ಮಡಿಕೇರಿ, ಆ. 2: ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕೊಡಗಿನ ಜನರ ಕಣ್ಣೀರು ಒರೆಸಲು ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬದ್ಧವಾಗಿದೆ. ಪ್ರಧಾನಿ ಮೋದಿಯವರ ಮಾದರಿಯಲ್ಲೇ ಈ ಸರಕಾರ ಕೂಡ ಅಭಿವೃದ್ಧಿ ಪರ ಕಾಳಜಿ ಹೊಂದಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ದೊರಕಿದ್ದರೂ, 14 ತಿಂಗಳ ಕಾಲ ಸರಕಾರ ರಚನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಜನತೆ ಆಶೀರ್ವಾದ ಹಾಗೂ ದೇವರ ದಯೆಯಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು, ಈ ಸರಕಾರ ವಿಶೇಷವಾಗಿ ಕೊಡಗಿನ ಬಗ್ಗೆ ಕಾಳಜಿ ಹೊಂದಿದೆ ಎಂದು ಹೇಳಿದರು.

ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಗಮನಹರಿಸುವ ನಿಟ್ಟಿನಲ್ಲಿ ರಾಜ್ಯದ ಸಮ್ಮಿಶ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿತ್ತು. ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಧಿಕಾರ ವನ್ನು ರಚಿಸಿದ್ದರೂ, ಅನುದಾನ ನೀಡದೆ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. ಆದರೆ ಇದೀಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ತಕ್ಷಣ ಕೊಡಗಿನ ಅಭಿವೃದ್ಧಿಗೆ 550 ಕೋಟಿ ರೂ.ಗಳ ಅನುದಾನ ನೀಡಲು ಮುಂದಾಗಿದ್ದಾರೆ ಎಂದು ಭಾರತೀಶ್ ತಿಳಿಸಿದರು.

ಜಿಲ್ಲೆಯ ಜನರ ಭಾವನೆಗಳಿಗೆ ವಿರುದ್ಧವಾಗಿ ರಾಜ್ಯ ಸರಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಯನ್ನು ರದ್ದು ಮಾಡುವ ಮೂಲಕ ಸರಕಾರ ಕೊಡಗಿನ ಜನರ ಭಾವನೆಗಳಿಗೆ ಗೌರವ ನೀಡಿದೆ. ಇದರ ನಡುವೆಯೂ ಕೆಲವರು ಟಿಪ್ಪು ಜಯಂತಿ ಆಚರಿಸುವದಾಗಿ ಹೇಳಿಕೆಗಳನ್ನು ನೀಡುತ್ತಿರುವದು ಸರಿಯಲ್ಲ. ಈ ನಾಡಿನ ಜನರ ಭಾವನೆಗಳಿಗೆ ಧಕ್ಕೆಯಾಗುವ ಹೇಳಿಕೆಗಳನ್ನು ಯಾರೂ ನೀಡುವದು ಬೇಡ ಎಂದು ಮನವಿ ಮಾಡಿದರು.

ಜಿಲ್ಲೆಯ ಸಂತ್ರಸ್ತರ ಬಗ್ಗೆ ಹಾಗೂ ಜನತೆಯ ಭಾವನೆಗಳ ಬಗ್ಗೆ ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿರುವ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ ಅವರುಗಳಿಗೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸುವದಾಗಿಯೂ ಅವರು ಇದೇ ಸಂದರ್ಭ ಹೇಳಿದರು.

ಜಿಲ್ಲೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಬಿರುಸಿನಿಂದ ನಡೆಯುತ್ತಿದ್ದು, ಶನಿವಾರದಿಂದ ಈ ಕಾರ್ಯ ಮತ್ತಷ್ಟು ಚುರುಕುಗೊಳ್ಳಲಿದೆ. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 35 ಸಾವಿರ ಮಂದಿ ಸದಸ್ಯತ್ವ ಪಡೆದಿದ್ದು, ಮುಂದಿನ ದಿನಗಳಲ್ಲಿ ಗುರಿ ತಲಪಲಿ ರುವದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸಾಲಮನ್ನಾಕ್ಕೆ ಒತ್ತಾಯ

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎಸ್.ಬಿ. ರವಿಕುಶಾಲಪ್ಪ ಅವರು ಮಾತನಾಡಿ, ರೈತರ ಪರ ಹೋರಾಟಗಾರ ಯಡಿಯೂರಪ್ಪ ಅವರು ಮುಖ್ಯ ಮಂತ್ರಿಗಳಾಗಿರು ವದರಿಂದ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿದೆ ಎಂಬದಕ್ಕೆ ಕೊಡಗಿನ ಅಭಿವೃದ್ಧಿಗೆ 550 ಕೋಟಿ ರೂ. ಗಳನ್ನು ಘೋಷಿಸಿರುವದೇ ಸಾಕ್ಷಿ ಯಾಗಿದೆ. ಕಳೆದ ಸಾಲಿನಲ್ಲಿ ಸಂಭವಿಸಿದ ಜಲಪ್ರಳಯ ಹಾಗೂ ಭೂಕುಸಿತದಿಂದ ಕೊಡಗಿನ 8 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 58 ಗ್ರಾಮಗಳ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರೂ, ಹಿಂದಿನ ಸಮ್ಮಿಶ್ರ ಸರಕಾರ ಈ ಪ್ರದೇಶಗಳ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿರುವದನ್ನು ಬಿಟ್ಟರೆ ಇನ್ನೇನನ್ನೂ ಮಾಡಿಲ್ಲ. ಸಂತ್ರಸ್ತರಿಗಾಗಿ ಮನೆಗಳನ್ನು ನಿರ್ಮಿಸಿದ್ದರೂ, ಯಾರಿಗೂ ಅಲ್ಲಿ ವಾಸ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸುಳ್ಳು ಹೇಳಿಕೊಂಡೇ ಕಾಲ ಕಳೆದಿದ್ದಾರೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ 8 ಗ್ರಾಮ ಪಂಚಾಯಿತಿಗಳ ರೈತರು ಇಂದು ಸಂಕಷ್ಟದಲ್ಲಿದ್ದು, ಅವರುಗಳು ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲ ಮರು ಪಾವತಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ಈ ಮೊತ್ತ ಸುಮಾರು 200 ಕೋಟಿ ರೂ.ಗಳ ಒಳಗೆ ಇರಲಿದ್ದು, ರಾಜ್ಯ ಸರಕಾರ ಈ ಸಾಲವನ್ನು ಮನ್ನಾ ಮಾಡಲು ಮುಂದಾಗಬೇಕು ಎಂದು ರವಿಕುಶಾಲಪ್ಪ ಆಗ್ರಹಿಸಿದರು.

ಸಂತ್ರಸ್ತರ ಸಮಾವೇಶ

ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯ ಹಾಗೂ ಭೂ ಕುಸಿತದಿಂದ ಸಂತ್ರಸ್ತರಾದವರ ಹಲವು ಬೇಡಿಕೆಗಳು ಇನ್ನೂ ಈಡೇರದೆ ಸಂತ್ರಸ್ತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲಗಾರ ಸಂತ್ರಸ್ತರಿಗೆ ಈಗಾಗಲೇ ಬ್ಯಾಂಕ್‍ಗಳು ನೋಟೀಸ್ ಜಾರಿ ಮಾಡಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಸಂತ್ರಸ್ತರ ಸಮಾವೇಶವನ್ನು ನಡೆಸಿ ಆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಸಾಲಮನ್ನಾಕ್ಕೆ ಒತ್ತಾಯಿಸಲಾಗುವದು ಎಂದೂ ಅವರು ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ವಕ್ತಾರ ನಾಪಂಡ ಕಾಳಪ್ಪ, ಮಡಿಕೇರಿ ನಗರ ಅಧ್ಯಕ್ಷ ಮಹೇಶ್ ಜೈನಿ ಹಾಗೂ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಕೆ. ಅಪ್ಪಣ್ಣ ಉಪಸ್ಥಿತರಿದ್ದರು.