ಗುಡ್ಡೆಹೊಸೂರು, ಆ. 1: ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ಭಾರತಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸಮುದಾಯಭವನದಲ್ಲಿ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಲೀಲಾವತಿ ಮತ್ತು ಸದಸ್ಯರು ಹಾಜರಿದ್ದರು. ಅಲ್ಲದೆ ತಾ.ಪಂ. ಸದಸ್ಯೆ ಪುಷ್ಪ ಜನಾರ್ಧನ್ ಹಾಗೂ ನೋಡಲ್ ಅಧಿಕಾರಿ ಕಾವ್ಯ ಉಪಸ್ಥಿತರಿದ್ದರು. ಪಿ.ಡಿ.ಓ. ಶ್ಯಾಂ ಸರ್ವರನ್ನು ಸ್ವಾಗತಿಸಿದರು. ಗುಡ್ಡೆಹೊಸೂರು ಶಾಲಾ ಮಕ್ಕಳಿಂದ ನಾಡಗೀತೆಯೊಂದಿಗೆ ಸಭೆ ಆರಂಭವಾಯಿತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಪಂಚಾಯಿತಿ ವತಿಯಿಂದ ವಿತರಿಸಲಾಯಿತು. ಸಭೆಯಲ್ಲಿ ನೀರಾವರಿ ಇಲಾಖಾಧಿಕಾರಿಗಳನ್ನು ರೈತರು ತರಾಟೆಗೆ ತೆಗೆದು ಕೊಂಡರು. ಚಿಕ್ಲಿಹೊಳೆ ಜಲಾಶಯ ದಿಂದ ನಾಲೆಗಳಿಗೆ ನೀರನ್ನು ಬಿಡದೆ ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿರುವದಾಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರು ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದರು.

ಹಲವು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಾದ ಜಿ.ಎಂ. ಮಣಿ ಕುಮಾರ್, ಬಿ.ಕೆ. ಮೋಹನ್, ಮನು, ಕಂದಾಮಣಿ, ಧನಪಾಲ, ಮಲ್ಲಿಕಾರ್ಜುನ, ಬಿ.ಸಿ. ಪ್ರದಿ ಪ್ರಕಾಶ್ ಸಭೆಯ ಗಮನಕ್ಕೆ ತಂದರು. ಪಿ.ಡಿ.ಓ. ಶ್ಯಾಂ 2018-19ನೇ ಸಾಲಿನಲ್ಲಿ ನಡೆದ ಒಟ್ಟು ಕಾಮಗಾರಿಯ ಪಟ್ಟ್ಟಿಯನ್ನು ಸಭೆಯ ಮುಂದಿಟ್ಟರು. ಅಲ್ಲದೆ ಗುಡ್ಡೆಹೊಸೂರಿನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ಗುಡ್ಡೆಹೊಸೂರಿನ ವೃತ್ತದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಪ್ರಯತ್ನಿಸುವದಾಗಿ ಅಧ್ಯಕ್ಷೆ ಕೆ.ಎಸ್. ಭಾರತಿ ತಿಳಿಸಿದರು.