ಮಡಿಕೇರಿ, ಆ. 1: ಅನಾಥ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪಡೆಯುವದರಿಂದ, ಸಮಾಜದಲ್ಲಿ ಕುಟುಂಬದ ಸುಧಾರಣೆ ಮತ್ತು ಬದಲಾವಣೆ ತರಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದತ್ತು ಪ್ರಕ್ರಿಯೆ ಮತ್ತು ಸಮಸ್ಯೆಗಳ ಕುರಿತು ವೈದ್ಯಾಧಿಕಾರಿಗಳು, ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಬೇಕು. ಮಕ್ಕಳ ರಕ್ಷಣೆ ಮತ್ತು ಪೋಷಣೆ ಕಡೆ ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಸಲಹೆ ಮಾಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸೂರಜ್ ಅವರು ಮಾತನಾಡಿ ಯಾವದೇ ವ್ಯಕ್ತಿ ಅಥವಾ ಸಂಸ್ಥೆಯಾಗಲಿ ಅಧಿಕೃತವಾಗಿ ದತ್ತು ಪಡೆಯಬೇಕು. ದತ್ತು ಸ್ವೀಕಾರ ಮಾಡುವ ದಂಪತಿಗಳು ಮದುವೆಯಾಗಿ ಕನಿಷ್ಟ ಎರಡು ವರ್ಷ ವೈವಾಹಿಕ ಜೀವನ ನಡೆಸಿರಬೇಕು. ದಂಪತಿಗಳಿಗೆ ಕನಿಷ್ಟ 25 ವರ್ಷ ವಯಸ್ಸಾಗಿರಬೇಕು ಎಂದು ಅವರು ಮಾಹಿತಿ ನೀಡಿದರು.
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ವಕೀಲರಾದ ಬಾಬುರಾಜ್ ಅವರು ಮಾತನಾಡಿ ಅನಧಿಕೃತವಾಗಿ ದತ್ತು ನೀಡುವದು ಮತ್ತು ಪಡೆಯುವದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಕಾನೂನು ಬದ್ಧವಾಗಿ ದತ್ತು ಪಡೆಯುವಂತಾಗಬೇಕು ಎಂದರು.
ದತ್ತು ಪಡೆದ ಮಗು, ದತ್ತು ಪಡೆದ ಪೋಷಕರ ಕಾನೂನು ಬದ್ಧ ಮಗು ಆಗುತ್ತದೆ. ದತ್ತು ಪಡೆದ ಮಗುವಿನ ಎಲ್ಲಾ ಹಕ್ಕುಗಳು, ಸವಲತ್ತುಗಳು ಮತ್ತು ಜವಾಬ್ದಾರಿಗಳು ಜೈವಿಕ ಮಗುವಿನಂತೆಯೇ ಇರುತ್ತವೆ ಎಂದರು. ಅನಾಥ ಮಗು, ಪರಿತ್ಯಕ್ತ ಮಗು, ಶರಣಾದ/ ಒಪ್ಪಿಸಿದ ಮಗುವನ್ನು ದತ್ತು ತೆಗೆದುಕೊಳ್ಳಬಹುದಾಗಿದೆ ಎಂದರು.
ದತ್ತು ಪಡೆಯಲು ವಿವಾಹಿತ ದಂಪತಿಗಳ ಸಂದರ್ಭದಲ್ಲಿ ಗಂಡ ಹೆಂಡತಿ ಇಬ್ಬರು ದತ್ತು ಪಡೆಯಲು ಒಪ್ಪಬೇಕು. ಯಾವದೇ ಲಿಂಗ ಮಗುವನ್ನು ದತ್ತು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಅಬ್ದುಲ್ ರಿಯಾಜ್ ಅವರು ಮಾತನಾಡಿ ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ನಡೆಯಬೇಕು. ದತ್ತು ಪಡೆದ ಮಕ್ಕಳನ್ನು ಭಿಕ್ಷೆಗೆ ದೂಡುವದು ಸಹ ಕಂಡುಬರುತ್ತಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಗುವನ್ನು ದತ್ತು ಪಡೆಯುವ ಸಂದರ್ಭದಲ್ಲಿ ವಾಸಸ್ಥಳ ದೃಢೀಕರಣ ಪತ್ರ, ಆದಾಯ ಪ್ರಮಾಣ ಪತ್ರ, ವಿವಾಹ ನೋಂದಣಿ ಪತ್ರ, ಮಗುವನ್ನು ದತ್ತು ಪಡೆಯುವ ದಂಪತಿಯ ಜನ್ಮ ದಿನಾಂಕ ದೃಢೀಕರಣ ಪತ್ರ, ವೈದ್ಯಕೀಯ ಅರ್ಹತಾ ಪ್ರಮಾಣಪತ್ರ ಮತ್ತಿತರವನ್ನು ಸಲ್ಲಿಸಬೇಕಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಪ್ರಭಾವತಿ ಅವರು ಶಿಶುಗಳ ರಕ್ಷಣೆಗೆ ಸಂಬಂಧಿಸಿದಂತೆ ಮಮತೆಯ ತೊಟ್ಟಿಲು ಕುರಿತು ಮಾಹಿತಿ ನೀಡಿದರು.
ಮಕ್ಕಳ ಮಾರಾಟ ಘೋರ ಅಪರಾಧ, ಮಾರಾಟ ಮಾಡುವವರಿಗೂ ಹಾಗೂ ಕೊಳ್ಳುವವರಿಗೆ 5 ವರ್ಷಗಳ ಸೆರೆಮನೆ ವಾಸದ ಜೊತೆಗೆ ರೂ. 1 ಲಕ್ಷ ಗಳವರೆಗೆ ದಂಡ ವಿಧಿಸಲಾಗುತ್ತದೆ. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದಲ್ಲಿ 7 ವರ್ಷಗಳವರೆಗೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದರು.
ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿಯೇ ಇರುವ ವಿಶೇಷ ದತ್ತು ಕೇಂದ್ರ, ಜಿಲ್ಲಾ ಆಸ್ಪತ್ರೆ ಹಾಗೂ ಬಾಲ ಮಂದಿರಗಳಲ್ಲಿನ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಿ ಎಂದು ಅವರು ಸಲಹೆ ಮಾಡಿದರು. ಪ್ರಧಾನಮಂತ್ರಿ ಮಾತೃ ವಂದನ ಯೋಜನೆ ಮತ್ತು ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಕುರಿತು ಮಾಹಿತಿ ನೀಡಿದರು.
ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಉಷಾ ಅಯ್ಯಣ್ಣ, ನಮಿತಾ ಆರ್. ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸವಿತಾ, ಜಿಲ್ಲಾ ವಿಕಲಚೇತನರ ಅಧಿಕಾರಿ ಸಂಪತ್ ಕುಮಾರ್, ವಕೀಲರಾದ ದಿವ್ಯ, ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ, ಮಹೇಶ್, ವೈದ್ಯಾಧಿಕಾರಿಗಳು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕಿಯರು, ಮಕ್ಕಳ ಪಾಲನಾ ಸಂಸ್ಥೆಯ ಪ್ರತಿನಿಧಿಗಳು ಇತರರು ಇದ್ದರು.