ವೀರಾಜಪೇಟೆ, ಆ. 1: “ಸಾಹಿತ್ಯ ಜೀವನದ ಪ್ರತಿಬಿಂಬ ಹಾಗೂ ಗತಿಬಿಂಬ” ಎಂಬದು ವಿಧ್ವಾಂಸರ ಅಭಿಪ್ರಾಯ. ಸಾಹಿತ್ಯವೇ ಜೀವನ, ಜೀವನವೇ ಸಾಹಿತ್ಯ ಎಂದು ಹೇಳಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಆಸ್ಥಾನ ಕವಿಗಳು, ಪಂಡಿತರು ಇರುತ್ತಿದ್ದರು. ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಕವನಗಳನ್ನು ಕಟ್ಟಿ ಹಾಡುತ್ತಿದ್ದರು. ಅಪ್ಸರೆಯರು ನೃತ್ಯ ಮಾಡುತ್ತಿದ್ದರು. ಆಸ್ಥಾನ ಕವಿಗಳಾದ ರನ್ನ, ಪಂಪ, ಕಾಳಿದಾಸ ಇವರೆಲ್ಲರೂ ಸಾಹಿತ್ಯವನ್ನು ಅರೆದು ಕುಡಿದಿದ್ದರು. ಇಂದಿಗೂ ಅಂತಹ ಕವಿಗಳ ನೆನಪನ್ನು ಮಾಡುತ್ತಾ ನಾವು ಬದುಕುತ್ತಿದ್ದೇವೆ ಎಂದು ಸಾಹಿತಿ ನಾಯಕಂಡ ಬೇಬಿ ಚಿಣ್ಣಪ್ಪ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅರಮೇರಿ ಕಳಂಚೇರಿ ಮಠದ ಸಹಯೋಗದಲ್ಲಿ ಕಳಂಚೇರಿ ಮಠದಲ್ಲಿ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪೂರೈಸಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ನೀಡುತ್ತಾ ಬರುತ್ತಿದೆ. ಇದರಿಂದ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದವರ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಆಂಗ್ಲ ಮಾಧ್ಯಮದ ಶಾಲೆಗಳನ್ನು ಹಿಂದಿಕ್ಕಿ ಸಾಧನೆ ಮಾಡಿವೆ ಎಂದರು.
ಸರ್ಕಾರಿ ಶಾಲೆಗಳು ಸೇರಿದಂತೆ ಎಲ್ಲೆಡೆ ಕನ್ನಡ ಸದೃಢವಾಗಿ ಉಳಿದರೆ ಕನ್ನಡ ಸಂಸ್ಕøತಿಯ ಸಂಪತ್ತು ಮುಂದಿನ ತಲೆಮಾರಿಗೆ ಉಳಿಯುತ್ತದೆ. ಕನ್ನಡ ಭಾಷೆಗೆ ಮಾನ್ಯತೆ ಸಿಕ್ಕರೆ ಮಾತ್ರ ಆ ಭಾಷೆಯಲ್ಲಿ ಸೃಷ್ಠಿಯಾದ ಸಾಹಿತ್ಯಕ್ಕೆ ಮಹತ್ವ ಸಿಗುತ್ತದೆ. 7ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವದು ಅಗತ್ಯ ಎಂದು ಬಹುಪಾಲು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಭಾರತರತ್ನ ಡಾ. ಸಿ.ಎನ್.ಆರ್. ರಾವ್ ಸೇರಿದಂತೆ ಕರ್ನಾಟಕದ ಬಹುಪಾಲು ಹಿರಿಯ ಸಾಧಕರ ಎಸ್.ಎಸ್.ಎಲ್.ಸಿ. ಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವದಕ್ಕೆ ಕಾನೂನಿನ ಹೋರಾಟದಲ್ಲಿ ಹಿನ್ನಡೆ ಯಾಗಿರಬಾರದು. ಆದರೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಸಾಧನೆಗೆ ತೊಂದರೆಯಾಗುತ್ತದೆ ಎಂಬುದು ಯಾವ ಅಧ್ಯಯನದಿಂದಲೂ ಸಾಬೀತಾಗಿಲ್ಲ ಎಂದು ಅಭಿಪ್ರಾ ಯಿಸಿದರು. ಕೊಡಗಿನ ಇತಿಹಾಸದಲ್ಲಿ ಮಹಿಳಾ ಸಾಹಿತ್ಯದಲ್ಲಿ ಮಹತ್ವ ದಿನ. ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಇರುವ ಮಹಿಳೆಯರಿಗೆ ಆತ್ಮ ವಿಶ್ವಾಸ ತುಂಬುವಲ್ಲಿ ಸಹಕಾರಿಯಾಗಿದೆ ಎಂದರು. ಕಾಲಚಕ್ರ ಉರುಳಿದಂತೆ ಮನುಷ್ಯ ನಾಗರಿಕನಾಗತೊಡಗಿದ. ಆಧುನಿಕತೆಗೆ ಒಳಗಾಗಿ ಜಾನಪದ ಹಾಡುಗಳು ಇಂದು ಮೂಲೆ ಗುಂಪಾಗಿವೆ. ಟಿ.ವಿ., ಮೊಬೈಲ್ ಬಂದ ನಂತರ ಬಂಧು ಬಳಗದಲ್ಲಿ ಅನ್ಯೋನ್ಯತೆಯನ್ನು ಕಳೆದು ಕೊಳ್ಳುವಷ್ಟು ಮಟ್ಟಿಗೆ ಮನುಷ್ಯ ಬದಲಾಗಿದ್ದಾನೆ. ಊಟ ಮಾಡುವಾಗಲೂ, ಮಲಗುವಾಗಲೂ ಮೊಬೈಲ್ ಜೊತೆಗಿರಬೇಕು. ಅದು ಇಲ್ಲದೆ ಜೀವನವೇ ಇಲ್ಲ ಎಂಬ ಸ್ಥಿತಿ ಉಂಟಾಗಿದೆ. ಹಿಂದಿನವರು ಚೆನ್ನಾಗಿ ದುಡಿಯುತ್ತಿದ್ದರು, ತಿನ್ನುತ್ತಿದ್ದರು. ಮಧುಮೇಹ, ರಕ್ತದ ಒತ್ತಡದಂತಹ ಕಾಯಿಲೆಗಳ ಪ್ರಮಾಣ ಕಡಿಮೆ ಇತ್ತು ಎಂದು ಮೆಲುಕು ಹಾಕಿದರು.
ಎಷ್ಟೇ ವಿದ್ಯೆ ಕಲಿತರೂ ಮನುಷ್ಯನಿಗೆ ಜ್ಞಾನಾರ್ಜನೆ ಮುಖ್ಯ, ಜ್ಞಾನರ್ಜನೆ ಇಲ್ಲದ ಮನುಷ್ಯ ಏನು ತಾನೇ ಮಾಡಬಲ್ಲ. ವಿದ್ಯೆಯೊಂದಿಗೆ ವಿನಯವು ಮುಖ್ಯ. ಮನುಷ್ಯ ಎಷ್ಟೇ ಕಲಿತರೂ ತನ್ನ ತಾಯಿ ಭಾಷೆಯನ್ನು ಮರೆಯಬಾರದು ಎಂದು ಆಶಿಸಿದರು.