ಚೇರಂಬಾಣೆ, ಆ. 1: ಚೇರಂಬಾಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನಿಂದ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದ ಕವಿಗೋಷ್ಠಿ ಕಾರ್ಯಕ್ರಮ, ಜಿಲ್ಲೆಯ ಕವಿಗಳ ಭಾವಾನುರಾಗಗಳನ್ನು ಕಲಾಸಕ್ತರಿಗೆ ಉಣಬಡಿಸುವ ವೇದಿಕೆಯಾಗಿತ್ತು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಲೇಖಕಿಯರ ಬಳಗದ ರಾಜ್ಯ ನಿಕಟಪೂರ್ವ ಕಾರ್ಯದರ್ಶಿ ಆಶಾ ಹೆಗಡೆ ಅವರು, ಭಾವನೆಗಳ ತೀವ್ರತೆಯಿಂದ ಬರವಣಿಗೆ ಉದಯವಾಗುತ್ತದೆ. ಕವನ ರಚನೆಯಲ್ಲಿ ಪದಗಳ ಜೋಡಣೆ, ಪ್ರಾಸ, ಪದಪ್ರಯೋಗ ಬೇಕಿದ್ದರೂ, ಭಾವನೆಗಳಿಗೆ ಅಕ್ಷರದ ರೂಪ ನೀಡುವಾಗ ಇವುಗಳು ಮುಖ್ಯವಾಗುವದಿಲ್ಲ. ಅಂತಹ ಸಂದರ್ಭದಲ್ಲೂ ಕವನಗಳು ಹುಟ್ಟುತ್ತವೆ ಎಂದರು.
ಭಾವನೆಗಳೇ ಬದುಕಲ್ಲ; ಆದರೆ ಭಾವನೆಗಳಿಲ್ಲದೇ ಬದುಕಿಲ್ಲ ಎಂದ ಅವರು, ತಮ್ಮ ‘ಗೊರಕೆ ಗುಮ್ಮ’ ಕವನದ ಮೂಲಕ ಗೊರಕೆಯ ವಿವಿಧ ಮಜಲುಗಳ ಬಗ್ಗೆ ಹಾಸ್ಯಮಿಶ್ರಿತ ವಿವರಣೆ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ತಮ್ಮ ಭಾವನೆಗಳಿಗೆ ಅಕ್ಷರದ ರೂಪಕೊಟ್ಟು, ಸಭಿಕರೆದುರು ಬಿಚ್ಚಿಟ್ಟು ಚಪ್ಪಾಳೆ ಗಿಟ್ಟಿಸಿದರು. ಕೆಲವೊಂದು ಕವನಗಳನ್ನು ಹೊರತುಪಡಿಸಿದರೆ ಹಲವಷ್ಟು ಕವನಗಳು ಕೇಳುಗರ ಮನತಟ್ಟುವಲ್ಲಿ ಯಶಸ್ಸು ಕಂಡಿತು.
ಜಿಲ್ಲೆಯ ಹಿರಿಯ ಕವಿಗಳಾದ ಕಸ್ತೂರಿ ಗೋವಿಂದಮ್ಮಯ್ಯ ಅವರು ‘ಬಂದೇ ಬರುವ ಅತಿಥಿ’ ಕವನದಲ್ಲಿ ಬದುಕಿನ ಕೊನೆಯಲ್ಲಿ ಬರುವ ಸಾವು ಯಾರನ್ನೂ ಬಿಡುವದಿಲ್ಲ ಎಂಬ ಸಂದೇಶ ನೀಡಿದರು. ಕಡ್ಲೇರ ಜಯಲಕ್ಷ್ಮೀ ಮೋಹನ್ ಅವರು ಸಂಜೆ-ಮುಸ್ಸಂಜೆ ಕವನದಲ್ಲಿ ಕವಿಯೊಳಗಿನ ಭಾವನೆಗಳನ್ನು ವ್ಯಕ್ತಪಡಿಸಿದರು.
ಶಶಿಕಿರಣ್ ಎಸ್.ಆರ್. ಅವರು ತಮ್ಮ ‘ಕನ್ನಡದ ಆರ್ತನಾದ’ ಕವನದಲ್ಲಿ ಕನ್ನಡ ಶಾಲೆ, ಕನ್ನಡ ಮಾಧ್ಯಮದ ಶಿಕ್ಷಣದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಹೇಮಲತಾ ಪೂರ್ಣ ಪ್ರಕಾಶ್ ಅವರು ‘ಇದು ಸರಿಯೇ’ ಕವನದಲ್ಲಿ ಪ್ರೀತಿಯ ನಿವೇದನೆ ಮಾಡಿದರು. ನಾಪೋಕ್ಲಿನ ಎನ್.ಡಿ. ರಮ್ಯ ಅವರು ತಮ್ಮ ಕವನ ‘ಫ್ಯಾಷನ್’ನಲ್ಲಿ ಬದಲಾದ ಮನುಷ್ಯನ ಜೀವನ ಶೈಲಿಯನ್ನು ಬಿಂಬಿಸಿದರು.
ಭಾಗೀರಥಿ ಹುಲಿತಾಳ ಅವರು ‘ಮಳೆ ಬರುವ ಕಾಲದಲಿ’ ಕವನದಲ್ಲಿ, ಮರಗಿಡ ಕಡಿಯದಿರಿ;ಹೊಸ ಗಿಡಗಳನ್ನು ನೆಟ್ಟುಬಿಡಿ ಎಂದು ಪ್ರಕೃತಿಯ ರಕ್ಷಣೆಯ ಮಹತ್ವವನ್ನು ಸಾರಿದರು. ಮರಗೋಡಿನ ಮುಕ್ಕಾಟಿ ಹರಿಣಿ ಗಿರೀಶ್ ಅವರು ‘ಹೆಣ್ಣು ಬ್ರೂಣದ ಕಣ್ಣೀರಿನ ಪ್ರಶ್ನೆ’ ಕವನದಲ್ಲಿ ಬ್ರೂಣ ಹತ್ಯೆಯ ಬಗ್ಗೆ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
ಮೇಕೇರಿಯ ಎಸ್. ಸೈಮನ್ ಅವರು ‘ಜ್ಞಾನ ದೀವಿಗೆ’ ಕವನದಲ್ಲಿ ಜ್ಞಾನದ ಮಹತ್ವವನ್ನು ಸಾರಿದರು. ಗಂಗಮ್ಮ ಮಾದಪ್ಪ ಅವರು ‘ನಿಸರ್ಗದ ಮುನಿಸು’ ಕವನದಲ್ಲಿ ಪ್ರಾಕೃತಿಕ ವಿಕೋಪದ ರೌದ್ರಾವತಾರವನ್ನು ನೆನಪಿಗೆ ತಂದರು. ಕಡಂಗದ ವತ್ಸಲ ಶ್ರೀಶಾ ‘ನೀನಂದು ಮನೆಮಗಳು ಇಂದಲ್ಲ’ ಕವನದಲ್ಲಿ ಹೆಣ್ಣುಮಕ್ಕಳ ಜೀವನ ಏರಿಳಿತಗಳ ಬಗ್ಗೆ ಬೆಳಕು ಚೆಲ್ಲಿದರು. ಗಾಳಿಬೀಡಿನ ಯಾಲದಾಳು ಕುಮುದ ಜಯಪ್ರಕಾಶ್ ಅವರು ‘ಕರುನಾಡು’ ಕವನದಲ್ಲಿ ಕರ್ನಾಟಕದ ಸಮಗ್ರ ಚಿತ್ರಣವನ್ನು ಕಣ್ಮುಂದೆ ಕಟ್ಟಿಕೊಟ್ಟರು.
ಬಿಜಾಪುರದ ಗಿರಿಜಾ ಅವರು ತಮ್ಮ ‘ಗೊರಟೆ ಮತ್ತು ಅವಳು’ ಕವನದಲ್ಲಿ ಮಹಿಳೆಯ ಮೇಲಿನ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ತಾವೂರಿನ ಶೈಲಜಾ ದಿನೇಶ್ ಅವರು ‘ಬನ್ನಿ ಕನಸುಗಳೇ ಬನ್ನಿ’ ಕವನದಲ್ಲಿ ಜೀವನೋತ್ಸಾಹವನ್ನು ಹೊರಗೆಡವಿದರು. ಮಡಿಕೇರಿಯ ಅಬ್ದುಲ್ಲ ಅವರು ‘ಪ್ರಕೃತಿಯ ಮುನಿಸು-ಮೌನರಾಗ’ ಕವನದಲ್ಲಿ ಭೂಕುಸಿತದ ಸನ್ನಿವೇಶವನ್ನು ಮುಂದಿಟ್ಟರು.
ಅಲ್ಲಾರಂಡ ವಿಠಲ ನಂಜಪ್ಪ ಅವರು ‘ಶೀರ್ಷಿಕೆ ಬೇಕು’ ಕವನದಲ್ಲಿ ಮಾನವ ಅಹಂಕಾರದ ಬದಲು ಮನುಷ್ಯತ್ವವನ್ನು ಪ್ರೀತಿಸಬೇಕೆಂದು ಕರೆ ನೀಡಿದರು. ಶೆಟ್ಟೆಜನ ಗೀತಾ ಬಾಡಗ ‘ಹಚ್ಚಬೇಕಿದೆ ಹಣತೆ’ ಕವನದಲ್ಲಿ ಮನುಷ್ಯರ ನಡುವೆ ಪ್ರೀತಿ ಮಂತ್ರದ ಹಣತೆ ಹಚ್ಚಬೇಕು ಎಂದರು.
ವಿಶೇಷಚೇತನ ಕವಿಗಳಿಂದ ಕವನ ವಾಚನ: ವಿಶೇಷ ಚೇತನ ಕವಿಗಳಾದ ಬಲ್ಯಮೀದೇರಿರ ಸುಬ್ರಮಣಿ ಅವರು ‘ಪ್ರಕೃತಿ’ ಕವನದಲ್ಲಿ ಹವಾಮಾನದ ಏರಿಳಿತ, ಅದರಿಂದಾಗುವ ಕಷ್ಟನಷ್ಟಗಳ ಬಗ್ಗೆ ಮನೋಜ್ಞವಾಗಿ ವಿವರಣೆ ನೀಡಿದರು. ಮೇಕೇರಿಯ ಎಸ್.ಕೆ. ಈಶ್ವರಿ ಅವರು ‘ಸೋನೆ ಮಳೆ’ ಕವನದಲ್ಲಿ ಹನಿಗಳ ಸಿಂಚನದ ಚಿತ್ತಾರವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದರು.
ಕೊಳಗದಾಳುವಿನ ಚಿರಮಂಡ ವಾಣಿ ಚಂಗುವಮ್ಮಯ್ಯ ಅವರು ಕನ್ನಡ ನಾಡು, ನುಡಿಯ ಬಗ್ಗೆ ತಮ್ಮ ಕವನದಲ್ಲಿ ಅಪಾರ ಕಾಳಜಿ ವ್ಯಕ್ತಪಡಿಸಿದರು. ಕನ್ನಡಿಗರೆಲ್ಲರೂ ಕಲ್ಪವೃಕ್ಷದಂತೆ ಬಾಳಬೇಕೆಂದು ಆಶಿಸಿದರು.
ವೇದಿಕೆಯಲ್ಲಿ ನಿವೃತ್ತ ಸಿಡಿಪಿಓ ಅಮೆ ದಮಯಂತಿ, ಬೆಳೆಗಾರ ಅಳಮಂಡ ಡಿ. ಮೋಹನ್ ಅವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಶಾ ಹೆಗ್ಗಡೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಸೇರಿದಂತೆ ಪದಾಧಿಕಾರಿಗಳು ಸನ್ಮಾನಿಸಿದರು.
ಸಮ್ಮೇಳನದಲ್ಲಿ ಕನ್ನಡ ಸಾಧಕರಿಗೆ ಸನ್ಮಾನ
ಮಡಿಕೇರಿ ತಾಲೂಕು ಕಸಾಪದಿಂದ ಚೇರಂಬಾಣೆಯ ಬೇಂಗ್‍ನಾಡ್ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ, ಸಾಹಿತ್ಯ, ನೆಲ, ಜಲ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳನ್ನು ಸನ್ಮಾನಿಸಲಾಯಿತು.
ಕ್ರೀಡಾ ಕ್ಷೇತ್ರದಿಂದ ಚೇರಂಬಾಣೆಯ ಮೇಲಾಟಂಡ ಅರುಣ್ ಉತ್ತಪ್ಪ, ಸಮಾಜ ಸೇವೆಗಾಗಿ ಮಹದೇವಪೇಟೆಯ ಮಹಿಳಾ ಸಹಕಾರ ಸಂಘ, ಮಾಧ್ಯಮ ಕ್ಷೇತ್ರದಿಂದ ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್, ಶಿಕ್ಷಣ ಕ್ಷೇತ್ರದಿಂದ ಚೆಟ್ಟಿಮಾನಿಯ ಕೇಕಡ ಇಂದುಮತಿ, ಸಾಹಿತ್ಯ ಕ್ಷೇತ್ರದಿಂದ ಚೆಂಬು ಗ್ರಾಮದ ಹೊಸೂರು ಸಂಗೀತ ರವಿರಾಜ್, ಉನ್ನತ ಹುದ್ದೆಗಾಗಿ ಮಡಿಕೇರಿಯ ಪಿ.ಎಂ. ಸಚಿನ್ ಅವರುಗಳನ್ನು ಸನ್ಮಾನಿಸಲಾಯಿತು.
ಕೃಷಿ ಕ್ಷೇತ್ರದಿಂದ ಚೇರಂಬಾಣೆಯ ಜಿ.ಈ. ಪಳಂಗಪ್ಪ, ನೃತ್ಯ ಕ್ಷೇತ್ರದಿಂದ ಮೂರ್ನಾಡಿನ ಕಾವ್ಯಶ್ರೀ, ಸಿನಿಮಾ ಕ್ಷೇತ್ರದಿಂದ ಚೇರಂಬಾಣೆಯ ಕೊಟ್ಟುಕತ್ತಿರ ಪ್ರಕಾಶ್, ವೈದ್ಯಕೀಯ ಕ್ಷೇತ್ರದಿಂದ ಡಾ. ಹೆಚ್.ಎಸ್. ಉರಾಳ, ಸಂಗೀತ ಕ್ಷೇತ್ರದಿಂದ ಮಡಿಕೇರಿಯ ಕೋದಂಡ ಗೌರು ಗಣಪತಿ, ರಂಗಭೂಮಿಯಿಂದ ಅರ್ವತ್ತೊಕ್ಲಿನ ತೆನ್ನೀರ ರಮೇಶ್ ಪೊನ್ನಪ್ಪ ಅವರುಗಳನ್ನು ಕಸಾಪದಿಂದ ಅಭಿನಂದಿಸಲಾಯಿತು.
ಹೈನುಗಾರಿಕೆ ಕ್ಷೇತ್ರದಿಂದ ಮಡಿಕೇರಿಯ ಮುರಾದ್, ಯುವ ಪ್ರತಿಭೆ ಮರಗೋಡಿನ ಪಿ.ಆರ್. ಆರ್ಯ, ಯಕ್ಷಗಾನದಲ್ಲಿ ಸಂಪಾಜೆಯ ಬಿ.ಜೆ. ಯಶೋಧರ, ವಿಶೇಷ ಪ್ರತಿಭೆ ಕೊಳಗದಾಳಿನ ಚೀರಮಂಡ ವಾಣಿ ಚಂಗುವಮ್ಮಯ್ಯ, ವೈಜ್ಞಾನಿಕ ಕ್ಷೇತ್ರದಿಂದ ಚೇರಂಬಾಣೆಯ ಸಿ.ಆರ್. ಲೋಕೇಶ್, ಕಲೆ ಕ್ಷೇತ್ರದಿಂದ ಹೆಚ್. ಗೋಪಾಲ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಶಕ್ತಿ ಪತ್ರಿಕೆ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್, ಕರ್ನಾಟಕ ಅರಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ತಲಕಾವೇರಿ-ಭಾಗಮಂಡಲ ದೇವಾಲಯ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುಕ್ಕಾಟಿ ಎನ್. ಮಾದಪ್ಪ, ಗ್ರಾ.ಪಂ. ಅಧ್ಯಕ್ಷ ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಸಾಧಕರನ್ನು ಸನ್ಮಾನಿಸಿದರು.
ಭಾವಲೋಕಕ್ಕೆ ಕರೆದೊಯ್ದ ಗೀತಗಾಯನ
ಚೇರಂಬಾಣೆಯಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದ ಗೀತಗಾಯನ ಕಾರ್ಯಕ್ರಮ, ಸಂಗೀತಪ್ರಿಯ ಕೇಳುಗರನ್ನು ಭಾವಲೋಕಕ್ಕೆ ಕರೆದೊಯ್ಯುವಲ್ಲಿ ಸಫಲವಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಕಡ್ಲೇರ ತುಳಸಿ ಮೋಹನ್ ಅವರ ಉಪಸ್ಥಿತಿಯಲ್ಲಿ ನಡೆದ ಗೀತಗಾಯನದಲ್ಲಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಕಡ್ಲೇರ ಎಂ. ರುಷಿಕ, ಗಿರಿಜಾ ಚಾಣಪರೆ, ಶ್ರೀರಕ್ಷಾ, ತಬ್‍ಸೀರ, ಮಮತ, ಕೇಕಡ ಇಂದುಮತಿ ರವೀಂದ್ರ, ಕಡಿಯತ್ತೂರು ಶೈಲಾ, ಐವತ್ತೊಕ್ಲು ಇಂದಿರಾ ಅವರುಗಳು ತಮ್ಮ ಸುಮಧುರ ಕಂಠದಿಂದ ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿ, ಕೇಳುಗರ ಕಿವಿ, ಮನಸ್ಸನ್ನು ತಂಪಾಗಿಸಿದರು.
ಹತ್ತನೇ ಸಾಹಿತ್ಯ ಸಮ್ಮೇಳನದಲ್ಲಿ 10 ನಿರ್ಣಯಗಳ ಅಂಗೀಕಾರ
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನಿಂದ ತಾಲೂಕಿನ ಚೇರಂಬಾಣೆಯ ಕೊಡವ ಸಮಾಜದ ಪಂಜೆ ಮಂಗೇಶರಾಯ ಪ್ರಧಾನ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ 10 ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ, ಕಸಾಪ ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ ಅವರು ನಿರ್ಣಯಗಳನ್ನು ಮಂಡಿಸಿದರು. ಸರ್ಕಾರದ ವ್ಯವಹಾರಗಳು ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿಯೇ ನಡೆಯಬೇಕೆಂಬ ಆದೇಶವಿದ್ದರೂ ಇನ್ನೂ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ಕನ್ನಡದಲ್ಲಿಯೇ ಎಲ್ಲಾ ವ್ಯವಹಾರಗಳು ನಡೆಯುವಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಕಾವೇರಿ ನದಿ ಸ್ವಚ್ಛತೆಗೆ ಕಾನೂನು ಕಾಯಿದೆ ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶವಿದ್ದು, ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಪೂರಕವಾದ ಕ್ರಮಗಳನ್ನು ಸರ್ಕಾರ ರೂಪಿಸಬೇಕು. ಕೊಡಗು-ಕೇರಳದ ಗಡಿ ಭಾಗವಾಗಿರುವ ಕರಿಕೆ ಮತ್ತು ಮಾಕುಟ್ಟದಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿದ್ದು, ಈ ಭಾಗದಲ್ಲಿ ಕನ್ನಡ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂಬ ನಿರ್ಣಯ ಅಂಗೀಕರಿಸಲಾಯಿತು.
ಕೊಡಗಿನಾದ್ಯಂತ ಎಲ್ಲಾ ಕಚೇರಿ, ಅಂಗಡಿ, ರಸ್ತೆ, ಬೀದಿಗಳಿಗೆ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಕ್ರಮ ವಹಿಸಬೇಕು. ಕೊಡಗಿನಲ್ಲಿ ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿಸಿ, ಆದಾಯಕ್ಕೆ ದಾರಿ ಮಾಡಿಕೊಡುವ ಮೂಲಕ ಹಳ್ಳಿಯಿಂದ ಪಟ್ಟಣಕ್ಕೆ ಆಗುವ ಫಲಾಯನ ತಡೆಗಟ್ಟಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಯಿತು.
ಕೊಡಗಿನಲ್ಲಿ ಹೆಚ್ಚುತ್ತಿರುವ ವನ್ಯ ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ಸರ್ಕಾರ ಪರಿಹಾರ ಕ್ರಮಗಳನ್ನು ರೂಪಿಸಬೇಕು. ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲಾ ರಸ್ತೆಗಳನ್ನೂ ಅಭಿವೃದ್ಧಿಪಡಿಸಬೇಕು. ಹುತಾತ್ಮ ಯೋಧ ಕುಟ್ಟನ ರವೀಂದ್ರ ಅವರ ಕಲ್ಲಿನ ಅಥವಾ ಲೋಹದ ಪುತ್ಥಳಿಯನ್ನು ಚೇರಂಬಾಣೆಯಲ್ಲಿ ಸ್ಥಾಪಿಸಬೇಕು. ಕಳೆದ ವರ್ಷದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಸಮರ್ಪಕವಾಗಿ ಸರ್ಕಾರ ಪರಿಹಾರ ಒದಗಿಸಬೇಕು ಎಂಬ 10 ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.
ಕೃಷಿ ಕ್ಷೇತ್ರದ ಮೇಲೆ ಬೆಳಕು ಚೆಲ್ಲಿದ ಸಮ್ಮೇಳನದ ವಿಚಾರಗೋಷ್ಠಿ
ಮಡಿಕೇರಿ ತಾಲೂಕು ಕಸಾಪದಿಂದ ಚೇರಂಬಾಣೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೊಷ್ಠಿ ಕಾರ್ಯಕ್ರಮ, ಕೊಡಗಿನ ಕೃಷಿ, ಕಳೆದ ವರ್ಷದ ಪ್ರಾಕೃತಿಕ ವಿಪತ್ತಿನಿಂದ ಉಂಟಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತು.
ಚೇರಂಬಾಣೆಯ ಬೆಳೆಗಾರ ಮಧು ಬೋಪಣ್ಣ ಅವರು ‘ಕೃಷಿ ತೋಟಗಾರಿಕೆಯಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳು’ ವಿಷಯದ ಬಗ್ಗೆ ವಿಚಾರ ಮಂಡಿಸಿ, ಸಾಹಿತ್ಯ ಮತ್ತು ಕೃಷಿಗೆ ಅವಿನಾಭಾವ ಸಂಬಂಧವಿದೆ. ರೈತರು ಮತ್ತು ಬೆಳೆಗಾರರ ಸಮಸ್ಯೆ ಬೆಟ್ಟದಷ್ಟಿದೆ. ಹವಾಮಾನ ವೈಪರೀತ್ಯದಿಂದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಪ್ರಸಕ್ತ ವರ್ಷ ಮುಂಗಾರಿನ ವಿಳಂಬದಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಿಸಿದರು.
ರೈತರ ಕೃಷಿಗೆ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಯಾಂತ್ರೀಕೃತ ಕೃಷಿಗೆ ಸರ್ಕಾರದಿಂದ ಏಕರೆಗೆ 4 ಸಾವಿರದಷ್ಟು ಮಾತ್ರ ಪ್ರೋತ್ಸಾಹವಿದೆ. ಆದರೆ ಸಾಂಪ್ರದಾಯಿಕ ಕೃಷಿಗೆ ಯಾವದೇ ಪ್ರೋತ್ಸಾಹವಿಲ್ಲ. ಜಮ್ಮಾ ಭೂಮಿ ಸಮಸ್ಯೆಯಿಂದ ಸರ್ಕಾರದ ಯಾವದೇ ಸವಲತ್ತುಗಳು ರೈತರಿಗೆ ಸಿಗುತ್ತಿಲ್ಲ. ಯಂತ್ರೋಪಕರಣಗಳ ಬಾಡಿಗೆ ಹೆಚ್ಚಿದೆ. ಸಾಂಪ್ರದಾಯಿಕ ಕೃಷಿಯಲ್ಲಿ ಕೂಲಿ ಹೆಚ್ಚಿದೆ. ರಸಗೊಬ್ಬರದ ಬೆಲೆ ಅಧಿಕವಾಗಿದೆ. ಭತ್ತದ ಕೃಷಿಕರು ಹಲವಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಭತ್ತದ ಕೃಷಿ ಕೈಗೊಳ್ಳುವದೇ ಸವಾಲಾಗಿದೆ ಎಂದು ವಿವರಿಸಿದರು.
ಕಳೆದ ವರ್ಷದ ಪ್ರಾಕೃತಿಕ ವಿಕೋಪದಿಂದ ಕೃಷಿ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಫಸಲಿನ ಇಳುವರಿಯಲ್ಲಿ ಇಳಿಕೆಯಾಗಿದೆ. ಕಾಫಿ ಬೆಳೆಗಾರರು ಶ್ರೀಮಂತರೆಂಬ ಕಲ್ಪನೆ ಸಮಾಜದಲ್ಲಿದೆ. ವಾಸ್ತವತೆ ಭಿನ್ನವಾಗಿದೆ ಎಂದರು.
‘ವಿಪತ್ತು ನಿರ್ವಹಣೆ-ಸುರಕ್ಷತೆಯ ಸಂಸ್ಕøತಿ’ ವಿಷಯದ ಬಗ್ಗೆ ವಿಷಯ ಮಂಡಿಸಿದ ಪ್ರಭಾತ್ ಕಲ್ಕುರ ಅವರು, ಕೊಡಗು ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸಂದರ್ಭ ಹೊರಭಾಗದ ಸ್ಪಂದನ ಅಷ್ಟಾಗಿರಲಿಲ್ಲ. ಕೊಡಗಿನ ಮಣ್ಣಿನ ಗುಣದಲ್ಲಿ ಬಂದ ಸ್ವಾಭಿಮಾನದಿಂದಾಗಿ ಹಲವಷ್ಟು ಸಂತ್ರಸ್ತರು ಸ್ವಯಂ ರಕ್ಷಣೆ ಮಾಡಿಕೊಂಡಿದ್ದರು. ನಮ್ಮ ಸಂಸ್ಕøತಿಯೊಂದಿಗೆ ಸುರಕ್ಷತೆಯ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಎಂತಹ ಸಮಸ್ಯೆಯನ್ನಾದರೂ ಎದುರಿಸಲು ಸುರಕ್ಷತೆಯ ಸಂಸ್ಕøತಿಯ ಅಳವಡಿಕೆ ಅತ್ಯಗತ್ಯ. ಇದರಿಂದಾಗಿ ಮನುಷ್ಯರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಕೊಡಗಿನಲ್ಲಿಯೂ ಇಂತಹ ಸಂಸ್ಕøತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕ ಅಯ್ಯಂಡ ರಾಮಕೃಷ್ಣ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಇದಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು ಎಂದರು. ಪರಿಹಾರಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿಗೆ ರೈತರು ಬಂದಿರುವದು ದುರಂತ ಎಂದು ವಿಷಾದಿಸಿದರು.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಉಪನ್ಯಾಸಕ ಡಾ. ಮಾಧವರಾವ್ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೃಷಿ ಪದ್ದತಿಯ ಆಹಾರಗಳು ಮರೆಯಾಗುತ್ತಿದ್ದು, ವಿಷಯುಕ್ತ ಆಹಾರ ಸೇವನೆ ಅಧಿಕಗೊಳ್ಳುತ್ತಿದೆ. ಇದರಿಂದಾಗಿ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಅರುಣ ಪ.ಪೂ. ಕಾಲೇಜಿನ ಅಧ್ಯಕ್ಷ ಸುಬ್ಬಯ್ಯ, ಕಸಾಪ ನಿರ್ದೇಶಕ ಕೋಡಿ ಚಂದ್ರಶೇಖರ್ ಉಪಸ್ಥಿತರಿದ್ದರು. ಮೂರ್ನಾಡು ಕಸಾಪ ಕಾರ್ಯದರ್ಶಿ ಪಿ. ರವಿಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು.