ಮಡಿಕೇರಿ, ಆ.2 : ಟಿಪ್ಪು ಜಯಂತಿ ಸಂದರ್ಭ ಸಂಭವಿಸಿದ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಒಂದು ಕಡೆಯ ಪ್ರಕರಣವನ್ನು ಮಾತ್ರ ರದ್ದುಗೊಳಿಸಿರುವದು ಸರಿಯಾದ ಕ್ರಮವಲ್ಲವೆಂದು ಟೀಕಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ, ಎರಡೂ ಕಡೆಯ ಮೊಕದ್ದಮೆಗಳನ್ನು ವಜಾಗೊಳಿಸ ಬೇಕೆಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ‘ಟಿಪ್ಪು ಜಯಂತಿ’ಯನ್ನು ರದ್ದುಗೊಳಿಸುವ ಮೂಲಕ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣದ ಮೊದಲ ಹೆಜ್ಜೆಯನ್ನಿರಿಸಿದೆ ಎಂದು ಆರೋಪಿಸಿದರು.

ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದ್ವೇಷ ರಾಜಕಾರಣ ಮಾಡುವದಿಲ್ಲವೆಂದು ಹೇಳಿದ್ದರಾದರೂ, ಟಿಪ್ಪು ಜಯಂತಿಯನ್ನು ರದ್ದು ಮಾಡುವ ಮೂಲಕ ತಮಗಿರುವ ಧರ್ಮ ಜಾತಿಗಳೆಡೆಗಿನ ಭೇದ ಭಾವವನ್ನು ತೋರಿರುವದಾಗಿ ಟೀಕಿಸಿದರು.

ಬ್ರಿಟೀಷರ ವಿರುದ್ಧ ಹೋರಾಟವನ್ನು ಮಾಡುವ ಮೂಲಕ ಸ್ವಾತಂತ್ರ್ಯದ ಕಿಚ್ಚು ಮೂಡಿಸಿದ್ದ ಟಿಪ್ಪು ಸುಲ್ತಾನ್, ತನ್ನ ಆಡಳಿತದಲ್ಲಿ ಸಮಾಜ ಸುಧಾರಣೆಯ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದ. ಇಂತಹ ಮಹಾನ್ ವ್ಯಕ್ತಿಯನ್ನು ಜಾತಿ ಧರ್ಮಗಳ ಆಧಾರದಲ್ಲಿ ನೋಡುವ ಮೂಲಕ ಜಯಂತಿಯನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯವೆಂದು ಹೇಳಿದರು.

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಹಲವರ ವಿರುದ್ಧ ಪ್ರಕರಣಗಳು ದಾಖಲಾಗಿದೆ. ಇವುಗಳಲ್ಲಿ ಯಾವದೋ ಒಂದು ಕಡೆಯ ಪ್ರಕರಣಗಳನ್ನಷ್ಟೆ ರದ್ದು ಪಡಿಸುವ ಕ್ರಮ ಸರಿಯಲ್ಲ. ಆ ಸಂದರ್ಭ ದಾಖಲಾಗಿರುವ ಎರಡೂ ಕಡೆಗಳ ಎಲ್ಲಾ ಪ್ರಕರಣಗಳನ್ನು ರದ್ದು ಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಸೋಲಿಗೆ ಕಾರಣ ಇವಿಎಂ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಳ್ಳುವದಕ್ಕೆ ಬಿಜೆಪಿ ಪಕ್ಷ ಕಾರಣವಲ್ಲ. ಬದಲಾಗಿ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‍ಗಳೆಂದು ಅವರು ಅಭಿಪ್ರಾಯಪಟ್ಟರು.

ಮುಂದಿನ ಸಾಲಿನ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ ಗ್ರಾಮ ಪಂಚಾಯ್ತಿ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಈಗಿನಿಂದಲೇ ಅಗತ್ಯ ಸಿದ್ಧತೆಗಳಲ್ಲಿ ತೊಡಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಜಿಲ್ಲಾ ವಕ್ತಾರ ಟಿ.ಈ.ಸುರೇಶ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ಸಾಮಾಜಿಕ ಜಾಲ ತಾಣ ಘಟಕದ ಜಿಲ್ಲಾ ಉಸ್ತುವಾರಿ ಹೊಸೂರು ಸೂರಜ್ ಉಪಸ್ಥಿತರಿದ್ದರು.