ಮಡಿಕೇರಿ, ಆ.1 :ಕೊಡಗು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ವರಿಷ್ಠರು ತಮಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡಬೇಕೆಂದು ಮನವಿ ಮಾಡಿರುವ ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪಕ್ಷ ನಿಷ್ಠರಲ್ಲದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಧಿಕಾರ ನೀಡದಿದ್ದಲ್ಲಿ ಪಕ್ಷದ ಬಲವರ್ಧನೆ ಕಷ್ಟವೆಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷನಿಷ್ಠರು ಇಂದು ಪ್ರಾಮಾಣಿಕವಾಗಿ ಪಕ್ಷದ ಪರವಾಗಿ ದುಡಿಯುತ್ತಿದ್ದು, ಇಂತಹವರಿಗೆ ಸೂಕ್ತ ಸ್ಥಾನಮಾನ ನೀಡಿ ಬೂತ್ ಮಟ್ಟದಿಂದಲೆ ಪಕ್ಷವನ್ನು ಬಲಪಡಿಸಬೇಕಾಗಿದೆ. ಪಕ್ಷದೊಳಗಿನ ಗೊಂದಲ ನಿವಾರಣೆಯಾಗುವ ಅಗತ್ಯತೆ ಇದ್ದು, ಹಳೆಯ ವಾತಾವರಣವನ್ನು ಇಲ್ಲದಂತೆ ಮಾಡಿ ಹೊಸ ಅಲೆಯನ್ನು ಸೃಷ್ಟಿಸಬೇಕಾಗಿದೆ ಎಂದು ಹೇಳಿದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಸಂಕೇತ್ ಪೂವಯ್ಯ ಅವರು, ಪಕ್ಷ ಸಂಘಟನೆಯಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದರು. ಇದೀಗ ನಾನು ಕೂಡ ಪಕ್ಷವನ್ನು ಬಲಪಡಿಸುವ ಕುರಿತು ಉತ್ಸುಕನಾಗಿದ್ದೇನೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಸಂಪೂರ್ಣ ಅಧಿಕಾರ ನೀಡದಿರುವದರಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷ ತೊರೆಯಲ್ಲ
ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ದೊರೆಯಲು ಕಾರಣಕರ್ತರಾಗಿದ್ದ ಹೆಚ್.ವಿಶ್ವನಾಥ್ ಅವರು ಪಕ್ಷದಿಂದ ಉಚ್ಛಾಟನೆಯಾಗಿದ್ದರು ತಾವು ಜೆಡಿಎಸ್‍ನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಗಣೇಶ್ ಸ್ಪಷ್ಟಪಡಿಸಿದರು. ದಿಢೀರ್ ಆಗಿ ರಾಜ್ಯ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಗೊಳಿಸಿರುವದನ್ನು ಖಂಡಿಸುವದಾಗಿ ತಿಳಿಸಿದರು.
ಶಾಂತಿ ಕಾಪಾಡಿ
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಟಿಪ್ಪು ಜಯಂತಿಯನ್ನು ಆರಂಭಿಸಿದ್ದು, ಇದೀಗ ಬಿಜೆಪಿ ಅದೇ ಉದ್ದೇಶಕ್ಕಾಗಿ ಜಯಂತಿಯನ್ನು ರದ್ದು ಪಡಿಸಿದೆ ಎಂದು ಅಭಿಪ್ರಾಯಪಟ್ಟರು.
ಟಿಪ್ಪು ಜಯಂತಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮವಲ್ಲ. ಆದರೂ ಕೆಲವರು ಅಲ್ಪಸಂಖ್ಯಾತ ಸಮುದಾಯಕ್ಕೆ ಅವಮಾನವಾಗಿದೆ ಎಂದು ಹೇಳಿಕೆಗಳ ಮೂಲಕ ಪ್ರಚೋದನೆ ನೀಡಿ ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರು ಯಾವದೇ ಗೊಂದಲದ ಹೇಳಿಕೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಯೂಸುಫ್, ನಗರ ಯುವ ಜೆಡಿಎಸ್ ಅಧ್ಯಕ್ಷ ರವಿ ಕಿರಣ್, ಮಡಿಕೇರಿ ನಗರ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾಹಿಂ ಹಾಗೂ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮೂರ್ನಾಡು ಜಾಸಿರ್ ಉಪಸ್ಥಿತರಿದ್ದರು.