ಕೂಡಿಗೆ, ಆ. 1: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಪ್ರಮುಖ ಕೆರೆ ಆನೆಕೆರೆಯ ತೂಬನ್ನು ಮುಚ್ಚುವಂತೆ ಸಭೆಗೆ ಗ್ರಾ.ಪಂ. ಸದಸ್ಯೆ ಫಿಲೋಮಿನಾ ತಿಳಿಸಿದರು.

ಆನೆಕೆರೆಯಲ್ಲಿ ಈಗಾಗಲೇ ನೀರಿನ ಸಂಗ್ರಹ ಕಡಿಮೆ ಮಟ್ಟದಲ್ಲಿರುವದರಿಂದ ದನ-ಕರುಗಳಿಗೆ ಕುಡಿಯಲು ನೀರಿಲ್ಲ ದಂತಾಗಿದೆ. ಆದ್ದರಿಂದ ತೂಬನ್ನು ಮುಚ್ಚಿ ಕೆರೆಯಲ್ಲಿ ನೀರು ಸಂಗ್ರಹವಾಗುವಂತೆ ಮಾಡಬೇಕು ಎಂದು -ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ 14ನೇ ಹಣಕಾಸಿನ ಕ್ರಿಯಾಯೋಜನೆ ತಯಾರಿಸಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಪಡಿತರ ವಸ್ತುಗಳನ್ನು ಬೆರಳಚ್ಚು ನೀಡಿ ಪಡೆದುಕೊಳ್ಳಬೇಕು ಎಂಬ ಹೊಸ ನೀತಿಯಂತೆ ಗ್ರಾಹಕರು ಪದಾರ್ಥಗಳನ್ನು ಪಡೆಯಲು ಬೆರಳಚ್ಚು ನೀಡುವ ಸಂದರ್ಭ ಬೆರಳಚ್ಚು ಗುರುತು ಸಿಗದೆ ಸಮಸ್ಯೆ ಉಂಟಾಗುತ್ತಿದೆ.

ಅಂತ್ಯೋದಯ ಪಡಿತರ ವಸ್ತುಗಳು ಸಿಗುತ್ತಿಲ್ಲ. ಇದರಿಂದ ಗ್ರಾಹಕರು ಪರದಾಡು ವಂತಾಗುತ್ತಿದೆ ಎಂದು ಸದಸ್ಯ ಬಾಸ್ಕರ್ ನಾಯಕ್ ಪ್ರಸ್ತಾಪಿಸಿದರು.

ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, ಸಭೆಯಲ್ಲಿ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಅದರನ್ವಯ ಕಾರ್ಯಗತಗೊಳಿಸಲು ಕಾರ್ಯೋನ್ಮುಖರಾಗುತ್ತೇವೆ. ಅಲ್ಲದೇ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಪಂಚಾಯಿತಿ ಕಾರ್ಯೋ ನ್ಮುಖವಾಗಲಿದೆ. ಪ್ರಮುಖವಾಗಿ ಶುಚಿತ್ವಕ್ಕೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು ಎಂದರು.

ಈ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯೆಷಾ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಬೇಕು ಎಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯರು ಇದ್ದರು.