ಒಡೆಯನಪುರ, ಆ. 2: ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಸಮೀಪದ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ‘ಯೋಗ ಮಾಡುವ ಸುಯೋಗರಾಗುವ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಸ್.ವಿ.ಶುಭು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗ ಪ್ರಾಚೀನ ಕಾಲದಿಂದ ಪುರಾತನ ಋಷಿಮುನಿ ಗಳಿಂದ ಬಂದ ಅತ್ಯದ್ಭುತ ಶಕ್ತಿಯುಳ್ಳ ವ್ಯಾಯಾಮ ಕ್ರಿಯೆಯಾಗಿದೆ ಎಂದರು. ಯೋಗ ವ್ಯಾಯಾಮದ ಒಂದು ಭಾಗವಾಗಿರುವದರಿಂದ ವಿದ್ಯಾರ್ಥಿಗಳು ಪ್ರತಿದಿನ ನಿಗದಿತ ಸಂದರ್ಭದಲ್ಲಿ ಯೋಗವನ್ನು ಅಭ್ಯಾಸ ಮಾಡಿಕೊಳ್ಳಬೇಕು, ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ವೃದ್ಧಿಯಾಗಿ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸುಲಭವಾಗುತ್ತದೆ ಎಂದರು.
ಬೆಂಗಳೂರು ಪ್ರಣವ ಯೋಗ ಪ್ರತಿಷ್ಠಾನ ಕೇಂದ್ರದ ನಿರ್ದೇಶಕ ವಿ.ಅಶೋಕ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಯೋಗ ಅವಶ್ಯವಾಗಿ ಬೇಕಾಗಿರುತ್ತದೆ, ದಿನ ನಿತ್ಯದ ಜಂಜಾಟದ ಬದುಕಿಗೆ ಯೋಗ ಪೂರಕವಾಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಕೆಲಸ, ಒತ್ತಡಗಳು, ಆಹಾರ ಪದ್ಧತಿಗಳಲ್ಲಿ ಬದಲಾವಣೆ ಕಾಣುತ್ತಿರುವದರಿಂದ ಹಲವಾರು ಕಾಯಿಲೆ ರೋಗಗಳಿಗೆ ತುತ್ತಾಗಿ ಆರೋಗ್ಯವಂತ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಿರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗದ ಮೊರೆ ಹೋಗಬೇಕಾಗಿದೆ, ಯೋಗದಿಂದ ಆರೋಗ್ಯ ಮತ್ತು ಆಯುಷ್ಯ ಪ್ರಮಾಣ ಹೆಚ್ಚಾಗುತ್ತದೆ; ಈ ದಿಸೆಯಲ್ಲಿ ಪ್ರತಿದಿನ ಯೋಗ ಮತ್ತು ಧ್ಯಾನ ಮಾಡುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಹೆಚ್.ಪಿ. ಚಂದನ್, ರೋಟರಿಯನ್ಸ್ ಹೆಚ್.ಪಿ. ಮೋಹನ್, ಹೆಚ್.ವಿ. ಪ್ರದೀಪ್ ಕುಮಾರ್, ದಯಾಶೇಖರ್ ಶಾಲಾ ಇಂಟರ್ ಆ್ಯಕ್ಟ್ ಕ್ಲಬ್ ಅಧ್ಯಕ್ಷೆ ಹಂಸಿಣಿ, ಕಾರ್ಯದರ್ಶಿ ಎಂ. ಮೋಕ್ಷ ಶಾಲಾ ಮುಖ್ಯ ಶಿಕ್ಷಕ ಜಿ.ಎಂ. ಹೇಮಂತ್ ಮುಂತಾದವರು ಹಾಜರಿದ್ದರು.
-ವಿ.ಸಿ. ಸುರೇಶ್ ಒಡೆಯನಪುರ