಮದಿಂದ ಪುತ್ತೂರಿಗೆ ತೆರಳುತ್ತಿದ್ದಾಗ ವೀರಾಜಪೇಟೆ ಕಡೆಯಿಂದ ಬಂದ (ಕೆ.ಎ.12ಪಿ 1038) ಸ್ವಿಫ್ಟ್ ಕಾರು ಡಿಕ್ಕಿಯಾಗಿದೆ. ಎರಡು ಕಾರುಗಳು ಜಖಂಗೊಂಡಿದ್ದು ಇಲ್ಲಿನ ಗ್ರಾಮಾಂತರ ಪೊಲೀಸರು ಸ್ವಿಫ್ಟ್ ಕಾರಿನ ಮಾಲೀಕ ಪೊನ್ನಂಪೇಟೆಯ ಕುಶಾಲಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಲ್ಟೋ ಕಾರನ್ನು ಸಬಿತಾ ಎಂಬವರು ಚಾಲಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.