ಗೋಣಿಕೊಪ್ಪಲು, ಆ. 1: ಪೊಲೀಸ್ ಠಾಣೆಗಳು ನ್ಯಾಯ ದೇಗುಲಗಳಾಗಬೇಕು, ನಾಲ್ಕು ಮಂದಿಗೆ ಒಳ್ಳೆಯದನ್ನು ಮಾಡಿದಲ್ಲಿ ಭಗವಂತ ಎಂದಿಗೂ ಕೈ ಬಿಡುವದಿಲ್ಲ ಎಂದು ಎಸ್‍ಪಿ ನಾಗಪ್ಪ ತಮ್ಮ ಕಿರಿಯ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕಿವಿ ಮಾತನ್ನಾಡಿದರು.
ವೀರಾಜಪೇಟೆ ಉಪ ವಿಭಾಗದಲ್ಲಿ ಮೂರು ವರ್ಷಗಳ ಕಾಲ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿ ಇದೀಗ ಎಸ್ಪಿಯಾಗಿ ಪದೋನ್ನತಿ ಪಡೆದು ಹಾಸನದ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ವೀರಾಜಪೇಟೆ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು,ಕೆಲವು ಸಂಘ-ಸಂಸ್ಥೆಗಳು ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ಉತ್ಸಾಹಿ ಯುವಕರು ಠಾಣಾಧಿಕಾರಿಗಳಾಗಿ ನೇಮಕಗೊಂಡಿದ್ದೀರಿ.
ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಗೌರವ ಮೂಡುವಂತೆ ಕೆಲಸ ಮಾಡಿ. ಠಾಣೆಯಲ್ಲಿ ಎಂದಿಗೂ ಭಯದ ವಾತಾವರಣ ನಿರ್ಮಾಣ ಮಾಡದಿರಿ ಎಂದು ಸಲಹೆಯಿತ್ತರು.
ಸಮಾಜವನ್ನು ರಕ್ಷಣೆ ಮಾಡುವವರು ಹಾಗೂ ತಿದ್ದುವವರು, ಜನರ ಮಾನ ಪ್ರಾಣ, ರಕ್ಷಣೆ ಮಾಡುವವರು ಪೊಲೀಸರು ಎಂಬ ಕಾರಣದಿಂದ ಬೇರೆ ಇಲಾಖೆಗಿಂತ ವೇತನವನ್ನು ಹೆಚ್ಚಾಗಿ ನೀಡುತ್ತಿದ್ದಾರೆ. ಪೊಲೀಸರ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ ಎಂದರು.
ಸೋಮವಾರಪೇಟೆ ಡಿವೈಎಸ್ಪಿ ಮುರುಳೀಧರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಡಿವೈಎಸ್ಪಿ ಸುಂದರ್‍ರಾಜ್ ಮಾತನಾಡಿದರು
ಕೆ.ಆರ್. ನಗರ ಸರ್ಕಲ್ ಇನ್ಸ್‍ಪೆಕ್ಟರ್ ಪಿ.ಕೆ. ರಾಜು, ವೀರಾಜಪೇಟೆ ವೃತ್ತ ನೀರಿಕ್ಷಕ ಖ್ಯಾತೆಗೌಡ, ಮಡಿಕೇರಿ ನಗರಸಭೆ ಆಯುಕ್ತ ರಮೇಶ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ವೀರಾಜಪೇಟೆ ಪಟ್ಟಣ ಪಂಚಾಯಿತಿಯ ರಾಫಿ, ರಜನಿಕಾಂತ್, ಬಿ.ಕೆ. ಚಿಣ್ಣಪ್ಪ, ಕುಟ್ಟ ವೃತ್ತ ನಿರೀಕ್ಷಕ, ಪರಶಿವಮೂರ್ತಿ, ಮಡಿಕೇರಿ ವೃತ್ತ ನಿರೀಕ್ಷಕ ಮೇದಪ್ಪ, ಪೊಲೀಸ್ ಸಿಬ್ಬಂದಿ ದೇವರಾಜ್, ಸೇರಿದಂತೆ ಅನೇಕ ಅಧಿಕಾರಿಗಳು ಸಮಾರಂಭದಲ್ಲಿ ಮಾತನಾಡಿದರು. ಪದನ್ನೋತ್ತಿ ಪಡೆದ ಎಸ್ಪಿ ನಾಗಪ್ಪನವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗೋಣಿಕೊಪ್ಪ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್, ಕುಟ್ಟ ವೈದ್ಯಾಧಿಕಾರಿ ಡಾ. ಗೌತಮ್, ಆರ್‍ಎಫ್‍ಒ ವೀರೇಂದ್ರ, ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್, ಗೋಣಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವೀರಾಜಪೇಟೆ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಕಾರ್ಯಕ್ರಮ ನಿರೂಪಿಸಿದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ಶೋಭ ಶ್ರೀನಿವಾಸ್ ಪ್ರಾರ್ಥಿಸಿದರು.