ಗೋಣಿಕೊಪ್ಪ ವರದಿ, ಆ. 2 : ಕೊಡಗಿನ ಬೌಗೋಳಿಕ ಹಿನ್ನೆಲೆ ಇರುವ ಹಿರಿಯರು ಸಂರಕ್ಷಿಸಿಕೊಂಡು ಬಂದಿರುವ ಕಡಂಗ್ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಬಾರದು ಎಂದು ನಿಟ್ಟೂರು-ಜಾಗಲೆ ಗ್ರಾಮಸ್ಥರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದ ಘಟನೆ ನಡೆಯಿತು.

ನಿಟ್ಟೂರು- ಜಾಗಲೆ ಗ್ರಾಮದಲ್ಲಿ ರುವ ಪೈಸಾರಿ ಕೆರೆಗೆ ತೆರಳುವ ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ ಸ್ಥಳೀಯರಾದ ವಿನೇಶ್ ಎಂಬವರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ, ಗುರುವಾರ ಸ್ಥಳ ಪರಿಶೀಲನೆಗೆ ತೆರಳಿದ್ದ ತಹಶೀಲ್ದಾರ್ ಅವರನ್ನು ಗ್ರಾಮಸ್ಥರು ಹಾಗೂ ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಒತ್ತಾಯಿಸಿದರು.

ನೂರಾರು ವರ್ಷಗಳ ಹಿಂದಿನಿಂದಲೇ ನಿಟ್ಟೂರು ಪೈಸಾರಿ ಕೆರೆಗೆ ಸಾರ್ವಜನಿಕ ರಸ್ತೆ ಇದ್ದರೂ ಕೂಡ ಕಡಂಗ್ ಮೂಲಕ ಪ್ರತ್ಯೇಕ ರಸ್ತೆ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿರುವ ಏಕೈಕ ಗ್ರಾಮಸ್ಥನ ಮನವಿಗೆ ಕಂದಾಯ ಇಲಾಖೆ ಸ್ಪಂದಿಸಬಾರದು ಎಂದು ನಿಟ್ಟೂರು-ಜಾಗಲೆ ಗ್ರಾಮಸ್ಥರು ತಹಶೀಲ್ದಾರ್ ಪುರಂದರ ಅವರ ಗಮನ ಸೆಳೆದರು. ಗ್ರಾಮದ ಪ್ರತಿಯೊಬ್ಬರೂ ಇರುವ ರಸ್ತೆಗೆ ಬದ್ಧರಾಗಿದ್ದೇವೆ. ಪ್ರತ್ಯೇಕ ರಸ್ತೆ ಬೇಡ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈಗಾಗಲೇ ಸುಮಾರು 1.5 ಕಿ. ಮೀ. ವಿಸ್ತೀರ್ಣದ ರಸ್ತೆಯಿಂದ ಸ್ಥಳೀಯರಿಗೆ ಅನುಕೂಲವಾಗಿದೆ. ಮತ್ತೆ ಇಷ್ಟೆ ಅಂತರದ ರಸ್ತೆ ನಿರ್ಮಿಸುವದು ಬೇಡ ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ವ್ಯಕ್ತವಾಯಿತು.

ನೂರಾರು ವರ್ಷಗಳಿಂದ ಈ ಕೆರೆಗೆ ತೆರಳಲು ಹಾಗೂ ಒಂದಷ್ಟು ಕುಟುಂಬಸ್ಥರುಗಳು ಇದೇ ರಸ್ತೆಯನ್ನು ಬಳಕೆ ಮಾಡುತ್ತಿದ್ದಾರೆ. ರಸ್ತೆಯ ಸಮೀಪವಿರುವವರು ಯಾರೂ ಈ ರಸ್ತೆಗೆ ವಿರೋಧ ಮಾಡುತ್ತಿಲ್ಲ. ಆದರೆ, ಇವರು ವಿರೋಧ ಮಾಡುವ ಮೂಲಕ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಅನುದಾನ ದಿಂದ ಡಾಂಬರೀಕರಣಕ್ಕೆ ಮುಂದಾಗಿದೆ. ಇದಕ್ಕೆ ತಡೆ ಮಾಡುತ್ತಿದ್ದಾರೆ. ಈ ಮಾರ್ಗವನ್ನು ಮುಚ್ಚಿ ಕೊಡಗಿನ ಬೌಗೋಳಿಕ ಹಿನ್ನೆಲೆ ಇರುವ ಕಡಂಗ್ ಮೂಲಕ ನೂತನವಾಗಿ ರಸ್ತೆ ನಿರ್ಮಿಸಬೇಕು ಎಂದು ಒತ್ತಡ ಮಾಡುತ್ತಿರುವದರಿಂದ ತೊಂದರೆಯಾಗಿದೆ. ಹಿಂದೆ ಮಹಾರಾಜರು ಅರಮನೆಗಳಿಗೆ ತೆರಳಲು ಕಾಲುದಾರಿಯಾಗಿ ಗ್ರಾಮದಲ್ಲಿ ಕಡಂಗ್‍ನ್ನು ನಿರ್ಮಿಸಿ ದ್ದರು. ಚರಂಡಿ ರೂಪದಲ್ಲಿರುವ ಇಂತಹ ಕಡಂಗ್‍ನಿಂದ ನೀರು ಹಿಂಗುವಿಕೆÉ, ಬೌಗೋಳಿಕ ಗಡಿ ಗುರುತು ಕೂಡ ಇದೆ. ಇದನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಮನವರಿಕೆ ಮಾಡಿದರು.

ಕಡಂಗ್ ಮೂಲಕ ನೂತನವಾಗಿ ರಸ್ತೆ ನಿರ್ಮಿಸಿಬೇಕಾದರೆ ಸುಮಾರು 2 ಸಾವಿರಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಬೇಕಾಗಿದೆ. ಮತ್ತೆ ಈಗ ಬಳಕೆ ಮಾಡುತ್ತಿರುವ ರಸ್ತೆ ಕೂಡ ವ್ಯರ್ಥವಾಗಲಿದೆ. ಯಾವ ಕಾರಣಕ್ಕೂ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಬಾರದು ಎಂದು ಸ್ಥಳೀಯರು ತಹಶೀಲ್ದಾರ್ ಪುರಂದರ ಅವರನ್ನು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕೊಡಗಿನಲ್ಲಿ ಕಡಂಗ್ ಮೂಲಕ ರಸ್ತೆ ನಿರ್ಮಿಸುವ ದಿಲ್ಲ. ಅದಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ. ತಹಶೀಲ್ದಾರ್ ಅವರು ವಿಚಾರ ವನ್ನು ಗಂಭೀರವಾಗಿ ಪರಿಗಣಿಸಿ ನಿರ್ಧಾರ ತಿಳಿಸಬೇಕು. ಇದು ಕೊಡಗಿನ ಬೌಗೋಳಿಕ ಹಿನ್ನೆಲೆಗೆ ದಕ್ಕೆ ತರುವಂತಾಗಬಾರದು ಎಂದರು.

ತಹಶೀಲ್ದಾರ್ ಪುರಂದರ ಈಗ ಬಳಕೆ ಮಾಡುತ್ತಿರುವ ರಸ್ತೆ ಹಾಗೂ ಕಡಂಗ್‍ನಲ್ಲಿ ಕಾಲ್ನಡಿಗೆಯಲ್ಲಿ ಪರಿಶೀಲನೆ ನಡೆಸಿ ಮಾತನಾಡಿ, ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುವದು. ಎಲ್ಲಾ ಆಯಾಮಗಳಲ್ಲೂ ದಾಖಲೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ಗ್ರಾಮದ ನೂರಾರು ಬೆಳೆಗಾರರು ಪಾಲ್ಗೊಂಡು ಹಳೆಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಕಡಂಗ್ ಮೂಲಕ ರಸ್ತೆ ನಿರ್ಮಿಸಬೇಕು ಎಂದು ವಿನೇಶ್ ಒತ್ತಾಯಿಸಿದರು.

ಈ ಸಂದರ್ಭ ರೈತ ಸಂಘ ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಶುಭಾಶ್, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಡ್ಯಮಾಡ ಅನಿತಾ, ಉಪಾಧ್ಯಕ್ಷ ಪೋರಂಗಡ ಪವನ್ ಚಿಟ್ಯಪ್ಪ, ಗ್ರಾಮಸ್ಥರಾದ ಮಲ್ಚೀರ ಕಾರ್ಯಪ್ಪ, ಮಲ್ಚೀರ ನಾಣಯ್ಯ, ಅಳಮೇಂಗಡ ಬೋಸ್ ಪಾಲ್ಗೊಂಡಿದ್ದರು.

-ಸುದ್ದಿಪುತ್ರ