ಮಡಿಕೇರಿ, ಆ. 2: ಸದಾ ಕಾರ್ಯ ಒತ್ತಡದಲ್ಲಿರುವ ಪತ್ರಕರ್ತರು ಹಾಗೂ ಕೆಸರು ಗದ್ದೆಯಲ್ಲಿ ಒಮ್ಮೆಯೂ ನಡೆದಾಡಿದ ಅನುಭವ ಹೊಂದಿರದ ವಿದ್ಯಾರ್ಥಿಗಳು ಶುಕ್ರವಾರ ಕೆಸರು ಗದ್ದೆಯಲ್ಲಿ ಸಂಭ್ರಮಿಸಿದರು.ಇಬ್ನಿ ಸ್ಪ್ರಿಂಗ್ಸ್ ಕಾಟೇಜ್ ಹಾಗೂ ಗ್ರೀನ್ ಸಿಟಿ ಫೋರಂ ಆಶ್ರಯದಲ್ಲಿ ಇಬ್ನಿವಳವಾಡಿ ಗ್ರಾಮದಲ್ಲಿರುವ ಚೈಯ್ಯಂಡ ಸತ್ಯ ಗಣಪತಿ ಅವರ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ನಾಲ್ಕು ತಂಡಗಳು ಕೆಸರುಗದ್ದೆ ಹ್ಯಾಂಡ್ ಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಅತ್ಯಂತ ರೋಮಾಂಚನಕಾರಿಯಾಗಿದ್ದ ಪಂದ್ಯಾವಳಿಯಲ್ಲಿ ಪತ್ರಕರ್ತರು ತಮ್ಮ ದೈನಂದಿನ ಜಂಜಾಟ ಮರೆತು, ಕೆಸರುಗದ್ದೆ ಕ್ರೀಡಾಕೂಟದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿ ದ್ದರು.

ಗದ್ದೆಯಲ್ಲಿ ಭತ್ತದ ನಾಟಿ ಮಾಡುವದರ ಮೂಲಕ ಪತ್ರಕರ್ತರು ಪುಳಕಿತರಾದರು. ಹಲವು ಪತ್ರಕರ್ತರು ಪ್ರಥಮ ಬಾರಿಗೆ ಭತ್ತದ ನಾಟಿ ಮಾಡಿದ ಅನುಭವ ಪಡೆದರು. ಕೆಲವು ಪತ್ರಕರ್ತರು ನಾಟಿ ಮಾಡಲು ಕಷ್ಟ ಪಟ್ಟರು. ಅನುಭವಿ ಪತ್ರಕರ್ತರಿಂದ ನಾಟಿ ಮಾಡುವದನ್ನು ಕಲಿತುಕೊಂಡು ನಾಟಿ ಮಾಡಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಓಡಾಡುವದರ ಮೂಲಕ ಸಂಭ್ರಮಿಸಿದರು. ಹಲವು ವಿದ್ಯಾರ್ಥಿಗಳು ಆತಂಕದಲ್ಲಿ ಗದ್ದೆಗೆ ಇಳಿದರು. ಫುಟ್ಬಾಲ್, ಥ್ರೋಬಾಲ್, ಹಗ್ಗಜಗ್ಗಾಟದಲ್ಲಿ ಎಳೆದಾಡುವದರ ಮೂಲಕ ಸಂತಸ ಪಟ್ಟರು. ತಮ್ಮ ಇಚ್ಛೆಯಂತೆ ಭತ್ತದ ನಾಟಿ ಮಾಡಿದರು. ಯಾವ ವಿದ್ಯಾರ್ಥಿಗೂ ನಾಟಿ ಮಾಡುವ ಅನುಭವ ಇರಲಿಲ್ಲ. ತಮ್ಮ ಇಚ್ಛೆಯಂತೆ ಗದ್ದೆಯಲ್ಲಿ ನಾಟಿ ಮಾಡಿದರು. ಕೆಲವು ಮಕ್ಕಳಿಗೆ ನಾಟಿ ಮಾಡಲು ಅಗೆ

(ಮೊದಲ ಪುಟದಿಂದ) ಸಿಗದಿದ್ದಾಗ ಮೊದಲು ಪತ್ರಕರ್ತರು ನಾಟಿ ಮಾಡಿದ್ದನ್ನು ಕಿತ್ತು ಮತ್ತೆ ಬೇರೆಡೆ ನಾಟಿ ಮಾಡಿದರು. ಗದ್ದೆಯಲ್ಲಿ ಓಡಾಡುತ್ತಾ, ಒಬ್ಬರನ್ನೊಬ್ಬರು ತಳ್ಳುತ್ತಾ, ಬೀಳುತ್ತಾ, ಏಳುತ್ತಾ, ಮಕ್ಕಳು ನಾಟಿ ಮಾಡಿದ ಗದ್ದೆ ಆನೆ ಧಾಳಿಗೆ ತುತ್ತಾದ ಗದ್ದೆಯಂತಿತ್ತು... ಗದ್ದೆ ಸರಿಪಡಿಸಲು ಮಾಲೀಕರಿಗೆ ಒಂದು ವಾರವಾದರೂ ಬೇಕಾಗಬಹುದು. ಅಷ್ಟರಮಟ್ಟಿಗೆ ಮಕ್ಕಳು ಭೂತಾಯಿಯ ಮಡಿಲಲ್ಲಿ ಸಂಭ್ರಮಿಸಿದರು. ನಂತರ ಚಳಿಯಲ್ಲಿ ನಡುಗುತ್ತಾ, ನೈಸರ್ಗಿಕ ನೀರಿನಲ್ಲಿ ಮೈ ತೊಳೆದುಕೊಂಡು ಆಯೋಜಕರು ವ್ಯವಸ್ಥೆ ಮಾಡಿದ್ದ ಬಿಸಿಬಿಸಿ ಬೆಲ್ಲದ ಕಾಫಿ ಹೀರಿ ಬೆಚ್ಚಗಾದರು...

ನಮಗೆ ಪ್ರೈಜ್ ಇಲ್ಲ...?

ಮಕ್ಕಳ ಮನಸು ಎಷ್ಟೊಂದು ಮುಗ್ಧ ಎಂಬದಕ್ಕೆ ಈ ಮಕ್ಕಳು ಸಾಕ್ಷಿಯಾದರು. ಕೆಸರಿನಲ್ಲಿ ಆಡಿದ ಪತ್ರಕರ್ತರಿಗೆ ಬಹುಮಾನಗಳನ್ನು ತಂದು ಜೋಡಿಸಿಡಲಾಗಿತ್ತು. ಅಲ್ಲಿಗೆ ಬಂದ ಮಕ್ಕಳು ‘ಇದು ಯಾರಿಗೆ ಅಂಕಲ್?’ ಅಂತ ಕೇಳಿದರು.

ಇದು ಹಗ್ಗಜಗ್ಗಾಟ, ಹ್ಯಾಂಡ್‍ಬಾಲ್‍ನಲ್ಲಿ ಗೆದ್ದವರಿಗೆ ಅಂತ ಹೇಳಿದೆವು. ‘ನಾವೂ ಹಗ್ಗ ಎಳೆದೆವು, ಹ್ಯಾಂಡ್‍ಬಾಲ್ ಆಡಿದೆವು..., ನಮಗೆ ಪ್ರೈಜ್ ಇಲ್ವಾ ಅಂಕಲ್...?’ ಅಂತ ಮುಗ್ಧ ಮನಸ್ಸಿನಿಂದ ಕೇಳಿದರು ಆ ಪುಟಾಣಿಗಳು.

ಫಲಿತಾಂಶ

ಕೆಸರುಗದ್ದೆ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಕಿಶೋರ್ ರೈ ನಾಯಕತ್ವದ ಟೀಮ್ ನಾಟಿ ಬಾಯ್ಸ್ ತಂಡ ಪ್ರಥಮ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯಿತು. ತಂಡದಲ್ಲಿ ಉದಯ್ ಮೊಣ್ಣಪ್ಪ, ನವೀನ್ ಡಿಸೋಜ, ಮಣಿಕಂಠ, ಇಸ್ಮಾಯಿಲ್ ಕಂಡಕೆರೆ, ಸುರೇಶ್, ಲೋಹಿತ್ ಇದ್ದರು. ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಮನೋಜ್ ನಾಯಕತ್ವದ ತಂಡದ ದ್ವಿತೀಯ ಸ್ಥಾನ ಪಡೆಯಿತು. ತಂಡದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸುವರ್ಣ ಮಂಜು, ವಿನಯ್, ಜಾಕಿ ದಿವಾಕರ್, ಲೋಕೇಶ್ ಕಾಟಕೇರಿ ಇದ್ದರು.

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕೆ.ಎ. ಆದಿತ್ಯ ನಾಯಕತ್ವದ ಪವರ್ ಬಾಯ್ಸ್ ಪ್ರಥಮ ಸ್ಥಾನ ಪಡೆಯಿತು. ತಂಡದಲ್ಲಿ ವಿಕಾಸ್, ರಾಕೇಶ್, ವಿನೋದ್, ಅಜ್ಜಮಕ್ಕಡ ವಿನು, ಎಂ.ಎನ್. ನಾಸೀರ್, ವಿಘ್ನೇಶ್ ಭೂತನಕಾಡು, ಕುಡೆಕಲ್ ಸಂತೋಷ್ ಇದ್ದರು. ಅನು ಕಾರ್ಯಪ್ಪ ನಾಯಕತ್ವದ ತಂಡ ಹ್ಯಾಂಡ್ ಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ತಂಡದಲ್ಲಿ ಪ್ರೇಮ್ ಕಸ್ತೂರಿ, ನವೀನ್ ಸುವರ್ಣ, ಗೋಪಾಲ್ ಸೋಮಯ್ಯ, ಸುರ್ಜಿತ್, ರೋಷನ್, ಮಲ್ಲಿಕಾರ್ಜನ್ ಇದ್ದರು.

ಬಹುಮಾನ ವಿತರಣೆ

ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಕೇಶ್, ನಿರ್ದೇಶಕರಾದ ಪಿ.ಕೃಷ್ಣಮೂರ್ತಿ ಇದ್ದರು.