ಮಡಿಕೇರಿ, ಆ. 1: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಮ್ .ಕಾರ್ಯಪ್ಪ ಕಾಲೇಜಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರ್ಯಾಕ್ಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜರುಗಿತು.

ರೋಟರಿ ಮಿಸ್ಟಿಹಿಲ್ಸ್‍ನ ನಿರ್ದೇಶಕ ಕೆ.ಕೆ.ವಿಶ್ವನಾಥ್ ನೂತನ ಆಡಳಿತ ಮಂಡಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ಕಲಿ, ಕೇಳಿ ತಿಳಿ ಎಂಬುದರ ಜತೆಗೆ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಿ ಸಂಭ್ರಮಿಸು ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯ ಕ್ರಮಗಳನ್ನು ಆಯೋಜಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಟಿ.ಡಿ. ತಿಮ್ಮಯ್ಯ ಮಾತನಾಡಿ, ರೋಟರ್ಯಾಕ್ಟ್‍ನ ಸೇವಾ ಮನೋಭಾವ ಶ್ಲಾಘನೀಯವಾದದ್ದು ಎಂದು ಹೇಳಿದರು.

ರೋಟರ್ಯಾಕ್ಟ್‍ನ ಸಂಯೋಜಕ ಡಾ.ಶ್ರೀಧರ ಹೆಗಡೆ, ಸೇವೆ ಎಂಬದು ಹೇಗಿರಬೇಕು ಹಾಗೂ ನಾಯಕತ್ವ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಪ್ಪ ಕಾಲೇಜಿನ ರೋಟರ್ಯಾಕ್ಟ್‍ನ ನೂತನ ಅಧ್ಯಕ್ಷರಾಗಿ ಶಾಹಿದ್, ಕಾರ್ಯದರ್ಶಿಯಾಗಿ ಸಫ್ರೀನಾ ಪ್ರಮಾಣ ವಚನ ಸ್ವೀಕರಿಸಿದರು.

ರೋಟರಿ ಮಿಸ್ಟಿಹಿಲ್ಸ್‍ನ ಅಧ್ಯಕ್ಷ ಎಂ.ಆರ್. ಜಗದೀಶ್, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ನಿರ್ದೇಶಕರಾದ ಎಂ. ಧನಂಜಯ, ಜಿ.ಆರ್. ರವಿಶಂಕರ್, ಶ್ರೀಹರಿ, ಪೂಣಚ್ಚ, ಕಾರ್ಯಪ್ಪ, ನಿರ್ಗಮಿತ ರೋಟರ್ಯಾಕ್ಟ್ ಅಧ್ಯಕ್ಷ ಅಲೆನ್, ಕಾರ್ಯದರ್ಶಿ ಲಿಪಿಶ್ರೀ ಪಾಲ್ಗೊಂಡಿದ್ದರು. ಕಾಂಚನ್ ನಿರೂಪಿಸಿದರು.