ನಾಪೆÇೀಕ್ಲು, ಆ. 2: ಕುಡಿಯುವ ನೀರು ಪೂರೈಕೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಮುಖ್ಯ ರಸ್ತೆಯಲ್ಲಿನ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವದು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮಸ್ಥರು ಪಟ್ಟು ಹಿಡಿದು ಒತ್ತಾಯಿಸಿದ ಘಟನೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ನಡೆಯಿತು.

ಬಲ್ಲಮಾವಟಿ ಪಿಂಚಣಿದಾರರ ಸಂಘದ ಕಟ್ಟಡದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿವಿಧ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮಳೆಯ ಕೊರತೆಯಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ. ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಪೇರೂರು ಗ್ರಾಮಕ್ಕೆ ತೆರಳುವ ರಸ್ತೆಯು ಹದಗೆಟ್ಟಿದ್ದು ಕೂಡಲೇ ದುರಸ್ತಿಪಡಿಸಬೇಕು ಬಲ್ಲಮಾವಟಿ ಗ್ರಾಮದ ಮುಖ್ಯ ರಸ್ತೆಯಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದಿದ್ದರೆ ಅಪಘಾತಗಳು ಹೆಚ್ಚುವ ಸಾಧ್ಯತೆ ಇದೆ ಎಂದು ಸಭೆಯ ಗಮನ ಸೆಳೆದರು. ಪೇರೂರು ಗ್ರಾಮದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಲು ಗ್ರಾಮ ಪಂಚಾಯಿತಿ ಉದ್ದೇಶಿಸಿದ್ದು ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ ಸಾರ್ವಜನಿಕರು ಆಧಾರ್ ಕಾರ್ಡ್, ರೇಷನ್‍ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಪಡೆದುಕೊಳ್ಳ ಬೇಕಾದರೆ ವಿವಿಧ ದಾಖಲೆಗಳನ್ನು ಅಗತ್ಯವಾಗಿ ಸಲ್ಲಿಸಬೇಕು.

ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಸೇರಿದಂತೆ ವಿವಿಧ ಇಲಾಖೆಗಳಿಂದ ಗ್ರಾಮೀಣ ರೈತರಿಗೆ ಸಾಕಷ್ಟು ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ರೈತರು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಗ್ರಾಮಸಭೆಯಲ್ಲಿ ಕೃಷಿ ಆರೋಗ್ಯ ಶಿಕ್ಷಣ ಸೆಸ್ಕ್ ಕಂದಾಯ ಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರಿಗೆ ದೊರೆಯಬಹುದಾದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದೇವಕ್ಕಿ ಅಭಿವೃದ್ಧಿ ಅಧಿಕಾರಿ ಜಿ.ಆರ್. ಶ್ರೀಧರ್, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.