(ಸುಬ್ರಮಣಿ, ಸಿದ್ದಾಪುರ)

ಸಿದ್ದಾಪುರ, ಆ. 2: ಜಿಲ್ಲೆಯಲ್ಲಿ ಮಳೆ ಹಾಗೂ ಶೀತ ವಾತಾವರಣವಿ ರುವದರಿಂದ ಜ್ವರ, ಶೀತ ಬಾಧಿತ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಪ್ರತಿನಿತ್ಯ ಆಸ್ವತ್ರೆಗಳಲ್ಲಿ ರೋಗಿಗಳು ಹೆಚ್ಚು ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.

ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲೂ ದಿನಂಪ್ರತಿ 300 ಕ್ಕೂ ಅಧಿಕ ಮಂದಿ ಜ್ವರ, ಶೀತ, ತಲೆ ನೋವು, ಮೈ ಕೈ ನೋವು ಬಾಧಿಸಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಆಗಮಿಸುತಿದ್ದು ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಹಲವಷ್ಟು ಮಂದಿ ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈದ್ಯರ ಕೊರತೆ: ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಒಂದೇ ಸರ್ಕಾರಿ ಆಸ್ಪತ್ರೆಯಿದ್ದು. ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ. ಇಲ್ಲಿ ವೈದ್ಯರುಗಳ ಕೊರತೆ ಇದ್ದು ಸಮುದಾಯ ಕೇಂದ್ರದಲ್ಲಿ ಒಬ್ಬರೇ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇರುವ ಒಬ್ಬ ವೈದ್ಯರು ಇಷ್ಟು ರೋಗಿಗಳನ್ನು ಪರೀಕ್ಷೆ ಮಾಡಿ ಔಷಧಿ ನೀಡಲು ಹಲವು ಗಂಟೆಗಳೆ ಬೇಕಾಗುತ್ತದೆ. ಚಿಕಿತ್ಸೆಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವದರಿಂದ ರೋಗ ಬಾಧಿತ ರೋಗಿಗಳ ಪಾಡು ಹೇಳತಿರದಂತಾಗಿದೆ. ರೋಗಿಗಳು ಜಾಸ್ತಿಯಿರುವ ಕಾರಣ ಚುಚ್ಚುಮದ್ದು ಮತ್ತು ಔಷಧಿಯನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವ ದರಿಂದ ಹಲವರಂತು ಸುಸ್ತಾಗಿ ಅಲ್ಲೆ ಕುಸಿದು ಕುಳಿತಿರುವದಂತು ಸರ್ವೇ ಸಾಮಾನ್ಯವಾಗಿದೆ. ಇನ್ನೂ ಹಲವರಂತು ಆಸ್ಪತ್ರೆಗೆ ಆಗಮಿಸದೇ ವೈದ್ಯರ ಮನೆಗೆ ನೇರವಾಗಿ ಚಿಕಿತ್ಸೆಗೆ ತೆರಳುತಿದ್ದು ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವೈದ್ಯರ ಮನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದು ತೆರಳುತಿದ್ದಾರೆ.

ಇರುವ ಒಬ್ಬರೆ ವೈದ್ಯರಾದ ರಾಘವೇಂದ್ರ ಅವರು ಹಗಲು ರಾತ್ರಿ ಎನ್ನದೆ ಪುರುಸೊತ್ತಿಲ್ಲದೆ ತಪಾಸಣೆ ಮಾಡುತಿದ್ದು ರೋಗಿಗಳಲ್ಲದೆ ಅವರು ಮರಣೋತ್ತರ ಪರೀಕ್ಷೆ ಮಾಡಬೇಕು, ಪೊಲೀಸ್ ಇಲಾಖೆಯವರು ಕರೆದುಕೊಂಡು ಬರುವ ಎಲ್ಲಾ ಮೆಡಿಕಲ್ ಟೆಸ್ಟ್‍ಗಳನ್ನು ಮಾಡಬೇಕು, ಬಾಣಂತಿಯರನ್ನು ಪರೀಕ್ಷೆ ಹಾಗೂ ಹೆರಿಗೆ ಮಾಡಿಸಬೇಕು , ಕಾಡಾನೆ ದಾಳಿ ಹಾಗೂ ವಾಹನಗಳ ಅಪಘಾತವಾಗಿ ಬರುವವರಿಗೆ ತುರ್ತು ಚಿಕಿತ್ಸೆ ನೀಡಬೇಕು. ಎಲ್ಲವನ್ನೂ ಇವರೊಬ್ಬರೇ ನಿಭಾಯಿಸಬೇಕಾದ ಅನಿವಾರ್ಯತೆ ಇದ್ದು ಇವರ ಈ ಘನ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಲ್ದಾರೆಯ ಚಿತ್ರ ಕಲಾವಿದ ಬಾವಾ ಮಾಲ್ದಾರೆ ಇರುವ ವೈದ್ಯರಾದ ರಾಘವೇಂದ್ರ ಅವರು 24 ತಾಸುಗಳು ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹರಡುತ್ತಿರುವ ಜ್ವರ: ಸೋಂಕು ಜ್ವರ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿರುವದರಿಂದ ಒಂದು ಕುಟುಂಬದಲ್ಲಿ ಒಬ್ವರಿಗೆ ಬಂದರೆ ಸಣ್ಣ ಮಕ್ಕಳು ಹಿರಿಯರನ್ನು ಬಿಡದೆ ಎಲ್ಲರಿಗೂ ಬಹು ಬೇಗ ಹರಡುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ಮಾತ್ರ ಎಚ್ಚರ ವಹಿಸಿ ಎಂದು ಹೇಳುತ್ತಿರುವದಲ್ಲದೆ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ನೇಮಿಸಲು ಮುಂದಾಗುತಿಲ್ಲ. ಔಷಧಿ ಸರಬರಾಜಿಗೆ ಮುಂದಾಗುತಿಲ್ಲ. ಈ ಹಿಂದೆ ಎಚ್ 1ಎನ್ 1ಗೆ ತುತ್ತಾಗಿ ಒಬ್ಬರು ಮೃತಪಟ್ಟರೂ ಜಿಲ್ಲಾ ಆರೋಗ್ಯ ಇಲಾಖೆ ಮಾತ್ರ ಆರಾಮವಾಗಿ ಚಳಿ ಕಾಯಿಸುತ್ತಾ ಕುಳಿತಂತಿದೆ. ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಬಲಿ ಬೇಕಾಗಬಹುದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಸಿಪಿಐಎಂ ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪನ್ ಈ ಹಿಂದೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದ ಮತ್ತೊಬ್ಬ ವೈದ್ಯರನ್ನು ಕೆಲವರು ತಮ್ಮ ರಾಜಕೀಯ ಉದ್ದೇಶಕ್ಕಾಗಿ ವರ್ಗಾವಣೆ ಮಾಡಿಸಿದ್ದರು. ಈಗ ಇಲ್ಲಿ ಒಬ್ಬರು ವೈದ್ಯರಿರುವ ಕಾರಣ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಕೂಡಲೇ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.