ಮಡಿಕೇರಿ, ಆ. 1: ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶನ ದಂತೆ; ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಇಂದು ನಗರದ ಕೋಟೆ ಆವರಣ ದೊಂದಿಗೆ ಅರಮನೆಯ ಖುದ್ದು ಪರಿಶೀಲನೆ ನಡೆಸಿದರು. ಈ ವೇಳೆ ಪುರಾತತ್ವ ಇಲಾಖೆಯ ಅಧೀಕ್ಷಕಿ ಮೂರ್ತೇಶ್ವರಿ ಅವರು ಪ್ರತಿಕ್ರಿಯೆ ನೀಡಿ; ಮಡಿಕೇರಿ ಕೋಟೆ ಆವರಣದ ಭಾರತೀಯ ಪುರಾತತ್ವ ಇಲಾಖೆಯ ಅಧೀನವಿದ್ದು; ಒಳಗಡೆ ಕೊಡಗು ಜಿಲ್ಲಾಡಳಿತ ಸ್ವಾಧೀನದಲ್ಲಿ ಅರಮನೆ ಹಾಗೂ ಇತರ ಕಟ್ಟಡಗಳು ಇರುವದಾಗಿ ಸ್ಪಷ್ಟಪಡಿಸಿದರು.ನ್ಯಾಯಾಲಯದ ನಿರ್ದೇಶನ ದಂತೆ ಇಂದು ಇಡೀ ಪರಿಸರವನ್ನು ವೀಕ್ಷಿಸಿ ವಾಸ್ತವದ ಬಗ್ಗೆ ವರದಿಯನ್ನು ಸಲ್ಲಿಸಲಾಗುವದು ಎಂದರು. ಅಲ್ಲದೆ ಕೋಟೆಯ ಅರಮನೆಯೊಳಗೆ ಕಾರ್ಯನಿರ್ವಹಿಸುತ್ತಿರುವ ಕಚೇರಿ ಗಳನ್ನು ಆಯ ಇಲಾಖೆಯವರು ತೆರವುಗೊಳಿಸಿದರೆ; ಕೇಂದ್ರ ಸರಕಾರಕ್ಕೆ ಪುರಾತತ್ವ ಇಲಾಖೆಯಿಂದ ಅಭಿವೃದ್ಧಿ ಸಂಬಂಧ ಕ್ರಿಯಾಯೋಜನೆ ಸಲ್ಲಿಸಿ ಸಂರಕ್ಷಣೆಗೆ ಕ್ರಮವಹಿಸಲಾಗುವದು ಎಂದರು.ಪ್ರಸಕ್ತ ಭಾರತೀಯ ಪುರಾತತ್ವ ಇಲಾಖೆಯ ಸ್ವಾಧೀನವಿಲ್ಲದೆ; ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಹಾಗೂ ಜಿಲ್ಲಾಡಳಿತದ ಅಧೀನವಿರುವ ಅರಮನೆಯನ್ನು ಕೇಂದ್ರದಿಂದ ರಿಪೇರಿ ಕೈಗೊಳ್ಳಲು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗದೆಂದು ನೆನಪಿಸಿದರು.ಸಂತರಿಂದಲೂ ಮನವಿ : ಈ ಸಂದರ್ಭ ಕೋಟೆ ಆವರಣದ ಅರಮನೆ ಸಂರಕ್ಷಿಸಲು; ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಖುದ್ದು ಹಾಜರಿದ್ದು; ತತ್ಕಾಲಕ್ಕೆ ಅರಮನೆ ಮಳೆಯಿಂದ ಕುಸಿಯದಂತೆ ಕ್ರಮಕ್ಕೆ ಬೇಡಿಕೆ ಇಟ್ಟರು. ಜಿಲ್ಲೆಯ ಸಂತರಾದ ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ವೀರಾಜಪೇಟೆ ಕನ್ನಡ ಮಠದ ಶ್ರೀ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಶಿವಪ್ಪ, ಪದಾಧಿಕಾರಿಗಳಾದ ಕಾಂತರಾಜು, ಹಾಲಪ್ಪ, ಶಾಂಭಶಿವಮೂರ್ತಿ, ರತೀಶ್, ಮಧು, ರುದ್ರಪ್ರಸನ್ನ ಮೊದಲಾದವರು ಮನವಿ ಸಲ್ಲಿಸಿ, ಅರಮನೆ ಉಳಿಸಲು ಒತ್ತಾಯಿಸಿದರು.

ಗ್ರೀನ್ ಸಿಟಿ ಫೋರಂ ಪ್ರಮುಖರಾದ ಜಯಚಿಣ್ಣಪ್ಪ, ಚೆಯ್ಯಂಡ ಸತ್ಯ, ಕಾವೇರಿ ಸೇನೆಯ ರವಿಚಂಗಪ್ಪ ಸೇರಿದಂತೆ ಹೆಚ್ಚಿನ ಸಾರ್ವಜನಿಕರು ಮನವಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.

ಇಲಾಖೆಗಳಿಗೆ ಕಿವಿಮಾತು : ಅರಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ವಸ್ತು ಸಂಗ್ರಹಾಲಯ, ಗ್ರಂಥಾಲಯ ಮುಂತಾದ ಇಲಾಖೆಗಳಿಂದ ಅರಮನೆ ಕಟ್ಟಡದ ನಿರ್ವಹಣೆಗೆ ಕನಿಷ್ಟ ಗಮನ ಹರಿಸಿ ಕಾಲ ಕಾಲಕ್ಕೆ ರಿಪೇರಿ ಕೈಗೊಳ್ಳಬೇಕಿತ್ತು ಎಂದು ಅಧೀಕ್ಷಕಿ ಮೂರ್ತೇಶ್ವರಿ ಕಿವಿಮಾತು ಹೇಳಿದರು. ಈ ಸಂದರ್ಭ ಸಹಾಯಕ ಅಧೀಕ್ಷಕ ರಮೇಶ್ ಹಾಗೂ ಕರ್ನಾಟಕ ಪ್ರಾಚ್ಯವಸ್ತು ಇಲಾಖೆಯ ರೇಖಾ, ಲೋಕೋಪಯೋಗಿ ಇಂಜಿನಿಯರ್ ಇಬ್ರಾಹಿಂ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.