ಸೋಮವಾರಪೇಟೆ, ಆ.2: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಣ್ಣೀರುಹಳ್ಳ ಗ್ರಾಮದಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕ ಕುಟುಂಬಗಳ ಗೋಳು ಹೇಳತೀರ ದ್ದಾಗಿದ್ದು, ಹತ್ತಾರು ಕುಟುಂಬಗಳು ಅಪಾಯಕಾರಿ ಸ್ಥಿತಿಯಲ್ಲಿ ದಿನದೂಡುತ್ತಿವೆ.ಇದೀಗ ಮಳೆಗಾಲ ಆರಂಭ ವಾಗಿದ್ದು, ಮನೆಗಳು ಯಾವಾಗ ಕೆಳ ಬೀಳುತ್ತವೆಯೋ ಎಂಬ ಆತಂಕದಲ್ಲೇ ಈ ಕುಟುಂಬಗಳು ಕ್ಷಣಗಣನೆ ಮಾಡು ತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ? ಎಂಬ ಸಂಶಯ ಮೂಡುತ್ತಿದೆ.ತಣ್ಣೀರುಹಳ್ಳ ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕ ಕುಟುಂಬಗಳೇ ನೆಲೆಸಿದ್ದು, ಗುಡ್ಡ ಪ್ರದೇಶದಲ್ಲಿ ಒಂದಿಷ್ಟು ಜಾಗವನ್ನು ಸಮತಟ್ಟುಗೊಳಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಹೊರ ಭಾಗದಿಂದ ನೋಡಿದರೆ ಒಂದು ಮನೆಯ ಮೇಲೆ ಮತ್ತೊಂದು ಮನೆ ನಿರ್ಮಿಸಿರುವಂತೆ ಗೋಚರಿಸುವ ತಣ್ಣೀರುಹಳ್ಳದಲ್ಲಿ, ತಡೆಗೋಡೆಗಳೇ ಪ್ರಮುಖ ಬೇಡಿಕೆಯಾಗಿದೆ.

ಈ ಗ್ರಾಮದ ಹತ್ತಾರು ಮನೆಗಳಿಗೆ ತಡೆಗೋಡೆಯ ಅವಶ್ಯಕತೆಯಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ ಇಲ್ಲಿನ ಮಂದಿಗೆ ಜೀವದಾನ ನೀಡಲು ಆಡಳಿತ ವರ್ಗ ಮುಂದಾಗಬೇಕಿದೆ. ಗ್ರಾಮದ ಜುಬೈದ ಅವರ ಮನೆಯ ತಳಪಾಯದ ಒಂದು ಬದಿ ಈಗಾಗಲೇ ಕುಸಿದಿದ್ದು, ಮಳೆ ಹೆಚ್ಚಾಗಿ ಪೂರ್ತಿ ಮನೆ ಉರುಳುವ ಆತಂಕವೂ ಎದುರಾಗಿದೆ.

ಅಪಾಯಕಾರಿ ಸ್ಥಿತಿಯಲ್ಲಿರುವ ಜುಬೈದ ಅವರ ಮನೆ ಕೆಳಗುರುಳಿದರೆ, ಕೆಳಭಾಗದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಭಾನು ಅವರ ಮನೆಯೊಂದಿಗೆ ಸರೋಜ ಅವರ ಮನೆಯೂ ನೆಲಸಮಗೊಳ್ಳುವದರಲ್ಲಿ ಸಂಶಯವಿಲ್ಲ.