ಮಡಿಕೇರಿ, ಆ. 1: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ಸ್ತ್ರೀ ಮತ್ತು ಪ್ರಸೂತಿ ಆರೋಗ್ಯ ವಿಭಾಗದ ವತಿಯಿಂದ ಗರ್ಭಿಣಿಯರಿಗೆ ರಕ್ತಹೀನತೆ ತಡೆಗಟ್ಟುವದು, ಇದರಿಂದಾಗುವ ತೊಂದರೆಗಳು ರೋಗದ ಚಿಕಿತ್ಸಾ ಕ್ರಮದ ವಿಷಯದ ಮೇಲೆ ಕುರಿತು ವಿಚಾರ ಸಂಕಿರಣ ನಡೆಯಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಕೊಡಗು ಜಿಲ್ಲೆಯ ಹಿಂದುಳಿದ ಪ್ರದೇಶ ಮತ್ತು ಹಾಡಿಯಲ್ಲಿನ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸಲು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಆರೋಗ್ಯ ಸೇವೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಮಾತನಾಡಿ, ಜಿಲ್ಲೆಯ ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆಗಳಿಗೆ ಸಾಧ್ಯವಾದಷ್ಟು ಆರೋಗ್ಯ ಅಧಿಕಾರಿಗಳನ್ನು ನಿಯೋಜಿಸಲು ಪ್ರಯತ್ನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇತರೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಂದ ಆಗಮಿಸಿದಂತಹ ತಜ್ಞ ವೈದ್ಯರುಗಳು ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ರಕ್ತ ಹೀನತೆ ತಡೆಗಟ್ಟುವದು, ಇದರಿಂದಾಗುವ ತೊಂದರೆಗಳು, ರೋಗದ ಚಿಕಿತ್ಸಾ ಕ್ರಮದ ವಿಷಯ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವೈದ್ಯರು ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಾಯಿತು.
ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಮೇರಿ ನಾಣಯ್ಯ ಅವರು ಮಾತನಾಡಿದರು. ನಿವೃತ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ದಮಯಂತಿ ಹೆಚ್.ಆರ್ ಅವರನ್ನು ಸನ್ಮಾನಿಸಲಾಯಿತು.
ಈ ವಿಚಾರ ಸಂಕೀರ್ಣದಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್‍ನ ವೀಕ್ಷಕರಾಗಿ ಡಾ.ಹರೀಶ್ ಅವರು ಕಾರ್ಯನಿರ್ವಹಿಸಿದರು. ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ಸೇರಿದಂತೆ ಕೊಡಗು ಮತ್ತು ಇತರೆ ಜಿಲ್ಲೆಯ ವೈದ್ಯರುಗಳು ಮತ್ತು ಜಿಲ್ಲೆಯ ಎಲ್ಲಾ ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.
ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಎಸ್. ಮಂಜುನಾಥ ಅವರು ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿಯಾದ ಡಾ. ಸೋಮಶೇಖರ್ ಅವರು ವಂದಿಸಿದರು.