ವೀರಾಜಪೇಟೆ, ಆ. 2: ಪಟ್ಟಣ ಪಂಚಾಯಿತಿಗೆ ಸೇರಿದ ರಸ್ತೆ ಅಗಲೀಕರಣ ಮಾಡಲು ಪಟ್ಟಣದ ಮುಖ್ಯ ಬೀದಿಯಲ್ಲಿ ಸರ್ವೆ ಕಾರ್ಯ ನಡೆಸುತ್ತಿರುವದನ್ನು ವಿರೋಧಿಸಿ ನಗರ ಚೇಂಬರ್ ಆಫ್ ಕಾಮರ್ಸ್ ಹಾಗೂ ರಾಜ್ಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಉಪ ವಿಭಾಗಾಧಿಕಾರಿ ಜವರೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ವರ್ತಕರು, ಅಲ್ಲಿನ ನಿವಾಸಿಗಳಿಗೆ ಯಾವದೇ ಪೂರ್ವ ಮಾಹಿತಿ ನೀಡದೆ ಪಟ್ಟಣದ ಮುಖ್ಯ ರಸ್ತೆಯ ಮಧ್ಯಭಾಗದಿಂದ ಎರಡು ಕಡೆಗಳಲ್ಲಿ 50 ಅಡಿಗಳಷ್ಟು ಅಗಲೀಕರಣಕ್ಕೆ ಅಳತೆ ಮಾಡುತ್ತಿದ್ದಾರೆ. ಇದರಿಂದ ಪಟ್ಟಣದ ವರ್ತಕರು ನಿವಾಸಿಗಳು ಆತಂಕಕ್ಕೀಡಾ ಗಿದ್ದಾರೆ ಎಂದು ತಾಲೂಕು ಕಚೇರಿ ಯಲ್ಲಿ ಉಪಸ್ಥಿತರಿದ್ದ ಉಪ ವಿಭಾಗಾಧಿಕಾರಿ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಪಟ್ಟಣ ಪಂಚಾಯಿತಿ ನಡೆಸುತ್ತಿರುವ ಸರ್ವೇ ಕಾರ್ಯದ ಬಗ್ಗೆ ಉಪವಿಭಾಗಧಿಕಾರಿ ಹಾಗೂ ತಹಶೀಲ್ದಾರ್ ಪುರಂದರ ಅವರಿಗೆ ಮಾಹಿತಿ ಇರಲಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರು ದೂರವಾಣಿ ಮೂಲಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಬಂದಿದ್ದು ಪಟ್ಟಣ ಪಂಚಾಯಿತಿಯ ಮುಖ್ಯ ರಸ್ತೆಯನ್ನು ಅಗಲೀಕರಣಕ್ಕಾಗಿ ಸರ್ವೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ವರದಿ ನೀಡಲು ಸರ್ಕಾರದಿಂದ ಆದೇಶ ಬಂದಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯ (ಮೊದಲ ಪುಟದಿಂದ) ಮಾಹಿತಿಗೆ ಆಕ್ಷೇಪ ವ್ಯಕ್ತ ಪಡಿಸಿದ ಚೇಂಬರ್ ಪದಾಧಿಕಾರಿಗಳು ಹಿಂದಿನ ದಾಖಲೆಗಳನ್ನು ಪರಿಶೀಲಿಸಿ ಕಾನೂನು ರೀತಿಯಲ್ಲಿ ಪರಿಹಾರದ ಪಾವತಿಯೊಂದಿಗೆ ರಸ್ತೆ ಅಗಲೀಕರಣ ಮಾಡಲು ಅಭ್ಯಂತರವಿಲ್ಲ. ವರ್ತಕರಿಗೆ ಸರಿಯಾದ ಮಾಹಿತಿ ನೀಡಿ ಸಮಂಜಸ ಎಂದಾದಲ್ಲಿ ನಾವು ಸಹಕಾರ ನೀಡುವದಾಗಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಇದೇ ಸಂದರ್ಭ ಉಪವಿಭಾಗಾಧಿಕಾರಿ ಜವರೇಗೌಡ ಮಾತನಾಡಿ ಮಂಗಳೂರು ಉಪವಿಭಾಗದಿಂದ ರಸ್ತೆ ಅಗಲೀಕರಣದ ಬಗ್ಗೆ ಸಾಧಕ ಬಾಧಕಗಳನ್ನು ಸಾರ್ವಜನಿಕರಿಂದ ತಿಳಿದುಕೊಳ್ಳಲು ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಸರ್ಕಾರಿ ಜಾಗದಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡಿದ್ದರೆ ಅಂತಹವರಿಗೆ ಯಾವದೇ ಪರಿಹಾರ ಸಿಗುವದಿಲ್ಲ. ಸ್ವಂತ ಜಾಗವಾಗಿ ಸೂಕ್ತ ಎಲ್ಲ ದಾಖಲಾತಿಗಳನ್ನು ಹೊಂದಿದ್ದರೆ ಅಂತಹ ಜಾಗಕ್ಕೆ ಸರ್ಕಾರದ ಸಮ್ಮತಿ ಮೇರೆ ಪರಿಹಾರ ನೀಡಲಾಗುವದು. ರಸ್ತೆ ಅಗಲೀಕರಣದ ಮೊದಲೇ ಸಂಬಂಧಿಸಿದ ಜಾಗದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಿದೆ. ಯಾವದೇ ಕಾರಣಕ್ಕೂ ಸರಕಾರ ಏಕಾಏಕಿ ನಿರ್ಧಾರ ತೆಗದುಕೊಳ್ಳುವದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕರ್ನಂಡ ರಘು ಸೋಮಯ್ಯ, ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ, ಕಾರ್ಯದರ್ಶಿ ಅಮ್ಮಣಿಚಂಡ ರವಿ ಉತ್ತಪ್ಪ, ಕೋಲತಂಡ ಬೋಪಯ್ಯ, ಪದಾಧಿಕಾರಿಗಳಾದ ಡಾ ದುರ್ಗಾಪ್ರಸಾದ್, ಮ್ಯೆನುದ್ದಿನ್, ಮಹಮದ್ ಶೋಯಬ್, ದಿಲ್‍ದಾರ್, ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಚ್. ಮತೀನ್, ಎಂ.ಎಸ್ ಪೂವಯ್ಯ, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಮತ್ತಿತರರು ಉಪಸ್ಥಿತರಿದ್ದರು.